Site icon Ullalavani

ಸೋಮೇಶ್ವರ, ಉಳ್ಳಾಲದಲ್ಲಿ ಅಬ್ಬರಿಸಿದ ಸಮುದ್ರ

UN NETWORKS

ಉಳ್ಳಾಲ: ಸೋಮೇಶ್ವರದ ಉಚ್ಚಿಲ ಸಮುದ್ರ ತೀರದಲ್ಲಿ ಅಲೆಗಳ ರಭಸ ಶನಿವಾರ ತಡರಾತ್ರಿಯಿಂದ ಹೆಚ್ಚಿದ್ದು, 50 ರಷ್ಟು ಮನೆಗಳಿಗೆ ನೀರು ಅಪ್ಪಳಿಸುತ್ತಿದ್ದರೆ ಮೂರು ಕುಟುಂಬವನ್ನು ಭಾನುವಾರ ಸಂಜೆಯ ವೇಳೆ ಸ್ಥಳಾಂತರಿಸಲಾಗಿದೆ.

ಶನಿವಾರ ತಡರಾತ್ರಿ ವೇಳೆ ಸಮುದ್ರದಲ್ಲಿ ಬೀಸಿದ ಗಾಳಿಯಿಂದ ಕಡಲಬ್ಬರ ಜೋರಾಗಿದೆ. ಸೋಮೇಶ್ವರದ ಉಚ್ಚಿಲದ ತೀರಾ ಅಪಾಯದಲ್ಲಿದ್ದ ಬೀಚ್ ರೋಡ್ ನಿವಾಸಿ ಗಳಿಗೆ ಮನೋಹರ್ ಉಚ್ಚಿಲ್, ರಾಮಚಂದ್ರ, ಸುಧೀರ್ ಎಂಬವರ ಕುಟುಂಬಗಳನ್ನು ಸಮೀಪದ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಉಚ್ಚಿಲ ಬೀಚ್ ರೋಡ್ ಬಳಿಯಿರುವ ಸುಮಾರು 40 ಕ್ಕೂ ಅಧಿಕ ಮನೆಗಳಿಗೆ ಸಮುದ್ರದ ಅಲೆಗಳು ಭಾನುವಾರ ಸಂಜೆಯವರೆಗೂ ಅಪ್ಪಳಿಸುತ್ತಲೇ ಇವೆ. ಹಲವೆಡೆ ಮನೆ ಒಳಗಡೆ ನೀರು ನುಗ್ಗಿದ್ದು, ಇನ್ನು ಹಲವು ಮನೆಗಳ ಅಂಗಳ ಸಂಪೂರ್ಣ ಸಮುದ್ರದ ನೀರಿನಿಂದ ಜಲಾವೃತವಾಗಿದೆ.

ಅಗ್ನಿ ಶಾಮಕದಳ ಭೇಟಿ : ಭಾನುವಾರ ಮಧ್ಯಾಹ್ನ ವೇಳೆ ಸಮುದ್ರದ ಅಲೆಗಳು ಜೋರಾಗಿ ಹೊಡೆಯಲು ಆರಂಭವಾದ ಹಿನ್ನೆಲೆಯಲ್ಲಿ ಸೋಮೇಶ್ವರ ಗ್ರಾಮ ಪಂಚಾಯತ್ ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಅಗ್ನಿ ಶಾಮಕ ದಳ ಭೇಟಿ ನೀಡಿದೆ. ಸಿಬ್ಬಂದಿ ಮನೆಮಂದಿಯನ್ನು ಸ್ಥಳಾಂತರಿಸುವಲ್ಲಿ ಸಹಕಾರಿಯಾದರು. ಮನೆ ಅಂಗಳದಲ್ಲಿ ತುಂಬಿದ ನೀರು ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ಮುಂಜಾಗ್ರತಾ ಕ್ರಮವಾಗಿ ಉಚ್ಚಿಲ ಸಮುದ್ರ ತೀರದಲ್ಲೇ ಬೀಡುಬಿಟ್ಟಿದ್ದಾರೆ.

ಸ್ಥಳಕ್ಕೆ ಜಿಲ್ಲಾಧಿಕಾರಿ-ಕಂದಾಯ ಇಲಾಖೆ ಭೇಟಿ : ಸೋಮೇಶ್ವರ ಉಚ್ಚಿಲ ಸಮುದ್ರ ತೀರದ ಪ್ರದೇಶಕ್ಕೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಅಸಿಸ್ಟೆಂಟ್ ಕಮೀಷನರ್ ಮಹೇಶ್ ಕರ್ಜಗಿ, ಕಂದಾಯ ಇಲಾಖೆ ಭೇಟಿ ನೀಡಿತು. ತಹಶೀಲ್ದಾರ್ ಸಂತೋಷ್ , ಕಂದಾಯ ಅಧಿಕಾರಿ ಜೋಸ್ಲಿನ್ ಸ್ಟೀಫನ್ ಗ್ರಾಮಕರಣಿಕ ಲಾವಣ್ಯ , ಸೋಮೇಶ್ವರ ಪಂ. ಅಭಿವೃದ್ಧಿ ಅಧಿಕಾರಿ ಕೇಶವ್, ಸೋಮೇಶ್ವರ ಗ್ರಾ.ಪಂ ಅಧ್ಯಕ್ಷ ರಾಜೇಶ್ ಉಚ್ಚಿಲ್ , ತಾ.ಪಂ ಸದಸ್ಯ ರವಿಶಂಕರ್ , ಪಂ. ಸದಸ್ಯರಾದ ಅಜಿತ್ ಕುಮಾರ್ ಶೆಟ್ಟಿ, ಸಚಿನ್ ಸಹಿತ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಅಪಾಯದಂಚಿನಲ್ಲಿರುವ ಮನೆಮಂದಿಗೆ ಸ್ಥಳಾಂತರವಾಗುವಂತೆ ಸೂಚಿಸಿದ್ದಾರೆ. ಸ್ಥಳದಲ್ಲಿ ಉಳ್ಳಾಲ ಠಾಣಾ ಪೊಲೀಸರು ಠಿಕಾಣಿ ಹೂಡಿದ್ದಾರೆ.

