UN NETWORKS
ಉಳ್ಳಾಲ: ನರ್ಸಿಂಗ್ ವಿದ್ಯಾರ್ಥಿಗಳು ತಮ್ಮ ಉದ್ದೇಶಿತ ಗುರಿಯನ್ನು ತಲುಪಲು ಒಂದು ಸ್ಪಷ್ಟ ನಿರ್ಧಾರ, ನಿರ್ಣಯ, ಸಮರ್ಪಣಾ ಭಾವ ಹೊಂದಿರಬೇಕು. ಹಾಗೆಯೇ ನರ್ಸಿಂಗ್ ಪವೀಧದರಿಗೆ ದೇಶ ವಿದೇಶದಲ್ಲಿ ಬಹಳಷ್ಟು ಅವಕಾಶವಿದ್ದು ತಮಗೆ ಎದುರಾಗುವ ಯಾವುದೇ ಸಮಸ್ಯೆಯನ್ನು ಎದುರಿಸುವಲ್ಲಿ ಸಫಲರಾಗಿರುತ್ತಾರೆ ಎಂದು ಫಾ. ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್‍ನ ಪ್ರಾಂಶುಪಾಲೆ ಪ್ರೊ. ಸಿಸ್ಟರ್ ಜೆಸಿಂತಾ ಡಿಸೋಜ ಅಭಿಪ್ರಾಯಪಟ್ಟರು.
ನರ್ಸಿಂಗ್ ಎಂಬುದು ಸೇವಾ ಕ್ಷೇತ್ರ. ಮಾನವೀಯ ನೆಲೆಯಲ್ಲಿಹೆಚ್ಚಿನ ಸೇವೆ ಸಲ್ಲಿಸುವುದರಿಂದ ನರ್ಸಿಂಗ್ ಹುದ್ದೆಗೆ ವಿಶೇಷ ಗೌರವವಿದೆ. ಹಾಗಾಗಿ ನಮ್ಮ ಗುರಿಯನ್ನು ತಲುಪಲು ಕಠಿಣ ಶ್ರಮ ವಹಿಸಬೇಕು. ಆದರಿಂದ ಉತ್ತಮ ಫಲಿತಾಂಶ ಪಡೆಯುವದರಲ್ಲಿ ಸಂಶಯವಿಲ್ಲ ಎಂದರು.
ಸಂಸ್ಥೆಯ ಆಡಳಿತ ನಿರ್ದೇಶಕಿ, ಕೆ. ಪಾಂಡ್ಯರಾಜ ಬಲ್ಲಾಳ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಡಾ. ಪ್ರಿಯಾ ಕೆ. ಬಲ್ಲಾಳ್ ಮಾತನಾಡಿ ಪಾಂಡ್ಯರಾಜ ಬಲ್ಲಾಳ್ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುವುದರಿಂದ ಹಾಗೂ ಇಲ್ಲಿ ಶಿಕ್ಷಣ ಪಡೆದವರು ಉತ್ತಮ ಬದುಕನ್ನು ಕಟ್ಟಿಕೊಂಡ ಕಾರಣದಿಂದ ಶಿಕ್ಷಣಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಕಾಲೇಜಿನಲ್ಲಿ ಅತ್ಯುತ್ತಮ ಸೌಲಭ್ಯ ಕಲ್ಪಿಸಿಕೊಡಲಾಗಿದ್ದು ಎಲ್ಲಉತ್ತಮ ಬೋಧಕ ಸಿಬ್ಬಂದಿಗಳ ಸೇವೆ ನೀಡಲಾಗುತ್ತಿದ್ದು ವಿದ್ಯಾರ್ಥಿಗಳ ಸಮಗ್ರ ಪ್ರಗತಿಗಾಗಿ ಕಠಿಣ ಪ್ರಯತ್ನ ಅತಿ ಮುಖ್ಯ ಎಂದರು.
ಪದವಿ ವಿದ್ಯಾರ್ಥಿಗಳ ಶಿಕ್ಷಣ ಗುರುತಿಸುವುದಕ್ಕೆ ಸೀಮಿತವಾಗಬಾರದು. ಉನ್ನತ ಶಿಕ್ಷಣ ಪಡೆಯುವತ್ತಲೂ ಗಮನ ಹರಿಸಬೇಕು. ಪ್ರತಿಜ್ಞಾವಿಧಿ ಪೂರೈಸಿದ ಬಳಿಕ ತಮ್ಮ ಮುಂದಿನ ಬದುಕನ್ನು ಅದೇ ತೆರನಾಗಿ ಮುಂದುವರಿಸಿಕೊಂಡು ಹೋಗುವುದರಿಂದ ವೃತ್ತಿಯಲ್ಲೂ ತಮ್ಮ ಬಗ್ಗೆ ಬಹಳಷ್ಟು ನಿರೀಕೆ ಇಟ್ಟುಕೊಂಡಿರುವ ಪೋಷಕರಿಗೂ ತಾವು ಕಲಿತ ಶಿಕ್ಷಣ ಸಂಸ್ಥೆಗೂ ಉತ್ತಮ ಹೆಸರು ಪ್ರಾಪ್ತವಾಗಲಿದೆ. ನರ್ಸಿಂಗ್ ಸೇವೆಯಲ್ಲಿ ತಾಳ್ಮೆ, ಸಂಯಮ ಕಳೆದುಕೊಳ್ಳಬಾರದು ಹಾಗೂ ಮಾನವೀಯತೆ ಮರೆಯಬಾರದು ಎಂದು ನುಡಿದರು.
ಕಾಲೇಜ್ ಆಫ್ ನರ್ಸಿಂಗ್‍ನ ಪ್ರಾಂಶುಪಾಲೆ ಪ್ರೊ. ಕೈನಿ ಸಿಸಿಲಿಯಾ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶರ್ಮಿಳಾ ಮುಖೇಶ್ ರಾವ್ ಹಾಗೂ ಪಾಂಡ್ಯರಾಜ ಬಲ್ಲಾಳ್ ಕಾಲೇಜ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲ ಸುರ್ಜಿತ್ ಚಕ್ರವರ್ತಿ ಉಪಸ್ಥಿತರಿದ್ದರು.
ಉಪನ್ಯಾಸಕಿ ಪ್ರೀತಿ ಪ್ರೀಮಾ ಡಿಸೋಜ ಸ್ವಾಗತಿಸಿದರು. ನರ್ಸಿಂಗ್ ಕಾಲೇಜು ಉಪನ್ಯಾಸಕಿ ಲೊಲಿಟಾ ಹಾಗೂ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಯಶಸ್ವಿನಿ ವಂದಿಸಿದರು.