UN NETWORKS
ಉಳ್ಳಾಲ: ಬಿಜೆಪಿ ಪಕ್ಷ ಅಸ್ತಿತ್ವಕ್ಕೆ ಬಂದ 35 ವರ್ಷಗಳಲ್ಲಿ ಆ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿದ್ದು ಕೇವಲ ಒಂದೇ ಒಂದು ಬಾರಿ. ಮೂರು ಬಾರಿಯಷ್ಟೇ ಬೇರೆ ಪಕ್ಷಗಳಿಗೆ ಗೆಲ್ಲುವ ಅವಕಾಶ ಸಿಕ್ಕಿದ್ದು ಬಿಟ್ಟರೆ ಬರೋಬ್ಬರಿ 50 ವರ್ಷಗಳ ಕಾಲ ಅಲ್ಲಿ ಆಳ್ವಿಕೆ ನಡೆಸಿದ್ದು ಕಾಂಗ್ರೆಸ್ ಪಕ್ಷ. ಆದರೆ ಪ್ರತೀ ಬಾರಿ ಸೋಲನುಭವಿಸುವ ಬಿಜೆಪಿ ಈ ಬಾರಿ ಇಡೀ ಕ್ಷೇತ್ರವನ್ನು ಸಂಘಪರಿವಾರದ ಕೈಗೆ ಕೊಟ್ಟು ಗೆಲುವಿಗೆ ಹೊಸ ಫಾರ್ಮುಲಾ ರೂಪಿಸಿದೆ. ಈ ಮೂಲಕ ಈ ರಾಜ್ಯದ ಆಹಾರ ಸಚಿವ ಯು.ಟಿ.ಖಾದರ್ ಸೋಲಿಗೆ ಖೆಡ್ಡಾ ತೋಡಿದೆ.
ಅದರಲ್ಲೂ ಯು.ಟಿ.ಖಾದರ್ ಮತ್ತು ಅವರ ತಂದೆ ಯು.ಟಿ.ಫರೀದ್ ಈ ಕ್ಷೇತ್ರದಲ್ಲಿ ಒಟ್ಟು ಏಳು ಬಾರಿ ಗೆಲುವಿನ ನಗೆ ಬೀರಿದ್ದು, ಅವರನ್ನು ಸೋಲಿಸಲು ಬಿಜೆಪಿ 1999ರಿಂದ ಈ ವರೆಗೆ ಮಾಡಿದ ಎಲ್ಲಾ ಯೋಜನೆಗಳು ವೈಫಲ್ಯ ಕಂಡಿದೆ. ಹೀಗಾಗಿಯೇ ಅಪ್ಪನ ಸಾವಿನ ನಂತರವೂ ಕ್ಷೇತ್ರದಲ್ಲಿ ಯು.ಟಿ.ಖಾದರ್ ಗೆಲುವು ಕಾಣುತ್ತಿದ್ದಾರೆ. ಆದರೆ ಈ ಬಾರಿ ಶತಾಯಗತಾಯ ಹೇಗಾದರೂ ಮಾಡಿ ಗೆಲ್ಲಲೇ ಬೇಕು ಎಂಬ ಯೋಜನೆ ರೂಪಿಸಿರುವ ಬಿಜೆಪಿ ಹಿಂದುತ್ವದ ಓಟ್ ಬ್ಯಾಂಕ್ ಗಟ್ಟಿಗೊಳಿಸುವ ಕೆಲಸಕ್ಕೆ ಮುಂದಾಗಿದೆ. ಇದಕ್ಕಾಗಿ ಸ್ವತಃ ಆರ್ಎಸ್ಎಸ್ ಈ ಕ್ಷೇತ್ರದಲ್ಲಿ ಫೀಲ್ಡಿಗೆ ಇಳಿದಿದ್ದು, ಪರಿವಾರ ಸಂಘಟನೆಗಳ ಮೂಲಕ ಹಿಂದೂ ಓಟ್ ಬ್ಯಾಂಕ್ ಭದ್ರವಾಗಿಸುವ ಕೆಲಸ ಕಳೆದ ಒಂದು ತಿಂಗಳಿನಿಂದ ಸದ್ದಿಲ್ಲದೇ ನಡೆಯುತ್ತಿದೆ.
