Site icon Ullalavani

ತಾಳಮದ್ದಳೆಗೆ ಸರಿಸಮಾನವಾದ ಕಲೆ ಬೇರೊಂದಿಲ್ಲ : ಎಂ.ಎಲ್.ಸಾಮಗ

UN NETWORKS

ಕೊಣಾಜೆ: ಮಾತಿನ ಮೂಲಕವೇ ಮೆರೆಯುತ್ತಿರುವ ತಾಳಮದ್ದಳೆ, ಅದೊಂದು ಆಕರ್ಷಕ ಮತ್ತು ಶ್ರೀಮಂತವಾದ ಕಲೆಯಾಗಿದೆ. ಪುರಾಣಲೋಕವನ್ನು ಮತ್ತೆ ಮತ್ತೆ ನಮ್ಮ ಮುಂದೆ ತೆರೆದಿಡುವ ತಾಳಮದ್ದಳೆಯಂತಹ ಕಲೆಗೆ ಸರಿಸಮಾನವಾದಂತಹ ಕಲೆ ಬೇರೊಂದಿಲ್ಲ. ತಾಳೆ ಮದ್ದಳೆಯ ಅರ್ಥಧಾರಿಗಳು ಇಂದು ವಿಮರ್ಶೆಗಳಿಗೆ ಒಗ್ಗಿಕೊಂಡು ಶ್ರಿಮಂತ ಕಲೆಯ ಬೆಳವಣಿಗೆಗೆ ಸಾಕ್ಷಿಯಾಗಬೇಕು ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪ್ರೊ.ಎಂ.ಎಲ್.ಸಾಮಗ ಅವರು ಅಭಿಪ್ರಾಯಪಟ್ಟರು.

ಅವರು ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಕಾಸರಗೋಡು ಇದರ ಆಶ್ರಯದಲ್ಲಿ ಶನಿವಾರ ಮಂಗಳೂರು ವಿವಿಯ ಹಳೆಸೆನೆಟ್ ಸಭಾಂಗಣದಲ್ಲಿ ನಡೆದ ಯಕ್ಷಗಾನ ತಾಳಮದ್ದಳೆ ಅರ್ಥಗಾರಿಕಾ ಶಿಬಿರ ರಂಗ-ಪ್ರಸಂಗ `ಅರ್ಥಾಂತರಂಗ-6′ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ತಾಳಮದ್ದಳೆಯಲ್ಲಿ ಒಂದೇ ಮಾದರಿ ಅಂತ ಇಲ್ಲ. ಪ್ರಸಂಗಗಳು, ಪಾತ್ರಧಾರಿಗಳು ಬದಲಾಣೆಗಳಾದಂತೆ ಕತೆಯ ವಿಶ್ಲೇಷಣೆಯಲ್ಲಿ, ಸ್ವರೂಪದಲ್ಲಿ ಬದಲಾವಣೆಗಳಾಗುವುದನ್ನು ನಾವು ಗಮನಿಸುತ್ತೇವೆ. ಇದು ತಾಳಮದ್ದಳೆ ಅರ್ಥಗಾರಿಕೆಯ ವಿಭಿನ್ನತೆಯೂ, ವೈಶಿಷ್ಟ್ಯತೆಯ ಆಗಿರಬಹುದು. ತಾಳಮದ್ದಳೆಯ ಅರ್ಥಧಾರಿಗಳು ಪ್ರತ್ಯಕ್ಷವಾಗಿ ಸಿಗುವ ಪ್ರಶಂಸೆಗಿಂತ ಪರೋಕ್ಷವಾಗಿ ವಿಮರ್ಶೆಗಳಿಗೆ ಒಗ್ಗಿಕೊಂಡು ಮುನ್ನಡೆಯವುದು ಜವಬ್ಧಾರಿಯಾಗಿದೆ. ಇದು ನಮ್ಮಲ್ಲಿ ಮತ್ತಷ್ಟು ಹುರುಪು ಮೂಡಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಇಂತಹ ಕಾರ್ಯಕ್ರಮವು ತಾಳಮದ್ದಳೆಯ ಅಧ್ಯಯನ ದೃಷ್ಟಿಯಿಂದ ಬಹಳ ಸೂಕ್ತವಾದುದು. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ನಾಟಕಕಾರ, ರಂಗಕರ್ಮಿ ಮೂರ್ತಿ ದೇರಾಜೆ ಅವರು ಮಾತನಾಡಿ, ಮಾತಿನ ಮೂಲಕವೇ ಮಿಂಚುತ್ತಿರುವ ಕಲೆ ತಾಳಮದ್ದಳೆ. ಮಾತುಗಾರನಿಗೆ ತನ್ನ ಮಾತಿನ ಮಿತಿಯ ಬಗ್ಗೆಯೂ ಅರಿವಿರಬೇಕಾದದ್ದು ಇಂದಿನ ಅಗತ್ಯವಾಗಿದೆ. ಇಂದಿನ ಆಧುನಿಕ ಕಾಲಘಟ್ಟದಲ್ಲಿ ಯಕ್ಷಗಾನದ ಸೋದರ ಕಲೆಗಳ ಅನುಭವ ವಿರುವ ಸೂಕ್ತ ನಿರ್ದೇಶಕನ ಅಗತ್ಯ ತಾಳಮದ್ದಳೆಗೆ ಅಗತ್ಯವಿದೆ ಎಂದು ಹೇಳಿದರು.

