ULLAL NETWORKS
ಕೈರಂಗಳ: ಭಟ್ ಅವರು ಕೈಗೊಂಡಿರುವ ಅಮರಣಾಂತ ಉಪವಾಸಕ್ಕೆ ನ್ಯಾಯ ಸಿಗದೇ ಇದ್ದಲ್ಲಿ ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯ ಜನತೆ ಅವರ ಹೋರಾಟದಲ್ಲಿ ಭಾಗಿಯಾಗಲಿದ್ದು, ಈ ಮೂಲಕ ದನ ಕಳ್ಳರ ಅಟ್ಟಹಾಸಕ್ಕೆ ಕೊನೆ ಹಾಡಬೇಕಿದೆ ಎಂದು ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವರಾದ ಕೃಷ್ಣ .ಜೆ.ಪಾಲೇಮಾರ್ ಹೇಳಿದ್ದಾರೆ.
ಕೈರಂಗಳ ಪುಣ್ಯಕೋಟಿನಗರದ ಅಮೃತಧಾರಾ ಗೋಶಾಲೆಯಲ್ಲಿ ಐದನೇ ದಿನಕ್ಕೆ ಕಾಲಿಟ್ಟಿರುವ ಟಿ.ಜಿ.ರಾಜಾರಾಂ ಭಟ್ ನೇತೃತ್ವದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಕ್ಕೆ ಭೇಟಿ ನೀಡಿ ಮಾತನಾಡಿದರು.
ಅಮೃತಧಾರಾ ಗೋಶಾಲೆಯಿಂದ ಗೋವಿನ ದರೋಡೆ ನಂತರ ದೂರು ನೀಡಿದರೂ ಸರಿಯಾದ ಸಮಯಕ್ಕೆ ಪೊಲೀಸರು ಪರಿಶೀಲನೆ ನಡೆಸದೆ ತಾತ್ಸಾರ ಮನೋಭಾವನೆ ತೋರಿದ್ದಾರೆ. ಜಿಲ್ಲೆಯ ಜನತೆ ಗೋಮಾತೆಯ ಭಕ್ತರೇ ಆಗಿದ್ದಾರೆ. ಎಲ್ಲಾ ಧರ್ಮದವರು ಗೋವನ್ನು ಆರಾಧನೆ ಮಾಡುವವರೇ ಆಗಿದ್ದಾರೆ. ಆದರೆ ಅದರ ನಡುವೆ ದನಕಳ್ಳರನ್ನು ಪ್ರೋತ್ಸಾಹಿಸುವ ಕಾರ್ಯ ಸರಕಾರದಿಂದ ಆಗಿದೆ. ಅದಕ್ಕಾಗಿ ನಡೆಯುತ್ತಿರುವ ಅಮರಣಾಂತ ಉಪವಾಸದಲ್ಲಿ ಎರಡು ಜಿಲ್ಲೆಗಳ ಜನ ಬೆಂಬಲಿಸಲಿದ್ದಾರೆ. ಸರಕಾರದ ಕಣ್ಣಮುಚ್ಚಾಲೆ ಜನರಿಗೆ ಸಾಕಾಗಿದೆ. ದರೋಡೆಕೋರರಿಗೆ, ಕಳ್ಳಕಾಕರಿಗೆ ಅವಕಾಶ ಮಾಡಕೊಟ್ಟಿರುವ ಸರಕಾರಕ್ಕೆ ಜಾನುವಾರು ಮಾತ್ರವಲ್ಲ ಜನರನ್ನು ಸುರಕ್ಷಿತವಾಗಿ ಕಾಪಾಡಲು ಅಸಾಧ್ಯವಾಗಿದೆ ಎಂದು ಆರೋಪಿಸಿದರು.
ದಾರಿಯಲ್ಲಿ ಹೋಗುವವರನ್ನು ಹಿಡಿದಲ್ಲಿ ನ್ಯಾಯ ಸಿಗುವುದಿಲ್ಲ : ಟಿ.ಜಿ.ರಾಜಾರಾಂ ಭಟ್
ಜಾನುವಾರು ಕಳವಾದ ಸಂದರ್ಭ ಸರಕಾರದಿಂದ ನ್ಯಾಯ ಸಿಗುವ ವಿಶ್ವಾಸವಿತ್ತು. ಅದಕ್ಕಾಗಿ 73 ಗಂಟೆಗಳ ಕಾಲ ಕಾದಿದ್ದೇನೆ. ಯಾವುದೇ ನ್ಯಾಯ ಸಿಕ್ಕಿಲ್ಲ . ಅದಕ್ಕಾಗಿ ಸತತ ಐದು ದಿನಗಳಿಂದ ಅಮರಣಾಂತ ಉಪವಾಸ ಕೈಗೊಂಡಿದ್ದೇನೆ ಎಂದು ಅಮೃತಧಾರ ಗೋಶಾಲೆಯ ಮುಖ್ಯಸ್ಥ ಟಿ.ಜಿ.ರಾಜಾರಾಂ ಭಟ್ ಹೇಳಿದ್ದಾರೆ.
