UN NETWORKS
ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2017-18ನೇ ಸಾಲಿನ `ಯಕ್ಷಮಂಗಳ ಪ್ರಶಸ್ತಿ’ಗೆ ಬಡಗುತಿಟ್ಟಿನ ಹಿರಿಯ ಯಕ್ಷಗಾನ ಭಾಗವತರಾದ ಮತ್ಯಾಡಿ ನರಸಿಂಹ ಶೆಟ್ಟಿ, ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಪೆರುವೋಡಿ ನಾರಾಯಣ ಹಾಸ್ಯಗಾರ ಹಾಗೂ ಪ್ರಸಿದ್ಧ ಸ್ತ್ರೀ ವೇಷಧಾರಿ ಪಾತಾಳ ವೆಂಕಟರಮಣ ಭಟ್ ಅವರು ಆಯ್ಕೆಯಾಗಿದ್ದಾರೆ. ವಿದ್ವಾಂಸರಾದ ಡಾ.ಎನ್.ನಾರಾಯಣ ಶೆಟ್ಟಿ ಶಿಮಂತೂರು ಅವರ `ಯಕ್ಷಗಾನ ಛಂದೋಂಬುಧಿ’ ಗ್ರಂಥವು ಯಕ್ಷಮಂಗಳ ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ.
ಯಕ್ಷಮಂಗಳ ಪ್ರಶಸ್ತಿಯು ತಲಾ ರೂ.25 ಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಸನ್ಮಾನಗಳನ್ನು ಒಳಗೊಂಡಿದೆ. ಕೃತಿ ಪ್ರಶಸ್ತಿಯು ರೂ.10 ಸಾವಿರ ನಗದು, ಪ್ರಶಸ್ತಿ ಪತ್ರ, ಸನ್ಮಾನಗಳನ್ನೊಳಗೊಂಡಿದೆ. ಪ್ರೊ.ಎಂ.ಎಲ್.ಸಾಮಗ, ಪ್ರೊ.ಪಾದೇಕಲ್ಲು ವಿಷ್ಣು ಭಟ್, ಪ್ರೊ.ಕೆ.ಚಿನ್ನಪ್ಪ ಗೌಡ ಹಾಗೂ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಈ ಹೆಸರುಗಳನ್ನು ಆಯ್ಕೆ ಮಾಡಿದೆ.
ಮತ್ಯಾಡಿ ನರಸಿಂಹ ಶೆಟ್ಟಿ:
ಬಡಗುತಿಟ್ಟು ಯಕ್ಷಗಾನದ ಅಗ್ರಮಾನ್ಯ ಭಾಗವತರಾದ ಮತ್ಯಾಡಿ ನರಸಿಂಹ ಶೆಟ್ಟಿ ಅವರು ಕಳೆದ ಆರು ದಶಕಗಳಿಂದ ಯಕ್ಷಗಾನವನ್ನೇ ಬದುಕಾಗಿಸಿದ ಕಲಾವಿದರು. ಮತ್ಯಾಡಿಯವರು ಸಾಂಪ್ರದಾಯಿಕ ಶೈಲಿಯ ಭಾಗವತಿಕೆಯಲ್ಲಿ ಗುರುತಿಸಲ್ಪಡುವ ಅಗ್ರಪಂಕ್ತಿಯ ಭಾಗವತರಾಗಿದ್ದಾರೆ. ಕುಂದಾಪುರ ತಾಲೂಕಿನ ಹಳ್ಳಾಡಿ ಸಮೀಪದ ಮತ್ಯಾಡಿ ಎಂಬಲ್ಲಿ 1927ರಲ್ಲಿ ಜನಿಸಿದ ಇವರು ಗುರುನಾರ್ಣಪ್ಪ ಉಪ್ಪೂರರಲ್ಲಿ ಶುದ್ದ ಸಂಪ್ರದಾಯದ ರಾಗ, ತಾಳ,ಮಟ್ಟು ಪರಿಚಯ ಮಾಡಿಕೊಂಡು ಪ್ರಥಮವಾಗಿ ಕೊಡವೂರು ಮೇಳದಲ್ಲಿ ತಾಳ ಹಿಡಿದಿದ್ದರು. ಕೊಡವೂರು, ಪೆರ್ಡೂರು, ಮಾರಣಕಟ್ಟೆ,ಕಳುವಾಡಿ, ಅಮೃತೇಶ್ವರಿ ಹೀಗೆ ಹಲವಾರು ಮೇಳಗಳಲ್ಲಿ ಕಲಾಸೇವೆಗೈದಿರುವ ಇವರು ಮಂದಾರ್ತಿ ಮೇಳದಲ್ಲಿ ನಾಲ್ಕು ದಶಕಗಳ ಕಾಲ ಸೇವೆಗೈದು 1992ರಿಂದ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಇವರಿಗೆ ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗದ ಭಾಗವತ ನಾರ್ಣಪ್ಪ ಉಪ್ಪೂರ ಪ್ರಶಸ್ತಿ, ನಾರಾಯಣ ಕಿಲ್ಲೆ ಪ್ರಶಸ್ತಿ ಮೊದಲಾದ ಪ್ರಶಸ್ತಿ, ಸಮ್ಮಾನಗಳು ದೊರೆತಿವೆ.
