Site icon Ullalavani

ಸಚಿವ ಖಾದರ್ ಅಧಿಕಾರ ಸ್ವೀಕರಿಸಿದ ಬಳಿಕ ಪವಿತ್ರ ಕ್ಷೇತ್ರ ಉಳ್ಳಾಲ ದರ್ಗಾದಲ್ಲಿ ರಕ್ತ ಹರಿದಿದೆ : ಸತೀಶ್ ಕುಂಪಲ

UN NETWORKS

ಉಳ್ಳಾಲ: ಸಚಿವ ಖಾದರ್ ಅಧಿಕಾರ ಸ್ವೀಕರಿಸಿದ ನಂತರ ಎಲ್ಲಾ ಧರ್ಮೀಯರು ಶ್ರದ್ಧೆಯಿಂದ ಆರಾಧಿಸುವ ಇತಿಹಾಸ ಪ್ರಸಿದ್ಧ ಉಳ್ಳಾಲ ಸೈಯ್ಯಿದ್ ಮದನಿ ದರ್ಗಾದಲ್ಲಿ ತಲವಾರು ಕಾಳಗ ನಡೆದು ಪವಿತ್ರ ಕ್ಷೇತ್ರದಲ್ಲಿ ರಕ್ತ ಹರಿದಿರುವುದು ಬೇಸರದ ವಿಚಾರ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ ಹೇಳಿದರು.

ತೊಕ್ಕೊಟ್ಟುವಿನಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ವತಿಯಿಂದ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ದರ್ಗಾ ಆಡಳಿತ ವಿಚಾರಕ್ಕೆ ಸಂಬಂಧಿಸಿ ಇತ್ತಂಡಗಳ ಮಧ್ಯೆ ಗಲಾಟೆಗಳು ನಡೆಯುತ್ತಾ ಪವಿತ್ರ ಸ್ಥಳದಲ್ಲಿ ರಕ್ತ ಹರಿದಿದೆ. ಇದು ಇಲ್ಲಿನ ಶಾಸಕ ಹಾಗೂ ಸಚಿವ ಖಾದರ್ ಅಧಿಕಾರ ವಹಿಸಿಕೊಂಡ ನಂತರ ನಡೆದಿದೆ. ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಎಲ್ಲಾ ಲಕ್ಷಣಗಳು ಗೋಚರಿಸಿದೆ. ಸರ್ವಧರ್ಮೀಯರ ಜತೆಗೆ ಬೆರೆತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಅಭ್ಯರ್ಥಿ ಸಂತೋಷ್ ರೈ ಬೋಳಿಯಾರ್ ಅವರನ್ನು ಎಲ್ಲರೂ ಬೆಂಬಲಿಸಲಿದ್ದಾರೆ. ನಾಮಪತ್ರ ಸಲ್ಲಿಸುವ ಸಂದರ್ಭ ನೆರೆದ ಸಾವಿರದಷ್ಟು ಕಾರ್ಯಕರ್ತರಿಂದಾಗಿ ಗೆಲ್ಲುವ ಸಂಕೇತವನ್ನು ಮತದಾರ ತೋರಿಸಿದ್ದಾರೆ.

