ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಲೋಕದಲ್ಲಿ ಯಾರೂ ಭಯೋತ್ಪಾದಕರಾಗಿ ಹುಟ್ಟಿಲ್ಲ. ಭಯೋತ್ಪಾದಕ ಎಂದರೆ ಏನು ಎಂಬುದನ್ನು ನೀವು ಅಂತರ್ಜಾಲದಲ್ಲಿ ಹುಡುಕಿದರೆ ಸಂಪೂರ್ಣ ಮಾಹಿತಿ ಲಭಿಸುತ್ತದೆ. ಇಸ್ಲಾಂ ಭಯೋತ್ಪಾದೆಯನ್ನು ಬಯಸುವುದಿಲ್ಲ. ಭಯೋತ್ಪಾದನೆಗೆ ಪ್ರೋತ್ಸಾಹ ಕೂಡಾ ನೀಡುತ್ತಿಲ್ಲ. ಆದರೆ ಕೆಲವರು ಇಸ್ಲಾಂ ಧರ್ಮದವರನ್ನು ಭಯೋತ್ಪಕರನ್ನಾಡಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಗುಜರಾತ್ ಹಜ್ ಕಮಿಟಿಯ ಅಧ್ಯಕ್ಷ ಸೂಫಿ ಎಂ.ಕೆ. ಚಿಸ್ತಿ ಹೇಳಿದರು.
ಅವರು ಉಳ್ಳಾಲದಲ್ಲಿ ನಡೆಯುತ್ತಿರುವ ಖುತುಬುಝ್ಝುಮಾನ್ ಹಝ್ರತ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ.) ರವರ 423ನೆಯ ವಾರ್ಷಿಕ ಹಾಗೂ 20ನೆಯ ಪಂಚವಾರ್ಷಿಕ ಉರೂಸ್ ಸಮಾರಂಭದ ಪ್ರಯುಕ್ತ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ನ್ಯಾಷನಲ್ ಪೀಸ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.
ಉಳ್ಳಾಲ ಖುತುಬುಝ್ಝುಮಾನ್ ಹಝ್ರತ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾದಲ್ಲಿ ಧರ್ಮದ ಜೋಡನೆಯ ಕಾರ್ಯ ನಡೆಯುತ್ತದೆಯೇ ಹೊರತು ವಿಭಜನೆಯ ಕಾರ್ಯ ನಡೆಯುತ್ತಿಲ್ಲ. ಲೋಕದಲ್ಲಿ ನಡೆಯುತ್ತಿರುವ ಕಾರ್ಯಗಳು, ಇನ್ನು ನಡೆಯಬೇಕಾದ ಕಾರ್ಯಗಳ ಬಗ್ಗೆ ಪ್ರವಾದಿಯವರು 1500ವರ್ಷಗಳ ಹಿಂದೆಯೇ ಬರೆದಿಟ್ಟಿದ್ದಾರೆ ಎಂದರು.
