UN NETWORKS
ತಲಪಾಡಿ: ಗ್ರಾಮ ಪಂಚಾಯಿತಿ ಸದಸ್ಯರಿಗೆ ಸಣ್ಣ ಮೊತ್ತದ ಅನುದಾನ ಬರುವುದರಿಂದ ದೊಡ್ಡ ಮಟ್ಟದ ಕಾಮಗಾರಿ ಅಸಾಧ್ಯ, ಆದರೂ ದೇವಿಪುರಕ್ಕೆ ಕಳೆದ ಎರಡು ವರ್ಷಗಳಲ್ಲಿ 12 ಲಕ್ಷ ಪಂಚಾಯಿತಿ ಅನುದಾನ ಬಳಕೆ ಮಾಡಲಾಗಿದೆ ಎಂದು ತಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು ಹೇಳಿದರು.
ದೇವಿಪುರದಲ್ಲಿ ಸಾವಿರದಷ್ಟು ಜನಸಂಖ್ಯೆಯಿದ್ದು ಮೂವರು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಪ್ರತೀ ಸದಸ್ಯನಿಗೆ ವಾರ್ಷಿಕ 60 ಸಾವಿರ ಅನುದಾನ ಬರುತ್ತಿದ್ದು ಇದರಿಂದ ನೀರಿನ ಟ್ಯಾಂಕ್ ನಿರ್ಮಾಣ ಅಸಾಧ್ಯ. ಆದರೂ ಸದಸ್ಯರು ಒಗ್ಗಟ್ಟಿನಿಂದ ಅನುದಾನ ನೀಡಿದ್ದರಿಂದ ನೀರಿನ ತೊಟ್ಟಿ ನಿರ್ಮಿಸಲಾಗಿದೆ. ಅಲ್ಲದೆ ಕೊಳವೆ ಬಾವಿ ನಿರ್ಮಾಣಕ್ಕೆ 75 ಸಾವಿರ ಹಾಗೂ ತೆರೆದ ಬಾವಿ ಪುನಶ್ಚೇತನಕ್ಕೆ ಲಕ್ಷ ರೂಪಾಯಿ ಮೀಸಲಿಡಲಾಗಿದೆ. ಪಂಜಾಳ ದೇವಿಪುರ ರಸ್ತೆಯನ್ನೂ ಪಂಚಾಯಿತಿ ಅನುದಾನದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ತಲಪಾಡಿ ಗ್ರಾಮ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಮಾತನಾಡಿ, ನೀರು ಸಿಗುವುದು ಭಾಗ್ಯವಂತರಿಗೆ ಮಾತ್ರ. ನೀರು ಸಿಗುವ ಭರದಲ್ಲಿ ಎಂದಿಗೂ ದುರುಪಯೋಗ ಸಲ್ಲದು ಎಂದರು.
ಮುಖಂಡ ಆನಂದ ಮಯ್ಯ ನೀರಿನ ಟ್ಯಾಂಕ್ ಸಾರ್ವಜನಿಕರಿಗೆ ಸಮರ್ಪಿಸಿದರು. ಪಂಚಾಯಿತಿ ಉಪಾಧ್ಯಕ್ಷ ಜಯಲಕ್ಷ್ಮಿ ಟಿ, ಸದಸ್ಯರಾದ ಫಯಾಝ್ ಪಿಲಿಕೂರು, ಸೀತ, ವಸಂತಿ, ಬಿಜೆಪಿ ಶಕ್ತಿಕೇಂದ್ರದ ಕಾರ್ಯದರ್ಶಿ ವರುಣ್, ನಾಗರಾಜ್, ರಾಜೇಶ್ ಗುಡ್ಡೆ, ಹಿರಿಯರಾದ ಶ್ಯಾಮಲಾ ಇನ್ನಿತರರು ಉಪಸ್ಥಿತರಿದ್ದರು.
ಗ್ರಾ.ಪಂ.ಸದಸ್ಯ ಗೋಪಾಲ ಕೃಷ್ಣ ಮೇಲಾಂಟ ಸ್ವಾಗತಿಸಿದರು. ಗ್ರಾಮ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೀವ ದೇವಾಡಿಗ ವಂದಿಸಿದರು.