ಕ್ಷೇತ್ರದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಯಿಂದ ಹಿಡಿದು ಒಳಚರಂಡಿ, ರಸ್ತೆ ಸಹಿತ ಮೂಲಭೂತ ಸೌಕರ್ಯಗಳ ಕೊರತೆ ಇನ್ನೂ ಇದೆ. ಕ್ಷೇತ್ರದ ಮುಡಿಪುವಿನ ಇನ್ಫೋಸಿಸ್, ಮಂಗಳೂರು ವಿಶ್ವವಿದ್ಯಾನಿಲಯದಲ್ಲಾಗಲಿ ಸ್ಥಳೀಯರ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿತ್ತು. ಸುಮಾರು 20,000 ಮಂದಿಯಷ್ಟು ನೇಮಕವಾಗಬೇಕಾಗಿದ್ದ ಸಂಸ್ಥೆಗಳಲ್ಲಿ ಕೇವಲ 3,000 ದಷ್ಟು ಮಂದಿ ಯುವಸಮುದಾಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಲವರು ಕಲಿತರು ಉದ್ಯೋಗವಿಲ್ಲದೆ ಪರದಾಡುವಂತಹ ವಾತಾವರಣ ಇದೆ. ಸೋಮೇಶ್ವರ ಪಂಚಾಯಿತಿನ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಪಂಚಾಯಿತಿಯನ್ನು ಮೇಲ್ದರ್ಜೆಗೆ ಏರಿಸುವ ಮೂಲಕ ಜನರನ್ನು ಅಭಿವೃದ್ಧಿ ಹೆಸರಿನಲ್ಲಿ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ ಕ್ಷೇತ್ರದಲ್ಲಿ ರಾಜ್ಯ ಸರಕಾರ ನೀಡಿದ ಚೂರಿ ಭಾಗ್ಯದಿಂದಾಗಿ ಯುವಕನೋರ್ವ ಕಿಡ್ನಿ ಕಳೆದುಕೊಂಡು ಈಗಲೂ ಡಯಾಲಿಸಿಸ್ ನಡೆಸುವಂತಹ ದುಸ್ಥಿತಿ ಇದೆ. ಲಾಭವನ್ನು ಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಜಾರಿಗೊಳಿಸಿರುವ ಸರಕಾರ , ಇಂದಿರಾ ಕ್ಯಾಂಟೀನ್ ನಲ್ಲಿ ಲಕ್ಷಾಂತರ ಸರಕಾರದ ಹಣ ದುರ್ಬಳಕೆ ನಡೆಸಿದೆ. ಹಿಂದೆ ಜಿ.ಪಂ ಸದಸ್ಯನಾಗಿದ್ದ ಅವಧಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ರೂಪುರೇಷೆ ಎಲ್ಲವನ್ನೂ ಸರಕಾರಕ್ಕೆ ನೀಡಲಾಗಿತ್ತು. ಆದರೆ ಸರಕಾರ ಬಂದ ನಂತರ ಅದನ್ನು ಮೂಲೆಗುಂಪಾಗಿಸಿ, ಇದೀಗ ಯೋಜನೆಯೇ ಇಲ್ಲದಂತೆ ಮಾಡಲಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಬೆಂಕಿ ಅವಘಢವಾದಲ್ಲಿ ಅಗ್ನಿ ಶಾಮಕ ಕಚೇರಿಯಿಲ್ಲ, ಸರಕಾರಿ ಐಟಿಐ, ಪಾಲಿಟೆಕ್ನಿಕ್ ಕಾಲೇಜುಗಳಿಲ್ಲ. ಮುಡಿಪು ಕುರ್ನಾಡು ಕಾಲೇಜಿನಲ್ಲಿ ಪದವಿಯನ್ನು ಆರಂಭಿಸಲಾಗಿದ್ದರೂ, ವಿದ್ಯಾರ್ಥಿಗಳು ಸೂಕ್ತ ಕಟ್ಟಡವಿಲ್ಲದೆ ಹೈಸ್ಕೂಲ್ ಮತ್ತು ಪಿಯುಸಿ ವಿದ್ಯಾರ್ಥಿಗಳ ತರಗತಿಯಲ್ಲೇ ಕುಳಿತುಕೊಳ್ಳುವಂತಾಗಿದೆ. ಕೇವಲ ಪ್ರಚಾರದ ರಾಜಕೀಯ ನಡೆಸುತ್ತಿದ್ದಾರೆ. ಎಲ್ಲಾ ಧರ್ಮೀಯರು ಜತೆಯಾದಲ್ಲಿ ಕ್ಷೇತ್ರದ ಅಭಿವೃದ್ಧಿಯಾಗಬಹುದು ಎಂದರು.

ಸುದ್ಧಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಮೋಹನರಾಜ್ ಕೆ.ಆರ್, ಮುಖಂಡರುಗಳಾದ ಚಂದ್ರಶೇಖರ್ ಉಚ್ಚಿಲ್, ನಮಿತಾ ಶ್ಯಾಂ, ಮನೋಜ್ ಆಚಾರ್ಯ, ಜೀವನ್ ಕೆರೆಬೈಲು ಉಪಸ್ಥಿತರಿದ್ದರು.

Exit mobile version