ಇಬ್ಬರ ಬಂಧನವಾಗಿದೆ ಅದರಲ್ಲಿ ಮೋನು ಅನ್ನುವಾತ ದನ ಕಡಿಯುವಾತ, ಇನ್ನೋರ್ವ ಮಾಂಸ ಸಾಗಾಟ ನಡೆಸುವಾತ. ಇಬ್ಬರನ್ನು ಬಂಧಿಸಿದ್ದಾರೆ. ಆದರೆ ಆಶ್ರಮದಿಂದ ತಲವಾರು ತೋರಿಸಿ ಜಾನುವಾರು ಕಳವು ನಡೆಸಿದಾತನನ್ನು ಈವರೆಗೂ ಬಂಧಿಸಲಾಗಿಲ್ಲ. ದಾರಿಯಲ್ಲಿ ಹೋಗುವವನ್ನು ಬಂಧಿಸದರೆ ನ್ಯಾಯ ಸಿಗುವುದಿಲ್ಲ. ಗೋವು ಕಳ್ಳತನ ಮನೋಭಾವಕ್ಕೆ ಅಂತ್ಯ ಸಿಗಬೇಕು. ಜಾಣುವಾರು ಕಳವು ನಡೆಸಿ ಪೈಶಾಚಿಕ ಆನಂದ ಪಡುವ ಮನೋಸ್ಥತಿಯ ಮರಣವಾಗಬೇಕು. ಎಲ್ಲರೂ ಎಲ್ಲರೂ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ. ಗುರುವಾರ ಸಂಜೆಯೊಳಗೆ ನ್ಯಾಯ ಸಿಗುವ ನಿರೀಕ್ಷೆಯಿದೆ. ಸಿಗದಿದ್ದಲ್ಲಿ ಉಪವಾಸವನ್ನು ಮುಂದುವರಿಸುತ್ತೇನೆ, ಇದು ಆತ್ಮಹತ್ಯೆ ಯತ್ನವಲ್ಲ, ಬದಲಾಗಿ ಗೋ ರಕ್ಷಣೆಗಾಗಿ ಅಮರಣಾಂತ ಉಪವಾಸ ಎಂದಿದ್ದಾರೆ.
ಮುಸಲ್ಮಾನರಿಂದಲೂ ಬೆಂಬಲ: ಫಝಲ್ ಅಸೈಗೋಳಿ
ಜಾನುವಾರು ಕಳವು ನಡೆಸುವುದು ಇಸ್ಲಾಂ ಧರ್ಮಕ್ಕೆ ಖೇದಕರ ವಿಚಾರ. ಆಡು ಕಳವಾದ ಸಂದರ್ಭ ಮಹಾತ್ಮರು ತಮ್ಮ ಜೀವಿತಾವಧಿ ಆಡು ತಿನ್ನುವುದನ್ನೇ ತೊರೆದಿರುವ ವಿಚಾರ ಇಸ್ಲಾಂ ಧರ್ಮದಲ್ಲಿದೆ. ಕಳವು ನಡೆಸುವಾತ ಎಂದಿಗೂ ಇಸ್ಲಾಂ ಧರ್ಮದ ಪ್ರತಿಪಾದಕನಾಗಲು ಸಾಧ್ಯವಿಲ್ಲ. ಉಳ್ಳಾಲ ಭಾಗದಲ್ಲಿ ಪೊಲೀಸ್ ಅಧಿಕಾರಿಗಳ ಕೈಯನ್ನು ಕಟ್ಟಿ ಹಾಕಿದ ಸ್ಥಿತಿಯಲ್ಲಿದೆ. ಗೋಕಳ್ಳರ ಕೃತ್ಯಕ್ಕೆ ಅಂತ್ಯ ಹಾಡುವ ಸಲುವಾಗಿ ಭಟ್ ಅವರು ಕೈಗೊಂಡಿರುವ ಉಪವಾಸಕ್ಕೆ ಮುಸಲ್ಮಾನರೂ ಸಾಥ್ ನೀಡಲಿದ್ದಾರೆ. ಕಳ್ಳರ ಬಂಧನವಾಗದೇ ಇದ್ದಲ್ಲಿ ಮುಸಲ್ಮಾನರು ಬಂಧು ಉಪವಾಸ ಕುಳಿತುಕೊಳ್ಳುತ್ತೇವೆ. ಒಂದಿಬ್ಬರು ಮಾಡುವ ಕೃತ್ಯಕ್ಕೆ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಉಳ್ಳಾಲ ಭಾಗದ ಜನರಲ್ಲಿರುವ ದ್ವಂದ್ವ ಭಾವನೆಗಳಿಗೆ ಶಾಸಕ, ಸಚಿವರ ಕುಮ್ಮಕ್ಕಿದ್ದು, ಅದಕ್ಕಾಗಿ ಸಮರ್ಥ ನಾಯಕನ ಅಗತ್ಯವಿದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಛಾದ ಫಝಲ್ ಅಸೈಗೋಳಿ ಹೇಳಿದ್ದಾರೆ.