ಅಲ್ಪಸಂಖ್ಯಾತರೇ ನಿರ್ಣಾಯಕರಾಗಿರುವ ಕ್ಷೇತ್ರ!
ಈ ಹಿಂದೆ ಉಳ್ಳಾಲ ವಿಧಾನ ಸಭಾ ಕ್ಷೇತ್ರವಾಗಿದ್ದ ಈಗಿನ ಮಂಗಳೂರು ಕ್ಷೇತ್ರದಲ್ಲಿ ಬರೋಬ್ಬರಿ 1,86,965 ಮತದಾರರಿದ್ದಾರೆ. ಇದರಲ್ಲಿ ಒಂದು ಲಕ್ಷದಷ್ಟು ಹಿಂದೂ ಮತದಾರರಿದ್ದರೆ ಉಳಿದ ಮತಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದು. ಹೀಗಾಗಿಯೇ ಅಂದಾಜು 80 ಸಾವಿರಕ್ಕೂ ಮಿಕ್ಕಿದ ಅಲ್ಪಸಂಖ್ಯಾತ ಓಟ್ಗಳೇ ಇಲ್ಲಿ ನಿರ್ಣಾಯಕ ಅನಿಸಿಕೊಂಡಿದೆ. ಈ ನಡುವೆ ಹಿಂದೂ ಮತ ವಿಭಜನೆಯ ಪರಿಣಾಮ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರತೀ ಬಾರಿ ಗೆಲುವಿನ ನಗೆ ಬೀರುತ್ತಿದೆ. ಹೀಗಾಗಿ ಒಂದು ಲಕ್ಷದಷ್ಟಿರುವ ಹಿಂದೂ ಮತಗಳನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಸಂಘಪರಿವಾರ ಈ ಬಾರಿ ಅಖಾಡಕ್ಕೆ ಇಳಿದಿದೆ. ಕಳೆದ ಒಂದು ತಿಂಗಳಿನಿಂದಲೇ ಪರಿವಾರದ ಬೇರೆ ಬೇರೆ ಸಂಘಟನೆಗಳು ಕಾರ್ಯ ಆರಂಭಿಸಿದೆ. ಅದರಲ್ಲೂ ವಿಎಚ್ಪಿ, ಬಜರಂಗದಳ ಮತ್ತು ಸ್ವತಃ ಆರ್ಎಸ್ಎಸ್ ಕಾರ್ಯಕರ್ತರೇ ಹಿಂದೂ ಓಟ್ಬ್ಯಾಂಕ್ ಭದ್ರವಾಗಿಸುವ ಕೆಲಸ ಮಾಡುತ್ತಿದ್ದಾರೆ. ಸದ್ಯ ಬಿಜೆಪಿ ಇಲ್ಲಿ ಪ್ರಚಾರದಲ್ಲಿ ತೊಡಗಿಸಕೊಂಡಿದ್ದರೂ ಪ್ರತ್ಯೇಕವಾಗಿ ಸಂಘಪರಿವಾರ ಗೌಪ್ಯ ಬೈಠಕ್ಗಳ ಮೂಲಕ ಕೆಲಸ ಆರಂಭಿಸಿದೆ. ಇದೇ ಕಾರಣಕ್ಕೆ ಈ ಹಿಂದೆ ಬಜರಂಗದಳದ ದಕ್ಷಿಣ ಪ್ರಾಂತ ಸಂಚಾಲಕರಾಗಿದ್ದ, ಸದ್ಯ ವಿಎಚ್ಪಿ ವಿಭಾಗ ಕಾರ್ಯದರ್ಶಿಯಾಗಿರುವ ಶರಣ್ ಪಂಪ್ವೆಲ್ಗೆ ಕ್ಷೇತ್ರದ ಉಸ್ತುವಾರಿಯನ್ನು ವಹಿಸಲಾಗಿದೆ.
14 ಚುನಾವಣೆಗಳಲ್ಲಿ ಹತ್ತು ಬಾರಿ ಗೆದ್ದಿದ್ದು ಮುಸ್ಲಿಮರೇ!