`ಕಣ್ಣೂರಿನಿಂದ ಮೀನುಗಾರಿಕೆ ಬಿಟ್ಟು ಹಿಂತಿರುಗಿದೆವು’ : ಶನಿವಾರ ಬೆಳಿಗ್ಗೆ ಪರ್ಸೀನ್ ಬೋಟಿನಲ್ಲಿ ಉಳ್ಳಾಲದಿಂದ ನಾಲ್ವರ ತಂಡ ಮೀನುಗಾರಿಕೆಗೆಂದು ತೆರಳಿದ್ದೆವು. ಕಣ್ಣೂರು ಭಾಗದಲ್ಲಿ ಆಳಸಮುದ್ರ ಮೀನುಗಾರಿಕೆ ನಡೆಸುವ ಸಂದರ್ಭ ಸಮುದ್ರದ ಅಲೆಗಳಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಬಳಿಕ ಜೋರಾಗಿ ಗಾಳಿ ಬೀಸಲು ಆರಂಭವಾಗಿತ್ತು. ತದನಂತರ ಕೆಲವೇ ನಿಮಿಷಗಳಲ್ಲಿ ಹವಾಮಾನ ಇಲಾಖೆಯ ಸಂದೇಶ ಮೊಬೈಲಿಗೆ ಬರುತ್ತಿದ್ದಂತೆ ಮೀನುಗಾರಿಕೆಯನ್ನು ಅರ್ಧಕ್ಕೆ ನಿಲ್ಲಿಸಿ ಮತ್ತೆ ಉಳ್ಳಾಲದತ್ತ ವಾಪಸ್ಸಾಗಿದ್ದು, ಭಾನುವಾರ ನಸುಕಿನ ಜಾವ ಉಳ್ಳಾಲದತ್ತ ತಲುಪಿದ್ದೇವೆ. ಅಳಿವೆಬಾಗಿಲು ಬಳಿ ದೋಣಿ ಸಾಗಲು ಕಷ್ಟವಾಗಿತ್ತು ಎಂದು ಮೀನುಗಾರ ಶರತ್ ತಿಳಿಸಿದರು.

ಹಲವು ದೋಣಿಗಳು ವಾಪಸ್ಸು : ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ದೋಣಿಗಳು ಬಹುತೇಕ ವಾಪಸ್ಸಾಗಿವೆ. ಕೋಸ್ಟ್ ಗಾರ್ಡಿನವರು ಮೈಕಿನ ಮೂಲಕ ಸಮುದ್ರದಲ್ಲಿ ಘೋಷಣೆ ಹಾಕಿದ ಹಿನ್ನೆಲೆಯಲ್ಲಿ ಅಪಾಯವನ್ನರಿತು ದೋಣಿಗಳು ವಾಪಸ್ಸು ದಡ ಸೇರಿವೆ. ಹವಾಮಾನ ಇಲಾಖೆಯಿಂದ ಮೂರು ದಿನಗಳ ಹಿಂದೆಯೇ ಸಮುದ್ರದಲ್ಲಿ ಜೋರಾಗಿ ಗಾಳಿ ಬೀಸುವ ಸಂಭವ ಇರುವ ಬಗ್ಗೆ ಸೂಚನೆಯಿತ್ತು.

ಉಳ್ಳಾಲದಲ್ಲಿ ಜೋರು : ಉಳ್ಳಾಲದ ಕೋಟೆಪುರ ಮೀನಿನ ತೈಲ ಸಂಸ್ಕರಣಾ ಘಟಕದ ಎದುರುಗಡೆ ದಂಡೆಗಳಿಗೆ ಸಮುದ್ರ ಅಲೆಗಳು ಹೊಡೆಯುತ್ತಿರುವ ರಭಸಕ್ಕೆ ರಸ್ತೆಯಿಡೀ ನೀರು ತುಂಬಿವೆ. ಘಟಕಗಳಿಗೆ ತೆರಳುವ ವಾಹನಗಳು ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿವೆ. ಉಳ್ಳಾಲ ಮೊಗವೀರಪಟ್ನ ತೀರದಲ್ಲಿ ಭಾನುವಾರವಾಗಿದ್ದರಿಂದ ಪ್ರವಾಸಿಗರು ಸ್ಥಳಕ್ಕಾಗಮಿಸಿದರೂ ಸಮುದ್ರದ ಅಲೆಗಳು ಅಪ್ಪಳಿಸಿ ವಾಹನ ನಿಲ್ಲಿಸುವ ಸ್ಥಳದಲ್ಲಿ ನೀರು ಶೇಖರಣೆಗೊಂಡಿದ್ದರಿಂದ ಹಲವರು ವಾಪಸ್ಸಾದರು. ಈ ಭಾಗದಲ್ಲಿ ಯಾವುದೇ ಮನೆಗಳಿಗೆ ಹಾನಿಯಾಗಿಲ್ಲ.

Exit mobile version