Site icon Ullalavani

ಕಣಚೂರು ಆಸ್ಪತ್ರೆಗೆ ಕೇನ್ಯಾ ಅಧಿಕಾರಿಗಳ ಭೇಟಿ

UN NETWORKS

ಉಳ್ಳಾಲ: ವೈದ್ಯಕೀಯ ಕ್ಷೇತ್ರವಾಗಿ ಅಭಿವೃದ್ಧಿಯಾಗುತ್ತಿರುವ ಮಂಗಳೂರಿನಲ್ಲಿ ಆರೋಗ್ಯ ಪ್ರವಾಸೋಧ್ಯಮಕ್ಕೆ ವಿಫುಲ ಅವಕಾಶವಿದ್ದು, ಮೊಂಬಾಸ ಕೌಂಟಿ ಸರಕಾರವು ಉನ್ನತ ಚಿಕಿತ್ಸೆಗೆ ಸಂಬಂಧಿಸಿದಂತೆ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ ಆರೋಗ್ಯ ಸಂಬಂಧಿಸಿದ ಒಡಂಬಡಿಕೆಯನ್ನು ನಡೆಸಲಿದೆ ಎಂದು ಕೇನ್ಯಾ ದೇಶದ ಮೊಂಬಾಸ ರಾಜ್ಯ ಸರಕಾರದ ಆರೋಗ್ಯ ಸೇವಾ ವಿಭಾಗದ ಮುಖ್ಯ ಆರೋಗ್ಯ ಅಧಿಕಾರಿ ಡಾ| ಖದೀಜಾ ಸೂದ್‍ಶಿಕೆಲಿ ಅಭಿಪ್ರಾಯಪಟ್ಟರು.

ಇಂಟರ್ ನ್ಯಾಷನಲ್ ಹೆಲ್ತ್ ಟೂರಿಸಂ ಅಡಿಯಲ್ಲಿ ಕೆನ್ಯಾ ದೇಶದ ಎರಡನೆಯ ಅತಿ ದೊಡ್ಡ ರಾಜ್ಯವಾಗಿರುವ ಮೊಂಬಾಸ ಆಡಳಿತಕ್ಕೆ ಸಂಬಂಧಪಟ್ಟ ಸಚಿವರು, ಅಧಿಕಾರಿಗಳು ರವಿವಾರ ನಾಟೆಕಲ್‍ನ ಕಣಚೂರು ವೈದ್ಯಕೀಯ ಆಸ್ಪತ್ರೆ ಹಾಗೂ ಸಂಶೋಧನೆ ಕೇಂದ್ರಕ್ಕೆ ಭೇಟಿ ನೀಡಿ ಸಂಸ್ಥೆಯ ಮುಖ್ಯಸ್ಥ ಯು.ಕೆ. ಮೋನು ಹಾಗೂ ಆಡಳಿತ ವಿಭಾಗ ಹಾಗೂ ತಜ್ಞರ ಜೊತೆಗೆ ಚರ್ಚಿಸಿದ ಬಳಿಕ ಮಾತನಾಡಿದರು.
ಮೊಂಬಾಸ ಕೃಷಿ, ವಾಣಿಜ್ಯ ವ್ಯವಹಾರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಕರಾವಳಿ ಭಾಗದಲ್ಲಿರುವ ಮಂಗಳೂರಿನ ಕಣಚೂರು ಸಂಸ್ಥೆಯ ಜೊತೆಗೆ ಇಂಟರ್ ನ್ಯಾಷನಲ್ ಹೆಲ್ತ್ ಟೂರಿಸಂ ಬಹಳಷ್ಟು ಸಹಕಾರ ಸಿಗಲಿದೆ. ನಮ್ಮ ವೈದ್ಯರು, ನರ್ಸ್ ಸೇರಿದಂತೆ ಹಲವು ಮಂದಿಗೆ ಇಲ್ಲಿ ತರಬೇತುಗೊಳಿಸಿ ತಜ್ಞರನ್ನಾಗಿಸುವ ಯೋಜನೆ ಇದೆ ಎಂದರು.

