UN NETWORKS
ಬೋಳಿಯಾರ್ : ಎಂದೋ ನಿರ್ಮಿಸಿ ಅನಾಥವಾಗಿದ್ದ ಕಿಂಡಿಅಣೆಕಟ್ಟುಗಳಿಗೆ ಹಲಗೆ ಮೂಲಕ ಜೀವ ನೀಡಲಾಗಿದೆ, ಫಲವಾಗಿ ಎರಡು ಗ್ರಾಮಗಳಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಸ್ವಚ್ಛತೆಗೂ ಆದ್ಯತೆ ನೀಡಿ ಪ್ರತೀ ಮನೆಗೂ ಡ್ರೈ ಪಿಟ್ ನಿರ್ಮಾಣ ಯೋಜನೆಯ ಹೊಸ ಯೋಚನೆ. ಇದು ಬೋಳಿಯಾರ್ ಗ್ರಾಮ ಪಂಚಾಯಿತಿ ರೂಪಿಸಿರುವ ಈ ವರ್ಷದ ವಿನೂತನ ಯೋಜನೆ.
ಅಭಿವೃದ್ಧಿಯತ್ತ ಚಿತ್ತ
ಗ್ರಾಮದಲ್ಲಿರುವ ಮನೆ, ವಾಣಿಜ್ಯ ಸಂಕೀರ್ಣಗಳು, ಅಂಗಡಿಗಳಿಂದ ಸಿಗುವ ತೆರಿಗೆಯೇ ಗ್ರಾಮಾಭಿವೃದ್ಧಿಗೆ ಮೂಲವಾಗಿದೆ. ಈ ನಿಟ್ಟಿನಲ್ಲಿ ಪಂಚಾಯಿತಿ ಆಡಳಿತ ಚುರುಕುಗೊಂಡಿದ್ದು, ± ತೆರಿಗೆ ವಸೂಲಾತಿಯತ್ತ ಮುಖ ಮಾಡಿದೆ. ಪಂಚಾಯಿತಿ ಪ್ರಯತ್ನ, ಅಧಿಕಾರಿ ವರ್ಗ ಹಾಗೂ ಗ್ರಾಮಸ್ಥರ ಸಹಕಾರದ ಫಲವಾಗಿ ಶೇ.100 ತೆರಿಗೆ ಸಂಗ್ರಹ ಮಾಡುವ ಮೂಲಕ ಪಂಚಾಯಿತಿ ಗೆಲುವಿನ ನಗೆ ಬೀರಿದೆ.
ಉದ್ಯೋಗ ಖಾತರಿ ಬಳಕೆ
ಗ್ರಾಮದಲ್ಲಿ ಕೃಷಿಕರ ಸಂಖ್ಯೆ ಹೆಚ್ಚಿದ್ದರೂ ವಿವಿಧ ಸಮಸ್ಯೆಗಳು, ಸರ್ಕಾರ ಯೋಜನೆಯ ಮಾಹಿತಿ ಕೊರತೆಯಿಂದ ದೂರ ಉಳಿದಿರುವವರೇ ಹೆಚ್ಚು ಮಂದಿಯಿದ್ದಾರೆ. ಅವರೆಲ್ಲರನ್ನೂ ಮುಂಚೂಣಿಗೆ ತಂದು ಮತ್ತೆ ಕೃಷಿ ಚಟುವಟಿಕೆಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಕೃಷಿಕರೂ, ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರೂ ಆಗಿರುವ ಪ್ರಶಾಂತ ಗಟ್ಟಿ ಕಲ್ಪವೃಕ್ಷ ತೆಂಗು ಅಭಿವೃದ್ಧಿ ಸಂಘ ಅಸ್ತಿತ್ವಕ್ಕೆ ತಂದಿದ್ದಾರೆ. ಪ್ರಗತಿಪರ ಕೃಷಿಕರಾದ ರಾಜೇಶ್ ನಾಯಕ್ ಉಳೆಪಾಡಿಗುತ್ತು, ರೈತರ ಸಂಘದ ಮನೋಹರ್ ಶೆಟ್ಟಿ, ಮುರ್ಡೇಶ್ವರದ ಸಹಿತ ಕೃಷಿಯಲ್ಲೇ ಮಿಂದೆದ್ದಿರುವ ಸಂಪನ್ಮೂಲ ವ್ಯಕ್ತಿಗಳ ಮೂಲಕ ಪ್ರೇರಣೆ ನೀಡುತ್ತಿದ್ದು, ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಮುಖಾಂತರ ಸರ್ಕಾರದ ಯೋಜನೆಗಳನ್ನು ಗ್ರಾಮದ ಕೃಷಿಕರಿಗೆ ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಉದ್ಯೋಗ ಖಾತರಿ ಯೋಜನೆ ಬಳಸಿ ನಾಲ್ಕುವರೆ ಲಕ್ಷ ಮೊತ್ತದಲ್ಲಿ ಅಡಿಕೆ ತೋಟ ವಿಸ್ತರಿಸಿದ್ದರೆ, ಪ್ರತೀವರ್ಷ ಆರು ಲಕ್ಷ ರೂಪಾಯಿ ಬಳಸುವ ಇರಾದೆ ಹೊಂದಲಾಗಿದೆ.
ಸ್ವಚ್ಛತೆಗೆ ವೇಸ್ಟ್ ಡ್ರೈ ಪಿಟ್ ಯೋಜನೆ
ಗ್ರಾಮೀಣ ಭಾಗದಲ್ಲಿ ಸ್ವಂತ ತೋಟ, ಜಮೀನು ಇದ್ದವರು ಶೌಚಗೃಹದ ನೀರನ್ನು ಗಿಡಗಳಿಗೆ ಬಿಡುವ ವ್ಯವಸ್ಥೆ ಇದೆ. ಆದರೆ ಸರ್ಕಾರಿ ಅಥವಾ ಸಣ್ಣ ಜಮೀನಿನಲ್ಲಿ ಮನೆ ಕಟ್ಟಿ ವಾಸವಿರುವವರಿಗೆ ಶೌಚಗೃಹ ಹಾಗೂ ನಿರುಪಯುಕ್ತ ನೀರು ಬಿಡುವುದೇ ಸಮಸ್ಯೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಮನೆಗಳು ಹೆಚ್ಚಾಗಿ ನಿರುಪಯುಕ್ತ ನೀರು ಇನ್ಯಾರದ್ದೋ ಮನೆಯಂಗಳಕ್ಕೆ ಹೋಗಿ ಪ್ರತಿನಿತ್ಯ ಜಗಳ ನಡೆಯುತ್ತಿರುವ ಪ್ರಕರಣವೂ ನಡೆಯುತ್ತಿದೆ.
ಇವೆಲ್ಲವನ್ನೂ ಹತ್ತಿರದಿಂದ ಕಂಡಿರುವ ಬೋಳಿಯಾರ್ ಗ್ರಾಮ ಪಂಚಾಯಿತಿ ಹೊಸ ಯೋಜನೆಗೆ ಕೈಹಾಕಿದೆ. ಇಂಜಿನಿಯರ್ ರಾಜ್‍ಕುಮಾರ್ ಅವರ ಯೋಚನೆಯಂತೆ ಅಗತ್ಯವಿರುವ ಮನೆಗಳಲ್ಲಿ ನೀರು ಒಣಗುವ ಗುಂಡಿ ತೋಡುವ ಯೋಜನೆ ಇದಾಗಿದೆ. ಇದರ ಖರ್ಚು ಉದ್ಯೋಗ ಖಾತರಿ ಯೋಜನೆಯಡಿ ಭರಿಸುವ ಇರಾದೆ ಪಂಚಾಯಿತಿಯದ್ದು. ಉದ್ಯೋಗ ಖಾತರಿ ಗುರುತಿನ ಚೀಟಿ ಹೊಂದಿರುವವರ ಮನೆಗೆ 11,600 ರೂಪಾಯಿ ವೆಚ್ಚದಲ್ಲಿ 6 ಅಡಿ ಅಗಲ ಮತ್ತು 6 ಅಡಿ ಆಳದ ಹೊಂಡ ನಿರ್ಮಿಸಿ ಕಾಂಕ್ರೀಟ್, ಮರಳಿನಿಂದ ನೀರಿಂಗಿಸುವ ಹೊಂಡ ತೆಗೆಯುವ ಯೋಜನೆಗೆ ಶೀಘ್ರ ಯೋಜನೆಗೆ ಚಾಲನೆ ನೀಡಿ ಪ್ರತೀ ಮನೆಗೂ ಯೋಜನೆ ತಲುಪಿಸಲು ಪಂಚಾಯಿತಿ ಯೋಚಿಸಿದೆ.
