Site icon Ullalavani

ಕೋಮು ಭಾವನೆಗೆ ಪ್ರಚೋದಿಸುವವರು ದೇಶ ಕಾಯುವ ಮನೋಭಾವವನ್ನು ಬೆಳೆಸಿಕೊಳ್ಳಿ:ಯೋಧ ಝುಬೇರ್

UN NETWORKS

ಉಳ್ಳಾಲ: ಕರಾವಳಿ ಭಾಗದಲ್ಲಿ ಕೋಮುಗಲಭೆಗೆ ಹೆಚ್ಚಿನ ಪ್ರಚೋದನೆ ನೀಡಲಾಗುತ್ತಿದೆ ಹೊರತು ದೇಶಕಾಯುವ ಮನೋಭಾವವನ್ನು ಬೆಳೆಸಲಾಗುತ್ತಿಲ್ಲ. ಗಡಿ ಕಾಯುವಾಗ, ಯುದ್ಧ ಮಾಡುವಾಗ ಜಾತಿ ಬೇಧವಿಲ್ಲದೆ ಮುಸ್ಲಿಮರು, ಕ್ರೈಸ್ತರು, ಹಿಂದುಗಳು ಒಟ್ಟಾಗಿ ಭಯೋತ್ಪಾಧಕರನ್ನು ಸೋಲಿಸುವ ಕಾರ್ಯದಲ್ಲಿ ತೊಡಗುತ್ತಿದ್ದೇವೆ. ಕರಾವಳಿ ಭಾಗದಲ್ಲಿ ಮಾತ್ರ ವ್ಯತಿರಿಕ್ತ ಉದಾಹರಣೆ ಎದ್ದು ಕಾಣುತ್ತಿದೆ ಎಂದು ಜಮ್ಮು ಕಾಶ್ಮೀರದ ಎನ್‍ಕೌಂಟರ್‍ನಲ್ಲಿ ಭಾಗಿಯಾದ ಭಾರತೀಯ ಸೇನೆಯ ಯೋಧ ಝುಬೇರ್ ಹಳೇನೆರಂಕಿ ಹೇಳಿದರು.

ಚೆಂಬುಗುಡ್ಡೆ ಫ್ರೆಂಡ್ಸ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಚೆಂಬುಗುಡ್ಡೆಯ ನೂರುಲ್ ಹುದಾ ಮದರಸದಲ್ಲಿ ಭಾನುವಾರ ಜರಗಿದ ಬಿ.ಎಂ. ಮುಹಮ್ಮದ್ ಮದನಿ ಸ್ಮರಣಾರ್ಥ ಎರಡನೇ ವರ್ಷದ ಬೃಹತ್ ರಕ್ತದಾನ ಶಿಬಿರ ಮತ್ತು ಯೋಧ ಝುಬೇರ್ ಹಳೇನೆರಂಕಿಯವರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಬ್ಲಡ್ ಡೋನರ್ಸ್ ಮಂಗಳೂರು ಹಮ್ಮಿಕೊಂಡ ಕಾರ್ಯಕ್ರಮ ಜೀವದಾನ ಮಾಡುವಂತಹ ಶಿಬಿರದಲ್ಲಿ ದೇಶಭಕ್ತಿ ಎದ್ದು ಕಾಣುತ್ತಿದೆ. ಐದು ವರ್ಷಗಳ ಹಿಂದೆ ಮದರಸದಲ್ಲಿ ಭಯೋತ್ಪಾದನೆ ಕಲಿಸಲಾಗುತ್ತಿದೆ ಅನ್ನುವ ಮಾತು ಕೇಳಿಬಂದಿತ್ತು. ಆದರೆ ಇಂದು ಅದೇ ಮದರಸದಲ್ಲಿ ಸಂಘಟಕರು ರಕ್ತದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಹೇಳಿಕೆಯನ್ನು ನೀಡಿದವರಿಗೆ ಉತ್ತಮ ಸಂದೇಶವನ್ನು ಸಾರಿದ್ದಾರೆ.