ಆಗಿನ ಉಳ್ಳಾಲವಾಗಿದ್ದ ಈಗಿನ ಮಂಗಳೂರು ವಿಧಾನ ಸಭಾಕ್ಷೇತ್ರಕ್ಕೆ 1957ರಿಂದ 2013ರವರೆಗೆ ಒಟ್ಟು ಒಟ್ಟು 14 ಬಾರಿ ಚುನಾವಣೆ ನಡೆದಿದೆ. ಅಚ್ಚರಿ ಎಂದರೆ ಈ 14 ಚುನಾವಣೆಗಳಲ್ಲಿ 10 ಬಾರಿ ಮುಸ್ಲಿಂ ಅಭ್ಯರ್ಥಿಗಳೇ ಆರಿಸಿ ಬಂದಿದ್ದಾರೆ. ಅದರಲ್ಲೂ ಈಗಿನ ಶಾಸಕರಾಗಿರುವ ಯು.ಟಿ.ಖಾದರ್ ಅವರ ತಂದೆ ಯು.ಟಿ.ಫರೀದ್ ಅವರೇ ನಾಲ್ಕು ಬಾರಿ ಆಯ್ಕೆಯಾಗಿದ್ದರೆ ಯು.ಟಿ.ಖಾದರ್ ಮೂರು ಬಾರಿ ಸತತ ಗೆಲುವು ಕಂಡಿದ್ದಾರೆ. ಇನ್ನುಳಿದಂತೆ ಬಿ.ಎಂ ಇದ್ದಿನಬ್ಬ 1967, 1985 ಮತ್ತು 198ಿ9ರಲ್ಲಿ ಇಲ್ಲಿ ಗೆಲವು ಕಾಣುವ ಮೂಲಕ ಮತ್ತೆ ಮತ್ತೆ ಈ ಕ್ಷೇತ್ರದಲ್ಲಿ ಮುಸ್ಲಿಂ ಓಟ್ ಬ್ಯಾಂಕ್ ಗಟ್ಟಿಯಾಗಿದೆ ಎನ್ನುವುದು ಸಾಬೀತಾಗಿದೆ.
ಎರಡು ಬಾರಿ ಗೆದ್ದಿದ್ದ ಸಿಪಿಎಂ, ಒಂದೇ ಬಾರಿ ಬಿಜೆಪಿ!
1957ರಿಂದಲೇ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಆಗಿನ ಕಾಲಕ್ಕೆ ಕಾಂಗ್ರೆಸ್ಗೆ ನೇರ ಎದುರಾಳಿಯಾಗಿ ಗುರುತಿಸಿಕೊಂಡಿದ್ದು ಸಿಪಿಎಂ ಪಕ್ಷ. 1957ರಿಂದ 1989ರವರೆಗೆ ಇಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ದ ಸಿಪಿಎಂ ತೊಡೆತಟ್ಟುವ ಮೂಲಕ ಎರಡು ಬಾರಿ ಕಾಂಗ್ರೆಸ್ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕಿತ್ತು. 1962ರ ಚುನಾವಣೆಯಲ್ಲಿ ಸಿಪಿಎಂ ಅಭ್ಯರ್ಥಿ ಕೃಷ್ಣ ಶೆಟ್ಟಿ ಎಂಬವರು 17725 ಮತಗಳನ್ನು ಪಡೆದುಕಾಂಗ್ರೆಸ್ನ ಬಿ.ಎಂ.ಇದ್ದಿನಬ್ಬರನ್ನ 813 ಮತಗಳ ಅಂತರದಿಂದ ಸೋಲಿಸಿದ್ದರು. ಬಳಿಕ ಮತ್ತೆ 1983ರಲ್ಲಿ ಸಿಪಿಎಂ ಅಭ್ಯರ್ಥಿ