ಪೆರುವೋಡಿ ನಾರಾಯಣ ಹಾಸ್ಯಗಾರ:
ಯಕ್ಷಗಾನ `ಹಾಸ್ಯ ವಿಶಾರದ’, ವಿದೂಷಕ ಶಿಖಾಮಣಿ’ ಮೊದಲಾದ ಬಿರುದುಗಳಿಗೆ ಪಾತ್ರರಾಗಿರುವ ಪೆರುವೋಡಿ ನಾರಾಯಣ ಭಟ್ಟರು ತೆಂಕುತಿಟ್ಟು ಯಕ್ಷಗಾನದ ಅಗ್ರಮಾನ್ಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಹಲವಾರು ದಶಕಗಳ ಕಾಲ ಯಕ್ಷಗಾನ ರಂಗದಲ್ಲಿ ಮೆರೆದ ನಾರಾಯಣ ಭಟ್ಟರು ಧರ್ಮಸ್ಥಳ, ಮೂಲ್ಕಿ, ಸುರತ್ಕಲ್, ಕುತ್ಯಾಳ, ಕದ್ರಿ ಹೀಗೆ ಹಲವಾರು ಮೇಳಗಳಲ್ಲಿ ಕಲಾಸೇವೆಗೈದಿದ್ದು, ಮೂಲ್ಕಿ ಮೇಳದ ಯಜಮಾನಿಕೆಯನ್ನೂ ವಹಿಸಿ ಯಶಸ್ವಿಯಾಗಿದ್ದರು. ಪಾಪಣ್ಣ, ಬಾಹುಕ, ವಿಭಾಕರ, ಮಕರಂದ, ದೇವದೂತ, ರಾಕ್ಷಸ ದೂತ ಮೊದಲಾದ ಪಾತ್ರಗಳಲ್ಲಿ ತಮ್ಮ ಪ್ರತಿಭಾ ವಿಳಾಸವನ್ನು ಮೆರೆಸಿರುವ ಇವರು ಕನ್ನಡ ಹಾಗೂ ತುಳುಭಾಷೆಯ ಪ್ರಸಂಗಗಳ ಹಾಸ್ಯ ಪಾತ್ರಗಳಲ್ಲಿ ಸಮಾನ ಪ್ರೌಢಿಮೆಯನ್ನು ತೋರಿ ನಾರದ, ದೂರ್ವಾಸ, ಬ್ರಹ್ಮ ಇತ್ಯಾದಿ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ ಕಲಾವಿದರಾಗಿದ್ದಾರೆ. ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ, ಉಡುಪಿ ಕಲಾರಂಗದ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಸಮ್ಮಾನಗಳು ಇವರಿಗೆ ಸಂದಿವೆ.
