Site icon Ullalavani

ವ್ಯಕ್ತಿಯ ಟ್ಯಾಲೆಂಟ್ ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು: ರವಿ ಬಸ್ರೂರು

UN NETWORKS

ಕೊಣಾಜೆ: ಜೀವನದಲ್ಲಿ ನಾವು ಕಠಿಣವಾದ ಪರಿಶ್ರಮ ಹಾಗೂ ಸಾಧನೆಯೊಂದಿಗೆ ಮುನ್ನಡೆದರೆ ಮುಂದೆ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ನಮ್ಮಲ್ಲಿ ಟ್ಯಾಲೆಂಟ್ ಇರದಿದ್ದರೂ ಮತ್ತೊಬ್ಬರಲ್ಲಿರುವ ಟ್ಯಾಲೆಂಟನ್ನು ಗುರುತಿಸಿ ಅವರನ್ನು ಮೇಲಕೆತ್ತುವ ಕೆಲಸ ಮಾಡಿದರೆ ಮುಂದೊಂದು ದಿನ ಅವರು ನಮ್ಮನ್ನು ನೆನಪಿಸುತ್ತಾರೆ ಎಂದು ಸಂಗೀತ ಮತ್ತು ಚಲನಚಿತ್ರ ನಿರ್ದೇಶಕ ರವಿ ಬಸ್ರೂರು ಅವರು ಹೇಳಿದರು.ಅವರು ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಆಶ್ರಯದಲ್ಲಿ ವಿವಿಯ ಮಂಗಳಾ ಸಭಾಂಗಣದಲ್ಲಿ ನಡೆಯುತ್ತಿರುವ `ಸಂಭ್ರಮ-2018′ ಕಾರ್ಯಕ್ರಮವನ್ನು ಮಂಳವಾರ ಉದ್ಘಾಟಿಸಿ ಮಾತನಾಡಿದರು.

ಸಂಗೀತ ಕ್ಷೇತ್ರದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ನಾನು ಉದ್ಯೋಗವನ್ನು ಅರಸಿಕೊಂಡು ಬೆಂಗಳೂರಿಗೆ ತೆರಳಿದ್ದರೂ ಆಸಕ್ತಿ ಕ್ಷೇತ್ರದ ಯಾವುದೇ ಉದ್ಯೋಗ ಸಿಗದೆ ತೊಂದರೆಯನ್ನೆದುರಿಸಿದ್ದೆ. ಆಧುನಿಕತೆಗೆ ಸಂಬಂಧಿಸಿದಂತೆ ಪರಿಕರಗಳನ್ನು ಖರೀದಿಸಲೂ ಹಣ ಇರಲಿಲ್ಲ. ಒಂದು ಸಮಯದಲ್ಲಿ ಕಿಡ್ನಿ ಮಾರಾಟ ಮಾಡಲೂ ಯೋಚನೆ ಮಾಡಿದ್ದೆ. ಆದರೆ ಆಪತ್ ಕಾಲದಲ್ಲಿ ಒಬ್ಬರು ನನಗೆ ಸಹಾಯ ಮಾಡಿ ಕೀ ಬೋರ್ಡ್ ತೆಗೆಯಲು ಸಹಾಯ ಮಾಡಿದರು. ಬಳಿಕ ಪರಿಶ್ರಮದ ಮೂಲಕ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಹಕಾರವಾಯಿತು. ನಂತರ ಹಲವಾರು ಸಿನಿಮಾ ನಿರ್ದೇಶನದ ಜೊತೆಗೆ ಸಂಗೀತ ಕ್ಷೇತ್ರದಲ್ಲಿ ಹಲವಾರು ಅವಕಾಶಗಳು ಒದಗಿ ಬಂದಿದೆ. ಆದ್ದರಿಂದ ಕಠಿಣ ಪರಿಶ್ರಮದಿಂದ ಮುನ್ನಡೆದರೆ ಖಂಡಿತವಾಗಿಯೂ ಯಶಸ್ಸಿನ ದಾರಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಮಂಗಳೂರು ವಿವಿ ಕುಲಪತಿ ಪ್ರೊ. ಕೆ.ಭೈರಪ್ಪ ಅವರು ಅಧ್ಯಕ್ಷತೆವಹಿಸಿ ಮಾತನಾಡಿ, ಮಂಗಳೂರು ವಿಶ್ವವಿದ್ಯಾನಿಲಯವು ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದ ಸಾಧನೆಗೆ ಉತ್ತಮ ಅವಕಾಶವನ್ನು ಒದಗಿಸಿಕೊಡುತ್ತಿದೆ. ಆದ್ದರಿಂದ ಈ ಭಾರಿ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ರಾಷ್ಟ್ರಮಟ್ಟದಲ್ಲಿಯೇ ಮಂಗಳೂರು ವಿವಿ ಉತ್ತಮ ಸಾಧನೆಯೊಂದಿಗೆ ಗುರುತಿಸುವಂತಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಈ ಬಾರಿ ರಾಷ್ಟ್ರೀಯ ಮಟ್ಟದ ಅಂತರ್ ವಿವಿ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ನೃತ್ಯ, ಪ್ರಹಸನ ಹಾಗೂ ನಾಟಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳನ್ನು ಪಡೆದ ಗೋವಿಂದಾಸ್ ಕಾಲೇಜು ಹಾಗೂ ಶ್ರೀ ಮಂಜುನಾಥೇಶ್ವರ ಕಾಲೇಜಿನ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಧನೆಗೈದಿರುವ ಮಂಗಳೂರು ವಿವಿ ಕ್ಯಾಂಪಸ್‍ನ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಪ್ರೀಯಾಂಕ, ಪ್ರಜ್ಞಾ.ಕೆ, ಮಾನಸ.ಕೆ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎ,ಎಂ.ಖಾನ್ ಅವರು ಭಾಗವಹಿಸಿದ್ದರು. ಮಂಗಳೂರು ವಿವಿ ವಿದ್ಯಾರ್ಥಿ ಕ್ಷೇಮ ಪಾಲನಾ ವಿಭಾಗದ ನಿರ್ದೇಶಕರಾದ ಪ್ರೊ.ಉದಯ್ ಕುಮಾರ್ ಬಾರ್ಕೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಪ್ರಜ್ಞಾ ವಂದಿಸಿದರು. ವಿದ್ಯಾರ್ಥಿನಿ ಅಮೃತಾ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು.

Exit mobile version