ಮಂಗಳೂರು ಬಹಳಷ್ಟು ಅಭಿವೃದ್ಧಿ ಕಂಡಿದೆ. ಇಲ್ಲಿನ ಕುರಿತಾಗಿ ಕಳೆದ ಎರಡು ದಿನಗಳಲ್ಲಿ ಹಲವು ಮಾಹಿತಿಗಳನ್ನು ಪಡೆದಿದ್ದೇವೆ. ವೈದ್ಯರ ಸೇವೆ, ರೋಗಿಗಳ ಬಗೆಗಿನ ಕಾಳಜಿ, ಸರಳ ವಿಧಾನ, ಸುಸಜ್ಜಿತ ಸೌಲಭ್ಯ, ರೋಗಿಗಳಿಗೆ ಹೊರೆಯಾಗದ ಸೇವಾ ಶುಲ್ಕ ಎಲ್ಲವನ್ನೂ ಗಮನಿಸಿದ್ದೇವೆ. ನಾವು ಕೂಡಾ ಇಂತಹ ಸೇವೆಯ ನಿರೀಕ್ಷೆಯಲ್ಲಿದ್ದೇವೆ. ಇಲ್ಲಿಗೆ ಭೇಟಿ ಕೊಟ್ಟಿರುವುದು ನಮಗೆ ಬಹಳಷ್ಟು ಖುಷಿ ಕೊಟ್ಟಿದೆ. ಮೊಂಬಾಸದಿಂದ ವೈದ್ಯರನ್ನು ನರ್ಸ್‍ಗಳನ್ನು ಇಲ್ಲಿಗೆ ಕಳುಹಿಸಿ ತರಬೇತು ಕೊಡಿಸುವ ಮೂಲಕ ಹಾಗೂ ಅಲ್ಲಿಗೆ ತಜ್ಞರನ್ನು ಕರೆಸಿಕೊಳ್ಳುವ ಮೂಲಕ ಮೊಂಬಾಸದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರುವ ಯೋಜನೆ ಇದೆ. ನಮ್ಮ ರಾಜ್ಯದಲ್ಲಿ ಎಲ್ಲ ಸಹಕಾರ ಸಿಗಲಿದ್ದು ಅವಕಾಶ ಬಳಸಿಕೊಳ್ಳಬಹುದು. ಆರೋಗ್ಯ ರಕ್ಷಣೆ, ಸೀಳುತುಟಿಯಂತಹ ಚಿಕಿತ್ಸೆಗೆ ಸಂಬಂಧಿಸಿದಂತೆ ಮೊಂಬಾಸಕ್ಕೆ ಬಹಳಷ್ಟು ಪ್ರಯೋಜನವಾಗಲಿದೆ ಎಂದರು.

ನಾಟೆಕಲ್‍ನ ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನೆ ಕೇಂದ್ರ ಚೇರ್‍ಮೆನ್ ಯು.ಕೆ. ಮೋನು ಮಾತನಾಡಿ ಇಂಟರ್ ನ್ಯಾಷನಲ್ ಮೆಡಿಕಲ್ ಟೂರಿಸಂ ಬಗ್ಗೆ ಕಳೆದ ಒಂದು ವರ್ಷದಿಂದ ರಾಜ್ಯದ ಮಂತ್ರಿಗಳು, ಸಂಸದರು ಸೇರಿಕೊಂಡು ಜಿಲ್ಲೆಗೆ ಮುಕ್ತ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಇದೀಗ ಕೆನ್ಯಾ ದೇಶದ 47 ರಾಜ್ಯಗಳಲ್ಲೊಂದಾದ ಮೊಂಬಾಸ ರಾಜ್ಯದಿಂದ ಅಲ್ಲಿನ ಆಡಳಿತ ವಿಭಾಗ ಹಾಗೂ ವೈದ್ಯಕೀಯ ಇಲಾಖೆಯ ತಜ್ಞರು ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದು ನಮ್ಮಿಂದ ಮಾಹಿತಿ ಪಡೆಯುವ ಕಾರ್ಯ ನಡೆದಿದ್ದು ಮುಂದಿನ ದಿನಗಳಲ್ಲಿ ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಆಡಳಿತ ನಿರ್ದೇಶಕ ರಹಮಾನ್, ಕಾರ್ನಿಯೋ ಫೇಶಿಯಲ್ ಸರ್ಜನ್ ಡಾ| ಮುಸ್ತಾಫ, ಆರ್ಥೀಪೆಡಿಕ್ ಸರ್ಜನ್ ಡಾ| ಜಲಾಲುದ್ದೀನ್, ವಿವಿಧ ಸರ್ಜನ್‍ಗಳಾದ ಡಾ| ಸಫ್ವಾನ್, ಡಾ| ಸಂದೀಪ್, ಆಡಳಿತ ಅಧಿಕಾರಿ ಡಾ| ರೊಹನ್ ಮೋನಿಸ್, ವೈಸ್‍ಡೀನ್ ಡಾ| ಶ್ರೀಷಾ ಕಂಡಿಗೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Exit mobile version