UN NETWORKS
ಕೊಣಾಜೆ: ದೇಶದ್ರೋಹಿ ಶಕ್ತಿಗಳಿಗೆ, ಉಗ್ರಗಾಮಿ ಚಟುವಟಿಕೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಕರಾವಳಿ ತೀರಗಳು ಅತ್ಯಂತ ಸುಲಭದ ರಹದಾರಿಯಾಗಿರುವುದರಿಂದ ಕರಾವಳಿ ಭದ್ರತೆಯ ವಿಷಯವು ಅತ್ಯಂತ ಪ್ರಮುಖ ರಕ್ಷಣಾತ್ಮಕ ಜವಾಬ್ಧಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಕೆ.ಎಸ್.ಆರ್.ಪಿ.ಯ ಎಡಿಜಿಬಿ ಭಾಸ್ಕರ ರಾವ್ ಅವರು ಹೇಳಿದರು.
ಕರ್ನಾಟಕ ರಾಜ್ಯವು ಸುಮಾರು 320 ಕೀಮೀ ಉದ್ದದ ಕರಾವಳಿ ತೀರವನ್ನು ಹೊಂದಿದ್ದು, ಕರಾವಳಿಯ ಭದ್ರತೆಯ ವಿಷಯವುಕೂಡಾ ಒಂದು ಗಂಭೀರವಾದ ವಿಚಾರವಾಗಿದೆ. ದೇಶವು ಅತೀ ಹೆಚ್ಚು ಕರಾವಳಿ ಪ್ರದೇಶಗಳನ್ನು ಹೊಂದಿರುವ ಕಾರಣ ಹಿಂದಿನಿಂದ ಇದರ ಭದ್ರತೆಯ ವಿಷಯದಲ್ಲಿ ಕ್ರಮಗಳನ್ನು ಅನುಸರಿಸಿಕೊಂಡು ಬಂದಿದೆ. ಹಾಗೆಯೇ ಇಂದಿನ ಆಧುನಿಕತೆಯ ಕಾಲಘಟ್ಟದಲ್ಲಿ ಕರಾವಳಿಯ ರಕ್ಷಣೆಯೂ ಒಂದು ಸವಾಲಾಗಿದ್ದು ರಕ್ಷಣಾತ್ಮಕ ವ್ಯವಸ್ಥೆಯಲ್ಲಿ ನೂತನ ಆವಿಷ್ಟಾರಗಳೊಂದಿಗೆ ಕರಾವಳಿಯ ಭೆದ್ರತೆಗೆ ಹೆಚ್ಚಿನ ಆಧ್ಯತೆ ನೀಡುವುದು ಅನಿವಾರ್ಯ ಹಾಗೂ ಅತೀ ಮುಖ್ಯವೂ ಹೌದು ಎಂದು ಹೇಳಿದರು.
ಸಮಾರಂಭದಲ್ಲಿ ಮಲ್ಪೆ ಕರಾವಳಿ ಭದ್ರತಾ ಪೊಲೀಸ್ ಇದರ ಎಸ್.ಪಿ ಕೆ.ಬಾಲಕೃಷ್ಣ ಅವರು ಮಾತನಾಡಿ, ಕರ್ನಾಟಕದ ಕರಾವಳಿ ಪ್ರದೇಶವು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದ್ದು ಇಲ್ಲಿನ ಭದ್ರತೆಯ ವಿಷಯದಲ್ಲೂ ಹೆಚ್ಚಿನ ಕಾಳಜಿ ಅಗತ್ಯವಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರು, ಮುಂದುವರಿದ ದೇಶಗಳಂತೆ ನಮ್ಮ ಭಾರತದಲ್ಲೂ ಕರಾವಳಿಯ ಭದ್ರತೆಯ ವಿಷಯದಲ್ಲಿ ನೂತನ ತಂತ್ರಜ್ಞಾನ ವ್ಯವಸ್ಥೆಯನ್ನು ನಾವು ಬಳಸುತ್ತಿದ್ದವೆ. ಮಂಗಳೂರು ವಿವಿಯಲ್ಲಿ ಸಾಗರ ಭೂ ವಿಜ್ಞಾನ, ಜೀಯಾಗ್ರಫಿ ವಿಭಾಗಗಳು ಬಹಳ ವರ್ಷಗಳ ಹಿಂದೆಯೇ ಆರಂಭಗೊಂಡಿದ್ದು ವಿದ್ಯಾರ್ಥಿಗಳು ಈ ಕ್ಷೇತ್ರದ ಅಧ್ಯಯನದಲ್ಲಿ ವಿಶೇಷ ಆಸಕ್ತಿಯನ್ನು ಬೆಳೆಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಕುಲಸಚಿವ ಪ್ರೊ.ಎಸ್.ನಾಗೇಂದ್ರ ಪ್ರಕಾಶ್, ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಎಂ.ಖಾನ್ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಘಟಕ ಪ್ರೊ.ಜಯರಾಜ್ ಅಮೀನ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ರವಿಶಂಕರ್ ರಾವ್ ಅವರು ಕಾರ್ಯಕ್ರಮ ನಿರೂಪಿಸಿದರು.