Site icon Ullalavani

ಮಂಗಳಗಂಗೋತ್ರಿಯಲ್ಲಿ ವೈಫೈ ಸೌಲಭ್ಯ ಉದ್ಘಾಟನೆ

ಕೊಣಾಜೆ: ಮಂಗಳೂರು ಇಂದು ಶಿಕ್ಷಣ ಕಾಶಿಯೆಂದೇ ಖ್ಯಾತಿಯನ್ನು ಪಡೆದಿದೆ. ಕಾರಣ ಈ ಪ್ರದೇಶದಲ್ಲಿರುವ ವಿಶ್ವವಿದ್ಯಾನಿಲಯ, ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಹಾಗೂ ಶೈಕ್ಷಣಿಕ ಸಂಸ್ಥೆಗಳು, ಇದರಿಂದ ದೇಶ ವಿದೇಶದ ವಿದ್ಯಾರ್ಥಿಗಳನ್ನು ಮಂಗಳೂರು ಆಕರ್ಷಿಸುವಂತಾಗಿದೆ. ಆದ್ದರಿಂದ ಇಂದಿನ ಆಧುನಿಕ ಕಾಲಕ್ಕನುಸಾರವಾಗಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಆಧುನಿಕ ಸೌಲಭ್ಯಗಳನ್ನು ನಾವು ವಿಸ್ತರಿಸಿಕೊಳ್ಳಬೇಕಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್‍ನಲ್ಲಿ ವೈಫೈ ಸೌಲಭ್ಯವನ್ನು ಶನಿವಾರ ಮಂಗಳಾ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ, ತಂತ್ರಜ್ಞಾನದ ಯುಗದಲ್ಲಿ ನಾವಿದ್ದೇವೆ. ಇಂದು ಜಗ್ತತು ಎಷ್ಟು ವೇಗದಲ್ಲಿ ಆಧುನಿಕತೆಯೊಂದಿಗೆ ಬದಲಾವಣೆಯಾಗುತ್ತಿದ್ದೆಯೋ ಹಾಗೆಯೇ ನಮ್ಮ ಜೀವನ ಶೈಲಿಯೂ ವೇಗತೆಯನ್ನು ಪಡೆಯುತ್ತಿದೆ. ಬದಲಾಗುತ್ತಿರುವ ಇಂದಿನ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಅನುಕೂಲವಾಗುವಂತೆ ಮಂಗಳೂರು ವಿ.ವಿ,ಯಲ್ಲಿ ವೈಫೈ ಸೌಲಭ್ಯ ಉದ್ಘಾಟನೆಗೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಯೋಗ ವಿಜ್ಞಾನವು ಇವತ್ತು ಇಡೀ ಜಗತ್ತಿಗೇ ಮಾದರಿ ವಿಷಯವಾಗಿ ಬಹಳಷ್ಟು ಜನರು ಆಕರ್ಷಿತರಾಗಿದ್ದಾರೆ. ಇಂತಹ ಯೋಗ ವಿಜ್ಞಾನ ವಿಭಾಗ ಸೇರಿದಂತೆ ಮಂಗಳೂರು ವಿಶ್ವವಿದ್ಯಾನಿಲಯವು ಕ್ರೀಡೆ, ಶೈಕ್ಷಣಿಕ ಚಟುವಟಿಕೆಯಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಂಡಿದೆ. ಗೂಗಲ್, ವಾಟ್ಪಪ್, ಅಂತರ್ಜಾಲ ಹೀಗೆ ಇಂದು ಹಲವಾರು ಸಾಮಾಜಿಕ ಜಾಲತಾಣಗಳು ವೇಗವಾಗಿ ಸಮಾಜದ ಪರಿವರ್ತನೆಗೆ ಕಾರಣವಾಗುತ್ತಿವೆ. ಅದೇ ರೀತಿಯಲ್ಲಿ ಶೈಕ್ಷಣಿಕ ರಂಗವು ಕೂಡಾ ಇದಕ್ಕೆ ಪೂರಕವಾಗಿ ಶೈಕ್ಷಣಿಕ ಆಧುನಿಕ ಸೌಲಭ್ಯಗಳೊಂದಿಗೆ ವಿದ್ಯಾರ್ಥಿಗಳಿಗೆ ಪೂರಕ ವಾತಾವರಣವನ್ನು ನಿರ್ಮಿಸಬೇಕು ಎಂದರು ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಅವರು, ಮಂಗಳೂರು ವಿ.ವಿ.ಕ್ಯಾಂಪಸ್‍ನಲ್ಲಿ ಇಂದು ವೈಫೈ ಸೇವೆಯ ಸೌಲಭ್ಯವು ಉದ್ಘಾಟನೆಗೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ರಾಜ್ಯದ, ಹೊರ ರಾಜ್ಯದ ಹಾಗೂ ವಿದೇಶದ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆಗೈಯ್ಯುತ್ತಿದ್ದು ಇವರ ಶೈಕ್ಷಣಿಕ ಸಾಧನೆಗೆ ಇದು ಪೂರಕ ವಾತವಾರಣವನ್ನು ಕಲ್ಪಿಸಿಕೊಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿ.ವಿ.ಯ ಪರೀಕ್ಷಾಂಗ ಕುಲಸಚಿವ ಪ್ರೊ.ನಾರಾಯಣ್, ಕಂಪ್ಯೂಟರ್ ವಿಜ್ಞಾನ ವಿಭಾಗದ ಪ್ರೊ.ನಂಜನಗೂಡು, ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಪ್ರೊ.ಪಿ.ಎಲ್.ಧರ್ಮ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Exit mobile version