UN NETWORKS
ಉಳ್ಳಾಲ: ಹಿಂದಿನ ಆಡಳಿತದ ಅವಧಿಯಲ್ಲಿ ನಡೆದಿರುವ ಎಡವಟ್ಟುಗಳನ್ನು ಈಗಿನ ಸಮಿತಿಯ ತಲೆಗೆ ಕಟ್ಟದೆ, ನಡೆದ ಘಟನೆ ಮರೆತು ಒಗ್ಗಟ್ಟಿನಿಂದ ಉಳ್ಳಾಲವನ್ನು ಮಾದರಿಯನ್ನಾಗಿಸೋಣ ಎಂದು ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹೇಳಿದರು.
ಇಸ್ಲಾಂ ಧರ್ಮೀಯರು ಎಂದ ಮೇಲೆ ಪ್ರವಾದಿ (ಸ.ಅ) ಅವರ ತತ್ವ, ಸಿದ್ಧಾಂತಗಳನ್ನು ಅನುಸರಿಸುವುದು ಮುಖ್ಯ. ದ್ವೇಷ ಮರೆತು ಶಾಂತಿಯ ಜೀವನಕ್ಕು ಆದ್ಯತೆ ನೀಡಿದಾಗ ಒಗ್ಗಟ್ಟಿನಿಂದ ಮುನ್ನಡೆಯಲು ಸಾಧ್ಯ. ಪ್ರವಾದಿ ಸಿದ್ಧಾಂತ ಪಾಲನೆ ಎಲ್ಲದ ಧ್ಯೇಯವಾಗಿರಬೇಕು ಎಂದು ಹೇಳಿದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಉಡುಪಿ ಜಮಾಅತ್ ಸಂಯುಕ್ತ ಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಮಾತನಾಡಿ, ಯಾವುದೇ ಒಂದು ಉತ್ತಮ ಕೆಲಸ ಮಾಡುವ ಸಂದರ್ಭ ಆತ್ಮವಿಶ್ವಾಸ, ಮನಸಾಕ್ಷಿ ಮುಖ್ಯ. ಅಹ್ಲ್ ಸುನ್ನತ್ ವಲ್ ಜಮಾಅತ್ ನೈಜ ಇಸ್ಲಾಂ ಆಗಿದ್ದು, ನಾಲ್ವರು ಇಮಾಮರ ಮದ್‍ಹಬ್ ಮೇಲೆ ವಿಶ್ವಾಸ ಇಟ್ಟು ಅನುಸರಿಸಬೇಕಿದೆ ಎಂದರು.
ಸಯ್ಯಿದ್ ಅಲವಿ ತಂಙಳ್ ರಾಮಂದಲಿ ಕೇರಳ ದುವಾ ಮಾಡಿದರು. ಹೊಸಪಳ್ಳಿ ಖತೀದ್ ಯೂಸುಫ್ ಮಿಸ್ಬಾಹಿ ನೇತೃತ್ವದಲ್ಲಿ ರಾತೀಬ್ ನಡೆಯಿತು. ಮಾಜಿ ಸಚಿವ ಯು.ಟಿ.ಖಾದರ್, ಕೋಟೆಕಾರ್ ಮಖ್ದೂಮಿಯಾ ಶರೀಯತ್ ಕಾಲೇಜಿನ ಪ್ರಾಂಶುಪಾಲ ಹಾರೂನ್ ಅಹ್ಸನಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ದರ್ಗಾ ಜತೆ ಕಾರ್ಯದರ್ಶಿ ಆಝಾದ್ ಇಸ್ಮಾಯಿಲ್, ಸಯ್ಯಿದ್ ಮದನಿ ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಉದ್ಯಮಿ ಉಮ್ಮರ್ ಫಾರೂಕ್, ಪ್ರಮುಖರಾದ ಟಿ.ಮುಸ್ತಫಾ ಹೈದರ್, ಅಬ್ದುಲ್ ರಹಿಮಾನ್, ಅಹ್ಮದ್ ಬಾವ ಕೊಟ್ಟಾರ, ಎಂ.ಅಮೀರ್, ಅಬ್ಬಾಸ್ ಅಬ್ದುಲ್ಲಾ, ಜುನೈದ್ ಮಖ್ದೂಮಿ ಇನ್ನಿತರರು ಉಪಸ್ಥಿತರಿದ್ದರು.
ಮಸೀದಿಯ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ ಸ್ವಾಗತಿಸಿದರು. ರಹೀಂ ಮುಟ್ಟಿಕ್ಕಲ್ ಕಾರ್ಯಕ್ರಮ ನಿರೂಪಿಸಿದರು.
`60 ವರ್ಷಗಳ ಸುದೀರ್ಘ ಸೇವೆಯ ಮುಖಾಂತರ ತಾಜುಲ್ ಉಲಮಾ ಅವರು ಉಳ್ಳಾಲ ಭಾಗದಲ್ಲಿ ಧಾರ್ಮಿಕ ಜ್ಞಾನ ನೀಡುವ ಮೂಲಕ ಉಳ್ಳಾಲಕ್ಕೆ ಮಾನ್ಯತೆ ದೊರಕಿಸಿದ್ದಾರೆ. ಈ ಹೆಸರು ಚಿರಸ್ಥಾಯಿಯಾಗಬೇಕಾದರೆ ಧಾರ್ಮಿಕ ಶಿಕ್ಷಣ ಸಂಸ್ಥೆಗಳು ನಿರಂತರ ನಡೆಯಬೇಕಿದೆ’
ಬೇಕಲ ಇಬ್ರಾಹಿಂ ಮುಸ್ಲಿಯಾರ್, ಉಡುಪಿ ಸಂಯುಕ್ತ ಖಾಝಿ