ಮಂಗಳೂರು ವಿವಿ ಪ್ರಾಧ್ಯಾಪಕ ಪ್ರೊ.ಶ್ರೀಪತಿ ಕಲ್ಲೂರಾಯ ಅವರು ಮಾತನಾಡಿ, ನಾಟ್ಯ ಕಲೆಗಳಲ್ಲಿ ಬೇರೆ ಬೇರೆ ಅದಕ್ಕೆ ಸಮಾನವಾದ ಕಲೆಗಳಿರುವುದನ್ನು ನಾವು ಗುರುತಿಸುತ್ತೇವೆ ಆದರೆ ಮಾತಿನ ಕಲೆಯಲ್ಲಿ ಯಕ್ಷಗಾನ ತಾಳಮದ್ದಳೆ ಕಲೆಯೇ ಅತ್ಯಂತ ಶ್ರೀಮಂತ ತಾಳಮದ್ದಳೆಯಾಗಿದೆ ಎಂದು ಅನಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪ್ರಸಿದ್ಧ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್, ಪ್ರಾಧ್ಯಾಪಕಿ ಡಾ.ನಾಗವೇಣಿ ಮಂಚಿ, ವಿಮರ್ಶಕರಾದ ಎನ್.ಆರ್.ದಾಮೋದರ ಶರ್ಮ ಬಾರ್ಕೂರು, ಡಾ.ರಾಜಶ್ರೀ ಅವರು ಭಾಗವಹಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ನಡೆದ ಕರ್ಣಪರ್ವ ತಾಳಮದ್ದಳೆಯಲ್ಲಿ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಸುಬ್ರಾಯ ಸಂಪಾಜೆ, ಗೋಪಾಲಕೃಷ್ಣ ನಾವಡ ಮಧೂರು, ಗಣೇಶ್ ಭಟ್ ನೆಕ್ಕರೆ ಮೂಲೆ, ಉದಯ ಕಂಬಾರು, ಮುರಲಿ ಮಾಧವ ಮಧೂರು, ಅಮೋಘ ಸುರತ್ಕಲ್, ರಾಧಾಕೃಷ್ಣ ಕಲ್ಚಾರ್, ಹರೀಶ್ ಬಳಂತಿಮೊಗರು, ರವಿರಾಜ ಪಣೆಯಾಳ, ವಿಷ್ಣುಶರ್ಮ ವಾಟೆಪಡ್ಪು, ವಿಜಯಶಂಕರ ಆಳ್ವ ಮೊದಲಾದವರು ಕಲಾವಿದರಾಗಿ ಭಾಗವಹಿಸಿದ್ದರು. ಯಕ್ಷಗಾನ ತಾಳಮದ್ದಳೆಯು ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಅವರ ನಿರ್ದೇನದಲ್ಲಿ ನಡೆಯಿತು.
ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಅವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರೀಶ್ ಬಳಂತಿಮೊಗರು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರದ ಸತೀಶ್ ಕೊಣಾಜೆ, ಜೆಸ್ಸಿಮೇರಿ ಡಿಸೋಜಾ, ಯಕ್ಷಮಂಗಳ ತಂಡದ ವಿದ್ಯಾರ್ಥಿಗಳು, ಪ್ರಾಧ್ಯಾಪಕರುಗಳು, ಸಂಶೋಧನಾ ವಿಧ್ಯಾರ್ಥಿಗಳು, ಆಸಕ್ತರು ಭಾಗವಹಿಸಿದ್ದರು.

*ಇಂದಿನ ಆಧುನಿಕ ಕಾಲಘಟ್ಟದಲ್ಲಿ ಯಕ್ಷಗಾನದ ಸೋದರ ಕಲೆಗಳ ಅನುಭವ ವಿರುವ ಸೂಕ್ತ ನಿರ್ದೇಶಕನ ಅಗತ್ಯ ತಾಳಮದ್ದಳೆಗೆ ಅಗತ್ಯವಿದೆ-ರಂಗಕರ್ಮಿ ಮೂರ್ತಿ ದೇರಾಜೆ

*ತಾಳಮದ್ದಳೆ ಮನೋರಂಜನೆಯ ಕಲೆ ಮಾತ್ರವಲ್ಲ, ಅದನ್ನು ಬದುಕಿನ ಪಾಠವನ್ನಾಗಿ ನಾವು ಸ್ವೀಕರಿಸಿದ್ದೇವೆ. ಧರ್ಮ-ಅಧರ್ಮ, ಸರಿ-ತಪ್ಪುಗಳನ್ನು ಜೀವನದಲ್ಲಿ ಅರಿತುಕೊಳ್ಳುವ ಮಾಧ್ಯಮ-ದಾಮೋದರ ಶರ್ಮ ಬಾರ್ಕೂರು

*ತಾಳಮದ್ದಳೆಯ ಅರ್ಥಧಾರಿಗಳು ಪ್ರತ್ಯಕ್ಷವಾಗಿ ಸಿಗುವ ವಿಮರ್ಶಾ ಪ್ರಶಂಸೆಗಿಂತ ಪರೋಕ್ಷವಾಗಿ ವಿಮರ್ಶೆಗಳಿಗೆ ಒಗ್ಗಿಕೊಂಡು ಮುನ್ನಡೆಯವುದು ಜವಬ್ಧಾರಿಯಾಗಿದೆ-ಎಂ.ಎಲ್.ಸಾಮಗ

Exit mobile version