`ಕೃಷಿ ಇಲಾಖೆಯಿಂದ ಬೋಳಿಯಾರ್ ಗ್ರಾಮದಲ್ಲಿರುವ ಕೃಷಿಕರಿಗೆ ಅತೀ ಹೆಚ್ಚು ಅನುದಾನ ದೊರಕಿಸುವಲ್ಲಿ ಪ್ರಶಾಂತ ಗಟ್ಟಿ ಅವರು ಮುತುವರ್ಜಿ ವಹಿಸಿದ್ದಾರೆ, ಕಿಂಡಿಅಣೆಕಟ್ಟು ಮೂಲಕ ನೀರು ನಿಲ್ಲಿಸಲಾಗಿದೆ, ಸ್ವಚ್ಛತೆಗಾಗಿ ಪ್ರತೀ ಮನೆಗೆ ಡ್ರೈ ಪಿಟ್ ನಿರ್ಮಾಣ ಯೋಜನೆ ಶೀಘ್ರ ಆರಂಭಿಸಲಾಗುವುದು’
ಸತೀಶ್ ಆಚಾರ್ಯ, ಅಧ್ಯಕ್ಷ, ಬೋಳಿಯಾರ್ ಗ್ರಾ.ಪಂ.
`ಬೋಳಿಯಾರ್ ಗ್ರಾಮದಲ್ಲಿ 120 ಕೃಷಿಕರನ್ನು ಗುರುತಿಸಲಾಗಿದ್ದು, ಕಲ್ಪವೃಕ್ಷ ತೆಂಗು ಅಭಿವೃದ್ಧಿ ಯೋಜನೆಯಡಿ 75 ರೈತರು ವಿವಿಧ ಯೋಜನೆಯ ಫಲಾನುಭವಿಗಳಾಗಿದ್ದಾರೆ, ಉದ್ಯೋಗ ಖಾತರಿ ಯೋಜನೆಯಡಿ ನೂರು ಎಕರೆ ಅಡಿಕೆ ತೋಟ ವಿಸ್ತರಿಸಲಾಗುವುದು’
ಪ್ರಶಾಂತ ಗಟ್ಟಿ ಬೋಳಿಯಾರ್, ಅಧ್ಯಕ್ಷ, ಕಲ್ಪವೃಕ್ಷ ತೆಂಗು ಅಭಿವೃದ್ಧಿ ಸಂಘ
`ಬೋಳಿಯಾರ್ ಗ್ರಾಮದ ಎರಡು ಕಡೆಗಳಲ್ಲಿ ಹಿಂದೆ ನಿರ್ಮಿಸಲಾಗಿರುವ ಕಿಂಡಿಅಣೆಕಟ್ಟುಗಳಿಗೆ ಪಂಚಾಯಿತಿಯಿಂದ ಹಲಗೆ ಅಳವಡಿಸಿರುವುದರಿಂದ ಬೋಳಿಯಾರ್ ಮಾತ್ರವಲ್ಲದೆ ಪಜೀರು ಗ್ರಾಮದ ಕೃಷಿಕರಿಗೂ ನೀರು ಸಿಗುವಂತಾಗಿದೆ’
ಸಂಜೀವ ಶೆಟ್ಟಿ ತಾರಿಪ್ಪಾಡಿ, ಕೃಷಿಕ