ಪಿ.ರಾಮಚಂದ್ರ ರಾವ್ ಕಾಂಗ್ರೆಸ್ನ ಕೆ.ಎಸ್.ಮಹಮ್ಮದ್ ಮಸೂದ್ 2520 ಮತಗಳಿಂದ ಸೋಲಿಸಿ ಗೆಲುವು ಕಂಡಿದ್ದರು. ಆದರೆ ಎರಡು ಬಾರಿ ಗೆಲುವು ಕಂಡಿದ್ದ ಸಿಪಿಎಂ ಬಳಿಕ ಈ ಕ್ಷೇತ್ರದಲ್ಲಿ ಕ್ಷೀಣಿಸತೊಡಗಿದ ಪರಿಣಾಮ ಕಾಂಗ್ರೆಸ್ಗೆ ಎದುರಾಳಿಯಾಗಿ ಬಿಜೆಪಿ ಪಕ್ಷ ಎದ್ದು ನಿಂತಿತ್ತು. ಇದರ ಪರಿಣಾಮ 1994ರ ಚುನಾವಣೆಯಲ್ಲಿ ಬಿಜೆಪಿಯ ಕೆ.ಜಯರಾಮ ಶೆಟ್ಟಿ ಕಾಂಗ್ರೆಸ್ನ ಕೆ.ಎಸ್.ಮಹಮ್ಮದ್ ಮಸೂದ್ ರನ್ನ 18817 ಮತಗಳಿಗೆ ಸೋಲಿಸುವ ಮೂಲಕ ಬಿಜೆಪಿ ಮೊದಲ ಜಯ ದಾಖಲಿಸಿತ್ತು. ಆದರೆ 1994ರ ಗೆಲುವನ್ನು ಹೊರತುಪಡಿಸಿ ಬಿಜೆಪಿ ತನ್ನ ಇತಿಹಾಸದ 35 ವರ್ಷಗಳಲ್ಲಿ ಮತ್ತ ಈ ಕ್ಷೇತ್ರದಲ್ಲಿ ಗೆಲುವು ಕಾಣಲು ಸಾಧ್ಯವಾಗಲೇ ಇಲ್ಲ.
1957-2013ರವರೆಗಿನ ಕ್ಷೇತ್ರ ಪರಿಚಯ
1957ರಿಂದ 1972ರ ವಿಧಾನ ಸಭಾ ಚುನಾವಣೆಯವರೆಗೂ ಈ ಕ್ಷೇತ್ರವನ್ನು ಮಂಗಳೂರು-2( ಚೋಟಾ ಮಂಗಳೂರು) ಎಂದೇ ಕರೆಯಲಾಗುತ್ತಿತ್ತು. ಆದರೆ ಬಳಿಕ ಕ್ಷೇತ್ರ ಪುನರ್ವಿಂಗಡೆಯಿಂದಾಗಿ 1978ರಿಂದ 2007ರವರೆಗೆ ಈ ಕ್ಷೇತ್ರ ಉಳ್ಳಾಲ ವಿಧಾನಸಭಾ ಕ್ಷೇತ್ರ ಎನ್ನುವ ಹೆಸರಿನಿಂದ ಚಾಲ್ತಿಗೆ ಬಂದಿತ್ತು. ಈ ಮಧ್ಯೆ ಮತ್ತೆ ಕ್ಷೇತ್ರ ಪುನರ್ವಿಂಗಡನೆಯಾಗಿ 2008ರ ಬಳಿಕ ಮಂಗಳೂರು ವಿಧಾನ ಸಭಾ ಕ್ಷೇತ್ರ ಎನ್ನುವ ಹೆಸರು ಪಡೆಯಿತು. ಇನ್ನು 1957ರಿಂದ 2013ರವರೆಗೆ ಈ ಕ್ಷೇತ್ರದ ಸೋಲು ಗೆಲುವಿನ ಲೆಕ್ಕಾಚಾರ ಹೀಗಿದೆ..