ಅಖಿಲ ಭಾರತ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್‍ನ ಉಪಾಧ್ಯಕ್ಷ ಅಬ್ದುಲ್ ರಶೀದ್ ಝೈನಿ ಮಾತನಾಡಿ, ಜಗತ್ತಿನಲ್ಲಿ ಅತ್ಯದಿಕ ಶಿಕ್ಷಣ ಕೇಂದ್ರವನ್ನು ಹೊಂದಿರುವ ದೇಶ ಭಾರತ. ಭಾರತದಲ್ಲಿ ಶಿಕ್ಷಣ ಕೇಂದ್ರ ಮತ್ತು ಶಿಕ್ಷಿತರೂ ಬಹಳಷ್ಟಿದರೂ ನೆಮ್ಮದಿಯನ್ನು ಭಾರತೀಯರು ಕಳಕೊಂಡಿದ್ದಾರೆ. 16 ಶತಮಾನದಲ್ಲಿ ಮಕ್ಕಾದಿಂದ ಶಾಂತಿಯ ಸಂದೇಶ ಸಾರಲು ಸಾದಾತ್‍ಗಳು ಭಾರತಕ್ಕೆ ಬಂದ ಸಂದರ್ಭ ಅವರಿಗೆ ಎಳೆನೀರು ಕೊಟ್ಟು ಸ್ವಾಗತಿಸಿದ್ದು ಹಿಂದೂಗಳು. ಪ್ರವಾದಿಯವರ ಕುಟುಂಬಕ್ಕೆ ಸೇರಿದ ಕೆಲ ಮಂದಿ ಭಾರತಕ್ಕೆ ಬಂದು ಸಂದೇಶ ಸಾರಿದರು. ಅವರಿಗೆ ಇಲ್ಲಿಯ ಭಾಷೆ, ಸಂಸ್ಕøತಿ ಗೊತ್ತಿರಲಿಲ್ಲ. ಆದರೆ ಆಕಾಲದಲ್ಲಿ ಯಾವುದೇ ಸಮಸ್ಯೆ ಬರಲಿಲ್ಲ. ಆದರೆ ಪ್ರಸಕ್ತ ಸೌಹಾರ್ದತೆ, ಆಚರಣೆಗಳಲ್ಲಿ ಹಿಂದೂ ಮತ್ತು ಇಸ್ಲಾಂನ ನಡುವೆ ಸೇತುವೆ ನಿರ್ಮಾಣವಾಗಿದೆ. ಪುಟ್ಟ ವಿಚಾರಕ್ಕೆ ಸಂಬಂದಿಸಿ ಕೋಮುಸಂಘರ್ಷ ನಡೆದರೆ ನಾವು ಸೌಹಾರ್ದ ಕೂಟ ಮಾಡುತ್ತೇವೆ. ಆದರೆ ಸೌಹಾರ್ದತೆಗೆ ಇಲ್ಲಿ ಸ್ಥಾನಮಾನ ಸಿಗುತ್ತಿಲ್ಲ. ವಿವಿದ ಧರ್ಮಗಳ ಪಂಡಿತರು, ಸಮಾಜದಲ್ಲಿ ಗುರುತಿಸಲ್ಪಟ್ಟವರು ಒಗ್ಗಟ್ಟನ್ನು ಬಯಸಿಕೊಂಡು ಹೋದರೆ ಅದಕ್ಕೆ ಅಡಚಣೆಗಳು ಬರುತ್ತವೆ. ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಳಲ್ಲಿ ಜಾತಿಬೇಧ ಇರುವುದಿಲ್ಲ. ನಾವೇ ದೇಶ ಕಟ್ಟುವವರು, ನಾವು ದೇಶದ ಅಂಗ ಎಂದುಕೊಂಡು ಒಗ್ಗಟ್ಟಿನಲ್ಲಿ ಶಿಕ್ಷಣ ಪಡೆಯುತ್ತಾರೆ. ಆದರೆ ಅವರು ಪಡಕೊಂಡ ಶಿಕ್ಷಣಕ್ಕೆ ಪೂರ್ಣಪ್ರಮಾಣದ ಗೌರವ ಈ ಕಾಲದಲ್ಲಿ ಸಿಗುತ್ತಿಲ್ಲ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ ಉತ್ತಮ ಶಿಕ್ಷಣ ನೀಡಿದಲ್ಲಿ ಅವರಿಗೆ, ಧರ್ಮ, ದೇಶ, ಜಾತಿ, ಸರಕಾರ ಮುಂತಾದ ವಿಚಾರಗಳ ಬಗ್ಗೆ ಕೂಲಂಕಷವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಈ ದೇಶದಲ್ಲಿ ಹಲವು ಚರ್ಚ್‍ಗಳನ್ನು ಕಾಣುತ್ತೇವೆ, ಮಸೀದಿಗಳು ಕಾಣುತ್ತೇವೆ, ದೇವಸ್ಥಾನಗಳನ್ನು ಕಾಣುತ್ತೇವೆ. ಆದರೆ ಎಲ್ಲಾ ಮಂದಿರಗಳಲ್ಲಿ ನಡೆಯುವುದು ದೇವರಿಗೆ ಪ್ರಾರ್ಥನೆ ಮಾತ್ರ. ಆರಾಧನಾಯಲಗಳು ಬೇರೆಬೇರೆಯಾದರೂ ಏಕದೇವನಿಗೆ ಪ್ರಾರ್ಥನೆ ನಡೆಯುತ್ತದೆ. ಆದ್ದರಿಂದ ಧ್ವೇಷವನ್ನು ಬೆಳೆಸುವ ಸಿದ್ದಾಂತಗಳನ್ನು ಬಿಟ್ಟು, ಪ್ರೀತಿಯನ್ನು ಬೆಳೆಸುವ ಸಿದ್ಧಾಂತಗಳನ್ನು ಬೆಳೆಸಿಕೊಂಡಲ್ಲಿ ಸಮಾಜದಲ್ಲಿ ಸಮಸ್ಯೆಗಳು ದೂರವಾಗಲು ಸಾಧ್ಯ. ಲಾದೆನ್‍ನನ್ನು ಸಮಾಜಕ್ಕೆ ಸೇರಿಸಬೇಡಿ, ಹಿಟ್ಲರ್‍ನನ್ನು ಸಮಾಜಕ್ಕೆ ಸೇರಿಸಬೇಡಿ. ಉಗ್ರವಾದಿಗಳು ಭಯೋತ್ಪಾದನೆ ಮಾಡುತ್ತಾರೆ ಎಂದು ಎಲ್ಲರನ್ನು ಅದಕ್ಕೆ ಬಲಿಪಶು ಮಾಡುವ ಕಾರ್ಯ ಸಲ್ಲದು ಎಂದರು.
ಕಾರ್ಯಕ್ರಮದಲ್ಲಿ ಉಳ್ಳಾಲ ಮೊಗವೀರಪಟ್ಣದ ಜೀವರಕ್ಷಕ ಈಜುಗಾರರ ಸಂಘದ ಪ್ರವೀಣ್ ಕೋಟ್ಯಾನ್, ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಕಿರಣ್ ಕುಮಾರ್, ಸಮಾಜ ಸೇವಕ ಅಬ್ದುಲ್ ರವೂಫ್ ಹಾಗೂ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.
ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್‍ನ ಧರ್ಮಗುರು ಜೆ.ಪಿ.ಸಲ್ದಾನ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಉಳ್ಳಾಲ ನಗರಸಭೆಯ ಕೌನ್ಸಿಲರ್ ದಿನೇಶ್ ರೈ, ಇಂಟೆಕ್‍ನ ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಟ್ಟಿ, ಭಾರತ್ ಪ್ರೌಢ ಶಾಲಾ ಸಂಚಾಲಕ ಬಾಬು ಬಂಗೇರ, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಸದಾನಂದ ಬಂಗೇರ, ಮಂಜನಾಡಿ ಜಮಾಅತ್‍ನ ಅಧ್ಯಕ್ಷ ಆಲಿಕುಂಞÂ ಪಾರೆ, ಉಳಿಯ ದೇವಸ್ಥಾನದ ಅಧ್ಯಕ್ಷ ಸಂಜೀವ ಪಡುಮನೆ, ಉಳ್ಳಾಲ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ, ಅಬ್ದುಲ್ ಖಾದರ್, ಉಳ್ಳಾಲ ಪುರಸಭೆಯ ಮಾಜಿ ಕೌನ್ಸಿಲರ್ ದಯಾನಂದ ತೊಕ್ಕೊಟ್ಟು, ದರ್ಗಾ ಸಮಿತಿ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ, ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಯು.ಟಿ.ಇಲ್ಯಾಸ್, ಕಲಂ ಉಸ್ತಾದ್, ಯು.ಟಿ.ತಂಝಿಲ್ ಉಪಸ್ಥಿತರಿದ್ದರು.
ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್.ಹಂಝ ಸ್ವಾಗತಿಸಿದರು. ಉರೂಸ್ ಮಾಧ್ಯಮ ಸಮಿತಿ ವಿಭಾಗದ ಆರ್.ಕೆ.ಮದನಿ ಕಾರ್ಯಕ್ರಮ ನಿರೂಪಿಸಿದರು.