ಜಾತಿಗಳ ನಡುವಿನ ಕಂದಕವನ್ನು ಸೃಷ್ಟಿಸುತ್ತಾ ರಾಜಕೀಯವಾಗಿ ಒಂದು ಧರ್ಮವನ್ನು ಇನ್ನೊಂದು ಧರ್ಮಕ್ಕೆ ಕಟ್ಟಿ ಹಾಕುವ ಕೆಲಸ ನಿರಂತರ ಆಗುತ್ತಿದೆ. ದೇಶವನ್ನು ಕಾಯುವ ಯೋಧರನ್ನು ನೋಡುವ ಮೂಲಕ ಕರಾವಳಿ ಭಾಗದ ಜನ ದೇಶಭಕ್ತಿಯ ಮನೋಭಾವವನ್ನು ಬೆಳೆಸಬೇಕಿದೆ. ಕರಾವಳಿಯ ಹೆತ್ತವರು ಮಕ್ಕಳು ವೈದ್ಯ, ಇಂಜಿನಿಯರ್, ಸಾಫ್ಟ್ ವೇರ್ ಉದ್ಯೋಗಿಗಳಾಗಬೇಕೆಂಬ ಕನಸ್ಸು ಇಟ್ಟುಕೊಂಡವರೇ ಹೆಚ್ಚು . ತಪ್ಪಲ್ಲಾ ಅದು ಅದರ ಜತೆಗೆ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವ ಆಸಕ್ತಿಯನ್ನು ಬೆಳೆಸಬೇಕಿದೆ.

ರಾಜ್ಯದ ಬೆಳಗಾಂ, ಮಡಿಕೇರಿ ಭಾಗದ ಪ್ರತಿ ಮನೆಯ ಓರ್ವ ಸದಸ್ಯ ಸೈನ್ಯದಲ್ಲಿರುತ್ತಾರೆ. ಆದರೆ ಕರಾವಳಿಯ 1000 ಮಂದಿಗೆ ಒಬ್ಬ ಮಾತ್ರ ಸೇನೆಯಲ್ಲಿರುತ್ತಾನೆ. ತಾನು ಇದ್ದ ಬೆಟಾಲಿಯನ್ ನಲ್ಲಿ 1,000 ಮಂದಿಯಲ್ಲಿ ಕರಾವಳಿಯರು ಮೂರೇ ಮಂದಿ ಇದ್ದಾರೆ. ಈ ನಿಟ್ಟಿನಲ್ಲಿ ದೇಶಭಕ್ತಿಯನ್ನು ಮಕ್ಕಳಿಗೆ ಕಲಿಸಿಕೊಟ್ಟು, ದೇಶ ಕಾಯುವ ಮನೋಭಾವವನ್ನು ಹೆಚ್ಚು ಬೆಳೆಸಬೇಕಿದೆ ಎಂದರು.

ನಡುಪದವು ಪಿ.ಎ.ಕಾಲೇಜು ಪ್ರಾಂಶುಪಾಲ ಡಾ| ಅಬ್ದುಲ್ ಶರೀಫ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಎಲ್ಲಾ ಧರ್ಮದವರು ಒಂದೇ ಅನ್ನುವುದನ್ನು ಮನೋಭಾವಗಳನ್ನು ಎಳೆಯ ಮಕ್ಕಳಲ್ಲಿ ಬೆಳೆಸಿದಾಗ, ಮುಂದಿನ ಜೀವನದಲ್ಲಿ ಸಮಗ್ರ ಭಾರತ ನಿರ್ಮಾಣ ಸಾಧ್ಯ .ಇಂತಹ ಭಾವನೆಯನ್ನು ಮದರಸಗಳ ಗುರುಗಳು, ಪ್ರಾಥಮಿಕ ಶಾಲೆಯ ಶಿಕ್ಷಕರು ಮಕ್ಕಳಿಗೆ ಕಲಿಸಿಕೊಟ್ಟಾಗ ಸಮಾಜದಲ್ಲಿ ಮಕ್ಕಳು ಮಾದರಿ ಪ್ರಜೆಗಳಾಗಲು ಬೆಳೆಯಲು ಸಾಧ್ಯ. ದೇಶಕ್ಕಾಗಿ ಹೋರಾಡಿದ ಸೈನಿಕನನ್ನು ಸನ್ಮಾನಿಸುವ ಮೂಲಕ ಇತರರಿಗೆ ಸೈನ್ಯಕ್ಕೆ ಸೇರುವ ಸ್ಪೂರ್ತಿ ನೀಡುವ ಕಾರ್ಯ ಆಗಿದೆ ಎಂದರು.

