UN NETWORKS
ಉಳ್ಳಾಲ: ಆಂದ್ರ ಪ್ರದೇಶದ ಚಿತ್ತೂರಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಕಾಸರಗೋಡು ಜಿಲ್ಲೆಯ ಕುಂಬಳೆ ನಾಯ್ಕಾಪಿನ ಮೂವರು ಮತ್ತು ಮಧೂರಿನ ಓರ್ವ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡ ಘಟನೆ ರವಿವಾರ ನಸುಕಿನ ಜಾವ ನಡೆದಿದೆ.
ಕುಟುಂಬದ ಹರಕೆ(ಮುಡಿಪು) ತೀರಿಸಲು ತಿರುಪತಿಗೆ : ಗಟ್ಟಿ ಸಮಾಜದ ಮಧೂರು ಪಲ್ಲಂಗೋಡು ತರವಾಡಿನ ಮನೆಯಲ್ಲಿ ಕುಟುಂಬದ ಸದಸ್ಯರು ಶನಿವಾರ ಬೆಳಗ್ಗೆ ಪಾನಕ ಪೂಜೆ ನಡೆಸಿ ಕುಟುಂಬದ ಸದಸ್ಯರು ತಿರುಪತಿ ತಿಮ್ಮಪ್ಪನಿಗೆ ಹರಕೆಯಾಗಿ ಹಾಕಿದ ಮುಡಿಪು(ಹಣ) ಹಿಡಿದುಕೊಂಡು ತರವಾಡಿನ ಹಿರಿಯ ಸದಸ್ಯ ಪಕೀರ ಗಟ್ಟಿ ನೇತೃತ್ವದಲ್ಲಿ ಒಂಭತ್ತು ಜನರು ಮಧ್ಯಾಹ್ನ 2.30ಕ್ಕೆ ಮಧೂರಿನಿಂದ ಹೊರಟಿದ್ದರು. ರವಿವಾರ ನಸುಕಿನ ಜಾವ ಚಿತ್ತೂರು ತಲುಪಿದಾಗ ಹಿಂದಿನಿಂದ ಬಂದ ಬಸ್ಸು ಕಾರನ್ನು ಓವರ್‍ಟೇಕ್ ಮಾಡುವ ಭರದಲ್ಲಿ ಇವರು ಸಂಚರಿಸುತ್ತಿದ್ದ ಕಾರಿಗೆ ಡಿಕ್ಕಿಯಾಗಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರ ಗಾಯಗೊಂಡಿದ್ದ ಚಾಲಕ ಸಹಿತ ಆರು ಮಂದಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪಕೀರ ಗಟ್ಟಿ ಮತ್ತು ಮಂಜಪ್ಪ ಗಟ್ಟಿ ಬೀಡಿ ಬ್ರಾಂಚ್ ನಡೆಸುತ್ತಿದ್ದರು: ಮೃತ ಪಕೀರ ಗಟ್ಟಿ ಮತ್ತು ಸಹೋದರ ಮಂಜಪ್ಪ ಗಟ್ಟಿ ಬೀಡಿ ಬ್ರಾಂಚ್ ನಡೆಸುತ್ತಿದ್ದರು, ನಾಯ್ಕಾಪಿನಲ್ಲಿ ಅಕ್ಕಪಕ್ಕ ಮನೆ ಕಟ್ಟಿಕೊಂಡಿದ್ದರು. ಪಕೀರ ಗಟ್ಟಿ ಪತ್ನಿ, ಐವರು ಪುತ್ರಿಯರು, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮಂಜಪ್ಪ ಗಟ್ಟಿ ಮತ್ತು ಸುಂದರಿ ದಂಪತಿಗಳಿಗೆ ನಾಲ್ವರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.
ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಸದಾಶಿವ : ಮಧೂರು ಮನ್ನಿಪ್ಪಾಡಿ ನಿವಾಸಿ ಸದಾಶಿವ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದು, ಪತ್ನಿ, ಪುತ್ರಿ ಮತ್ತು ಪುತ್ರನನ್ನು ಅಗಲಿದ್ದಾರೆ.
ಅಪಘಾತ ನಡೆದ ಸ್ಥಳದಲ್ಲಿ ಪಕೀರ ಗಟ್ಟಿ ಅವರ ಮೊಬೈಲ್ ಮೂಲಕ ಸ್ಥಳೀಯರು ಮತ್ತು ಪೆÇಲೀಸರು ಕುಟುಂಬಕ್ಕೆ ಅಪಘಾತದ ಮಾಹಿತಿ ನೀಡಿದ್ದು, ಮೃತ ಕುಟುಂಬದ ಸದಸ್ಯರು ಚಿತ್ತೂರಿಗೆ ತೆರಳಿದ್ದು, ಸೋಮವಾರ ಮೃತದೇಹಗಳನ್ನು ಕಾಸರಗೋಡಿಗೆ ತಂದು ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.