ತೊಕ್ಕೊಟ್ಟು : ಲಾಡ್ಜ್ ನಲ್ಲಿ ತಂಗಿದ್ದ ವೃದ್ಧರೊಬ್ಬರು ಅನುಮಾನಾಸ್ಪದ ಸಾವನ್ನಪ್ಪಿದ ಘಟನೆ ತೊಕ್ಕೊಟ್ಟಿನಲ್ಲಿ ಮಂಗಳವಾರ ನಡೆದಿದ್ದು ಮೃತರ ಕುರಿತಾಗಿ ಎರಡು ದಿನಗಳ ಹಿಂದೆ ಸುರತ್ಕಲ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಮೃತರನ್ನು ಸುರತ್ಕಲ್ ಬಳಿಯ ಕೃಷ್ಣಾಪುರ ನಿವಾಸಿ ಶೇಖರ್(71) ಎಂದು ಗುರುತಿಸಲಾಗಿದ್ದು ಪೊಲೀಸರು ನೀಡಿದ ಪ್ರಥಮ ಮಾಹಿತಿಯಂತೆ ಮೃತರು ಎರಡು ದಿನಗಳ ಹಿಂದೆ ತೊಕ್ಕೊಟ್ಟಿನ ವೃಂದಾವನ ಹೋಟೆಲ್ ನ ಉಡುಪಿ ಹೋಂನಲ್ಲಿ ಬಾಡಿಗೆಗೆ ಕೋಣೆ ಪಡೆದಿದ್ದರು. ಸಾವನ್ನಪ್ಪಿದ ಕುರಿತು ಮಂಗಳವಾರ ಸಂಜೆ ಸಿಕ್ಕಿದ ಮಾಹಿತಿ ಮೇರೆಗೆ ಪೊಲೀಸರು ಆಗಮಿಸಿ ಪರಿಶೀಲಿಸಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆಗೈದ ಕುರುಹುಗಳು ಕಾಣಿಸುತ್ತಿಲ್ಲ ಎನ್ನಲಾಗಿದ್ದು ಹೃದಯಾಘಾತ ಶಂಕೆ ವ್ಯಕ್ತಪಡಿಸಿದ್ದಾರೆ.
ಶೇಖರ್ ಅವರ ಸೊಸೆ ಎರಡು ದಿನಗಳ ಹಿಂದೆ ಸುರತ್ಕಲ್ ಠಾಣೆಯಲ್ಲಿ ನೀಡಿದ ನಾಪತ್ತೆ ದೂರಿನಂತೆ ಮೃತರು ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿದ್ದರು ಎಂದು ತಿಳಿಸಿದ್ದರು.