ಪಾತಾಳ ವೆಂಕಟರಮಣ ಭಟ್:
ಸ್ತ್ರೀ ಪಾತ್ರದ ಮೂಲಕ ಉತ್ತಮವಾದ ಮಾತು, ನಾಟ್ಯಶೈಲಿಯೊಂದಿಗೆ ಯಕ್ಷಗಾನ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ ಪಾತಾಳ ವೆಂಕಟರಮಣ ಭಟ್ ಅವರು ತೆಂಕುತಿಟ್ಟು ಯಕ್ಷಗಾನರಂಗದ ಪ್ರಸಿದ್ಧ ಕಲಾವಿದರಾಗಿದ್ದಾರೆ. ಮೂರುದಶಕಗಳಿಗೂ ಅಧಿಕ ಕಾಲ ಸ್ತ್ರೀ ವೇಷಧಾರಿಯಾಗಿ ಇವರು ಸೇವೆಗೈದಿದ್ದಾರೆ. ದ್ರೌಪದಿ, ಊರ್ವಶಿ, ಮೇನಕೆ, ದಾಕ್ಷಾಯಿಣಿ, ಶ್ರೀದೇವಿ ಮೊದಲಾದ ವೇಷಗಳಲ್ಲಿ ಮಿಂಚಿದ್ದಾರೆ. ಪಾತಾಳರು ಅಧ್ಯಯನಶೀಲ ರಂಗಕರ್ಮಿಯೂ ಆಗಿದ್ದಾರೆ. ಹೆಜ್ಜೆಗಾರಿಕೆ, ಪುರುಷವೇಷಕ್ಕೆ ಸಂವಾದಿಯಾಗಿ ಸ್ತ್ರೀವೇಷ, ವಸ್ತ್ರವಿನ್ಯಾಸ, ಬಣ್ಣಗಾರಿಕೆ ಮುಂತಾದ ವಿಷಯದಲ್ಲಿ ಆಳ ಚಿಂತನೆ ನಡೆಸಿದವರು.ಬೇಲೂರು ಶಿಲಾಬಾಲಿಕೆಯ ಅಲಂಕಾರ ವಿನ್ಯಾಸದಿಂದ ಪ್ರಭಾವಿತರಾದ ಪಾತಾಳರು ಸ್ತ್ರೀಪಾತ್ರಕ್ಕೆ ತನ್ನದೇ ಆದ ಮಾದರಿಯನ್ನು ನೀಡಿ ಯಶಸ್ವಿಯಾಗಿದ್ದಾರೆ. ಎಳವೆಯಲ್ಲಿಯೇ ಕಾಂಚನ ಯಕ್ಷಗಾನ ನಾಟಕ ಕಂಪೆನಿಯಲ್ಲಿ ಸ್ತ್ರೀ ಪಾತ್ರಧಾರಿಯಾಗಿ ಬೆಳೆದು ಮುಂದೆ, ಸೌಕೂರು, ಮೂಲ್ಕಿ ಮತ್ತು ಧರ್ಮಸ್ಥಳ ಮೇಳಗಳಲ್ಲಿ ಒಟ್ಟು ಮೂವತ್ತು ವರ್ಷ ಕಲಾಸೇವೆ ಮಾಡಿ ನಿವೃತ್ತರಾಗಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಬgಯಲಾಟ ಅಕಾಡೆಮಿ ಪ್ರಶಸ್ತಿ ಮೊದಲಾದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಪಾತಾಳರು ತೆಂಕು-ಬಡಗುತಿಟ್ಟುಗಳೆರಡರಲ್ಲೂ ವೇಷ ಮಾಡುವುದರೊಂದಿಗೆ ಗಮನೀಯ ಸಾಧಕರೆನಿಸಿಕೊಂಡಿದ್ದಾರೆ.
ಯಕ್ಷಗಾನ ಛಂದೋಂಬುಧಿ’ಗೆ ಕೃತಿ ಪ್ರಶಸ್ತಿ:
`ಯಕ್ಷಗಾನ ಛಂದೋಂಬುದಿ ಅಧ್ಯಯನಾತ್ಮಕ ಕೃತಿಯ ಲೇಖಕ ಡಾ.ಶಿಮಂತೂರು ನಾರಾಯಣ ಶೆಟ್ಟರು ಯಕ್ಷಗಾನ ಛಂದಶ್ಯಾಸ್ತ್ರದ ವಿದ್ವಾಂಸರು. ಯಕ್ಷಗಾನ ಪದ್ಯದಲ್ಲಡಗಿರುವ ಲಕ್ಷಣ ವಿಶೇಷವನ್ನು ಶಾಸ್ತ್ರಧಾರ ಸಮ್ಮತವಾಗಿ ವಿಶ್ಲೇಷಿಸಿ ಈ ಕೃತಿಯನ್ನು ಅವರು ರಚಿಸಿದ್ದಾರೆ. ಈ ಕೃತಿಯು ಯಕ್ಷಗಾನ ಅಧ್ಯಯನದ ದೃಷ್ಟಿಯಿಂದ ಮಾತ್ರವಲ್ಲ ಕನ್ನಡ ಸಾಹಿತ್ಯದಲ್ಲಿ ಬಳಕೆಯಾದ ಛಂದೋಬಂಧಗಳ ಅಧ್ಯಯನ ಸಂದರ್ಭದಲ್ಲಿಯೂ ಮಹತ್ವದ್ದಾಗಿದೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನ ಮತ್ತು ಯಕ್ಷಮಂಗಳ ತಂಡದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಮಂಗಳೂರು ವಿವಿ ಕುಲಸಚಿವ ಪ್ರೊ.ಬಿ.ಯಸ್.ನಾಗೇಂದ್ರ ಪ್ರಕಾಶ್ ಮತ್ತು ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.