UN NETWORKS
ಕೊಣಾಜೆ: ಕಲೆಗೆ ಪ್ರೋತ್ಸಾಹ ನೀಡಿ ಬೆಳೆಸಲು ಪ್ರತಿಯೊಬ್ಬರು ಮುಂದಾಗಬೇಕಿದೆ, ಈ ವಿಚಾರದಲ್ಲಿ ಅನುದಾನ ನೀಡಲು ಸರ್ಕಾರ ಚೌಕಾಶಿ ಮಾಡುವುದು ಸಲ್ಲದು ಎಂದು ಬೆಂಗಳೂರು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಅಭಿಪ್ರಾಯಪಟ್ಟರು.
ಕಲೆ, ಸಾಹಿತ್ಯ ಅನುತ್ಪಾದಕ ಸಂಗತಿಯಲ್ಲ, ಸರ್ಕಾರ ಅನುದಾನ ನೀಡುವ ಸಂದರ್ಭ ಅಕಾಡೆಮಿ, ಕಲೆ, ಸಾಹಿತ್ಯದ ಚಟುವಟಿಕೆ ನಿರ್ಲಕ್ಷಿಸಿದೆ, ಹೆಚ್ಚು ಅನುದಾನ ನೀಡಿ ಪ್ರೋತ್ಸಾಹಿಸಬೇಕಾಗಿದೆ. ಯಕ್ಷಗಾನ ಬಯಲಾಟ ಅಕಾಡಮಿಯನ್ನು ಎರಡು ಪ್ರತ್ಯೇಕ ಅಕಾಡೆಮಿಗಳಾಗಿ ಬೇರ್ಪಡಿಸಿದ್ದು ಸ್ವಾಗತಾರ್ಹ. ಅದೇ ರೀತಿ ಎಲ್ಲಾ ಅಕಾಡೆಮಿಗಳಿಗೆ ನೀಡುವಂತೆ ಕೋಟಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಅಧ್ಯಕ್ಷತೆ ವಹಿಸಿದ್ದರು. ಅಂಕಣಕಾರ ನಾ.ಕಾರಂತ ಪೆರಾಜೆ ಅಭಿನಂದನಾ ಭಾಷಣ ಮಾಡಿದರು. ಯಕ್ಷಗಾನ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕ ಪ್ರೊ.ಕೆ.ಚಿನ್ನಪ್ಪ ಗೌಡ ಉಪಸ್ಥಿತರಿದ್ದರು.
ಅಧ್ಯಯನ ಕೇಂದ್ರದ ಸಂಯೋಜಕ ಧನಂಜಯ ಕುಂಬಳೆ ಸ್ವಾಗತಿಸಿದರು. ಸತೀಶ್ ಕೊಣಾಜೆ ವಂದಿಸಿದರು. ಡಾ.ರಾಜಶ್ರೀ ಕಾರ್ಯಕ್ರಮ ನಿರೂಪಿಸಿದರು.
ಯಕ್ಷಗಾನ ಕಲಾವಿದರಿಗೆ ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ ಬಡಗುತಿಟ್ಟಿನ ಹಿರಿಯ ಯಕ್ಷಗಾನ ಭಾಗವತ ಮತ್ಯಾಡಿ ನರಸಿಂಹ ಶೆಟ್ಟಿ, ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಪೆರುವೋಡಿ ನಾರಾಯಣ, ಹಾಸ್ಯಗಾರ ಹಾಗೂ ಸ್ತ್ರೀ ವೇಷಧಾರಿ ಪಾತಾಳ ವೆಂಕಟರಮಣ ಭಟ್ ಅವರಿಗೆ 25 ಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆವುಳ್ಳ `ಯಕ್ಷಮಂಗಳ ಪ್ರಶಸ್ತಿ’ ಮತ್ತು ವಿದ್ವಾಂಸ ಡಾ.ಎನ್.ನಾರಾಯಣ ಶೆಟ್ಟಿ ಶಿಮಂತೂರು ಅವರ `ಯಕ್ಷಗಾನ ಛಂದೋಂಬುಧಿ’ ಗ್ರಂಥಕ್ಕೆ 10 ಸಾವಿರ ನಗದು, ಪ್ರಶಸ್ತಿ ಪತ್ರವುಳ್ಳ ಯಕ್ಷಮಂಗಳ ಕೃತಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.