UN NETWORKS
ತೊಕ್ಕೊಟ್ಟು: ಹೆಲ್ಪ್ ಇಂಡಿಯಾ ಫೌಂಡೇಶನ್ ತೊಕ್ಕೊಟ್ಟು ಇದರ ವತಿಯಿಂದ ಉಚಿತ ಕನ್ನಡಕ ವಿತರಣೆ ಹಾಗೂ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಭಾನುವಾರ ತೊಕ್ಕೊಟ್ಟುವಿನ ಹೆಲ್ಪ್ ಇಂಡಿಯಾ ಫೌಂಡೇಶನ್ ಕಚೇರಿ ಬಳಿ ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್ ಅವರು, ಹೆಲ್ಪ್ ಇಂಡಿಯಾ ಫೌಂಡೇಶನ್ ರಸ್ತೆ ಬದಿಯಲ್ಲಿದ್ದ ನಿರ್ಗತಿಕರನ್ನು, ಮಾನಸಿಕ ಸ್ಥಿಮಿತ ಕಳೆದುಕೊಂಡ ಎಷ್ಟೋ ಜನರನ್ನು ಸಂತೈಸಿ ಆಸ್ಪತ್ರೆಗೆ ದಾಖಲಿಸುವುದರೊಂದಿಗೆ ಮನೆಗೆ ತಲುಪಿಸುವ ಕಾರ್ಯ ಮಾಡಿದೆ. ಇಂತಹ ಆರೈಕೆ ತಾಯಿಯಿಂದ ಮಗನಿಗೆ ಸಿಗಲು ಮಾತ್ರ ಸಾಧ್ಯ. ಇಂತಹ ಪುಣ್ಯದ ಕೆಲಸವನ್ನು ಹೆಲ್ಫ್ ಇಂಡಿಯಾ ಪೌಂಡೇಶನ್ ಕಳೆದ ಹಲವಾರು ವರ್ಷಗಳಿಂದ ಮಾಡುತ್ತಿರುವುದು ನಿಜವಾಗಿಯೂ ಮಾದರಿಯಾಗಿದೆ ಎಂದು ಹೇಳಿದರು.
ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಮಹಮ್ಮದ್ ಕುಂಞ ಅವರು ಮಾತನಾಡಿ ಸಮಾಜದಲ್ಲಿ ಜನರನ್ನು ಒಂದುಗೂಡಿಸುವ, ಮನಸ್ಸುಗಳನ್ನು ಕಟ್ಟುವ ಕಾರ್ಯವನ್ನು ಮಾಡುವ ಸಂಘಟನೆಗಳು ನಮಗೆ ಬೇಕಿದೆ. ಮನುಷ್ಯ ಸಂಬಂಧವನ್ನು ಒಡೆಯುವ, ಬೇರ್ಪಡಿಸುವ ಸಂಘಟನೆಗಳು ಅಥವಾ ಮನಸ್ಸುಗಳು ಬೆಳೆಯುತ್ತಿರುವಾಗ ಸಮಾಜದಲ್ಲಿ ಮಾದರಿ ಕಾರ್ಯದ ಮೂಲಕ ಸಾಮರಸ್ಯಗಳನು ಬೆಳೆಸುತ್ತಿರುವ ಹೆಲ್ಪ್ ಇಂಡಿಯಾ ಫೌಂಡೇಶನ್‍ನೊಂದಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಲ್ಪ್ ಇಂಡಿಯಾ ಫೌಂಡೇಶನ್‍ನ ಉಪಾಧ್ಯಕ್ಷರಾದ ಉಮರ್ ಪಾರೂಕ್ ಪಟ್ಲ ಅವರು ವಹಿಸಿದ್ದರು.
ಹಾಗೂ ಇದೇ ಸಂದರ್ಭದಲ್ಲಿ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಹಾಜಿ ಯು.ಕೆ.ಮೋನು ಕಣಚೂರು ಹಾಗೂ ಮಕ್ಕಳ ತಜ್ಞರಾದ ಡಾ.ರವಿ ಕಿರಣ್ ಎಸ್ ಆರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಳ್ಳಾಲ ಸೈಯ್ಯದ್ ಮದನಿ ದರ್ಗಾದ ಅಧ್ಯಕ್ಷರಾದ ಅಬ್ದುಲ್ ರಶೀದ್ ಹಾಜಿ, ಉಳ್ಳಾಲ ನಗರಸಭೆ ಅಧ್ಯಕ್ಷರಾದ ಹುಸೈನ್ ಕುಂಞ ಮೋನು, ಸಹಾಯಕ ಉಪನ್ಯಾಸಕ ಡಾ.ಬದ್ರಿನಾಥ್ ತಲ್ವಾರ್, ನ್ಯಾಯಾವಾದಿ ಗಂಗಾಧರ ಉಳ್ಳಾಲ, ಕರ್ನಾಟಕ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿಯ ಕರಂಬಾರ್ ಮಹಮ್ಮದ್, ಅಬ್ದುಲ್ ರಹಿಮಾನ್ ಭಾಷಾ, ಎಚ್.ಕೆ.ಖಾದರ್, ಯು.ಎಚ್.ಹಸೈನಾರ್, ಸ್ಥಾಯಿಸಮಿತಿ ಸದಸ್ಯ ಉಸ್ಮಾನ್ ಕಲ್ಲಾಪು, ಯು.ಬಿ.ಸಲೀಂ, ಹೆಲ್ಪ್ ಇಂಡಿಯಾ ಫೌಂಡೇಶನ್‍ನ ರಾಝಿಕ್ ಉಳ್ಳಾಲ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಹ್ಮದ್ ತಮೀಮಾ ಬಿನ್ ರಾಝಿಕ್ ಕಿರಾಅತ್ ಪಠಿಸಿದರು. ಶಕೀಲ್ ತುಂಬೆ ಅವರು ಸ್ವಾಗತಿಸಿದರು. ಝಾಕಿರ್ ಅವರು ಕಾರ್ಯಕ್ರಮ ನಿರೂಪಿಸಿದರು.