1957- ಮಂಗಳೂರು-2
ಗಜಾನನ ಪಂಡಿತ್( ಕಾಂಗ್ರೆಸ್)-ಗೆಲುವು- 20332
ಬಿ.ವಿ.ಕಕ್ಕಿಲಾಯ(ಸಿಪಿಐ)- ಸೋಲು-14526
ಅಂತರ-5806
1962- ಮಂಗಳೂರು 2
ಕೃಷ್ಣ ಶೆಟ್ಟಿ(ಸಿಪಿಐ)-ಗೆಲುವು-17725
ಬಿ.ಎಂ.ಇದ್ದಿನಬ್ಬ(ಕಾಂಗ್ರೆಸ್)-16912
ಅಂತರ-813
1967-ಮಂಗಳೂರು 2
ಬಿ.ಎಂ.ಇದ್ದಿನಬ್ಬ( ಕಾಂಗ್ರೆಸ್)-21365
ಎ.ಕೆ.ಶೆಟ್ಟಿ(ಸಿಪಿಎಂ)-14051
ಅಂತರ- 7314
1972-ಮಂಗಳೂರು 2
ಯು.ಟಿ.ಫರೀದ್(ಕಾಂಗ್ರೆಸ್)- 30048
ಎ.ಕೃಷ್ಣ ಶೆಟ್ಟಿ(ಸಿಪಿಎಂ)- 14383
ಅಂತರ- 15655
1978-ಉಳ್ಳಾಲ
ಯು.ಟಿ.ಫರೀದ್(ಕಾಂಗ್ರೆಸ್)-30174
ಪಿ.ರಾಮಚಂದ್ರ ರಾವ್(ಸಿಪಿಎಂ)- 12445
ಅಂತರ- 17729
1983-ಉಳ್ಳಾಲ
ಪಿ.ರಾಮಚಂದ್ರ ರಾವ್(ಸಿಪಿಎಂ)-16423
ಕೆ.ಎಸ್.ಮಹಮ್ಮದ್ ಮಸೂದ್(ಕಾಂಗ್ರೆಸ್)-13903
ಅಂತರ-2520
1985-ಉಳ್ಳಾಲ
ಬಿ.ಎಂ.ಇದ್ದಿನಬ್ಬ(ಕಾಂಗ್ರೆಸ್)- 26184
ಪಿ.ರಾಮಚಂದ್ರ ರಾವ್(ಸಿಪಿಎಂ)- 17157
ಅಂತರ- 9027
1989-ಉಳ್ಳಾಲ
ಬಿ.ಎಂ.ಇದ್ದಿನಬ್ಬ( ಕಾಂಗ್ರೆಸ್)- 25785
ಕೆ.ಆರ್.ಶ್ರೀಯಾನ್(ಸಿಪಿಎಂ)- 20371
ಅಂತರ- 5414
1994-ಉಳ್ಳಾಲ
ಕೆ.ಜಯರಾಮ ಶೆಟ್ಟಿ(ಬಿಜೆಪಿ)- 24412
ಕೆ.ಎಸ್.ಮಹಮ್ಮದ್ ಮಸೂದ್(ಕಾಂಗ್ರೆಸ್)- 18817
ಅಂತರ- 5595
1999-ಉಳ್ಳಾಲ
ಯು.ಟಿ.ಫರೀದ್(ಕಾಂಗ್ರೆಸ್)- 50134
ಕೆ.ಜಯರಾಮ ಶೆಟ್ಟಿ( ಬಿಜೆಪಿ)- 34881
ಅಂತರ- 15253
2004-ಉಳ್ಳಾಲ
ಯು.ಟಿ.ಫರೀದ್(ಕಾಂಗ್ರೆಸ್)-47839
ಚಂದ್ರಶೇಖರ್ ಉಚ್ಚಿಲ್(ಬಿಜೆಪಿ)- 40491
ಅಂತರ- 7348
2007-ಉಳ್ಳಾಲ
ಯು.ಟಿ.ಖಾದರ್(ಕಾಂಗ್ರೆಸ್)- 46,271
ಚಂದ್ರಶೇಖರ್ ಉಚ್ಚಿಲ್( 38,239)
ಅಂತರ- 8,032
2008-ಮಂಗಳೂರು ಕ್ಷೇತ್ರ
ಯು.ಟಿ.ಖಾದರ್(ಕಾಂಗ್ರೆಸ್)- 50718
ಕೆ.ಪದ್ಮನಾಭ ಕೊಟ್ಟಾರಿ( ಬಿಜೆಪಿ)- 43669
ಅಂತರ- 7049
2013-ಮಂಗಳೂರು ಕ್ಷೇತ್ರ
ಯು.ಟಿ.ಖಾದರ್(ಕಾಂಗ್ರೆಸ್)- 69450
ಚಂದ್ರಹಾಸ್ ಉಳ್ಳಾಲ್( ಬಿಜೆಪಿ)- 40339
ಅಂತರ- 29111