ಗೃಹರಕ್ಷಕ ದಳದ ಕಮಾಂಡೆಂಟ್ ಡಾ| ಮುರಲೀ ಮೋಹನ್ ಚೂಂತಾರು ಮಾತನಾಡಿ ದಾಖಲೆ, ಅಂಕಿ ಅಂಶಗಳಿಗಿಂತ ನಿರಂತರವಾಗಿ ರಕ್ತದಾನದ ಜಾಗೃತಿಯನ್ನು ಮೂಡಿಸಿದ ಬ್ಲಡ್ ಡೋನರ್ಸ್ ಮಂಗಳೂರು ಇವರ ಕಾರ್ಯ ಶ್ಲಾಘನೀಯ . ಜಾತಿ ಧರ್ಮ ಬೇಧವನ್ನು ಬದಿಗಿಟ್ಟು ಮಂದಿರ, ಮಸೀದಿ, ಚರ್ಚುಗಳಲ್ಲಿ ಹೆಚ್ಚು ರಕ್ತದಾನ ಕಾರ್ಯಕ್ರಮಗಳು ನಡೆಯುವ ಮೂಲಕ ಕೋಮುಸೌಹಾರ್ದತೆ ನಾಡಿನಲ್ಲಿ ಬೆಳೆಯಲಿ ಎಂದರು.

ಚೆಂಬುಗುಡ್ಡೆ ಜುಮಾಮಸೀದಿಯ ಖತೀಬರಾದ ಸಿದ್ದೀಖ್ ಅಹ್ಸನಿ ದುಆ ನೆರವೇರಿಸಿದರು. ಉಳ್ಳಾಲ ಸೈಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್, ಡಾ| ಯು.ಟಿ.ಇಫ್ತಿಕಾರ್, ಫಾ| ಕುಮಾರ್ ಕೋಟ್ಯಾನ್, ಪಿಲಾರು ಮಸೀದಿಯ ಅಧ್ಯಕ್ಷ ಕೆ.ಎ.ಅಬೂಬಕರ್, ಉಪಾಧ್ಯಕ್ಷ ಅಬ್ಬಾಸ್ ಮುಖ್ಯ ಅತಿಥಿಗಳಾಗಿದ್ದರು. ಬ್ಲಡ್ ಡೋನರ್ಸ್ ಮಂಗಳೂರು ಇದರ ಸ್ಥಾಪಕ ಸಿದ್ದೀಖ್ ಮಂಜೇಶ್ವರ, ಅಸ್ಲಾಂ, ಫಾರುಕ್ ಚೆಂಬುಗುಡ್ಡೆ, ಮುನೀರ್ ಚೆಂಬುಗುಡ್ಡೆ, ಮುಸ್ತಾಫ ಕೆ.ಸಿ.ರೋಡ್, ಸಲಾಂ ಚೆಂಬುಗುಡ್ಡೆ, ಸಮೀರ್ ಕಡವಿನಬಾಗಿಲು, ನಗರಸಭೆ ಸದಸ್ಯ ಬಾಝಿಲ್ ಡಿಸೋಜ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಝಾಹಿರ್ ಶಾಂತಿನಗರ ನಿರೂಪಿಸಿ ವಂದಿಸಿದರು. ಶಿಬಿರದಲ್ಲಿ ಸುಮಾರು 100ಕ್ಕೂ ಅಧಿಕ ಮಂದಿ ರಕ್ತದಾನ ನಡೆಸಿದರು.

Exit mobile version