Site icon Ullalavani

ಪಜೀರು ಗ್ರಾಮ ಪಂಚಾಯತ್ ಹಕ್ಕುಪತ್ರ ವಿತರಣೆ

UN NETWORKS

ಉಳ್ಳಾಲ: ಮಕ್ಕಳೊಡನೆ ಧೈರ್ಯದಿಂದ ಸ್ವಾಭಿಮಾನದಿಂದ ಸ್ವಂತ ಮನೆ ಎಂದು ಹೇಳುವ ಆತ್ಮವಿಶ್ವಾಸ ಬೆಳೆಸುವ ಕೆಲಸ ರಾಜ್ಯ ಸರಕಾರದಿಂದ ಹಕ್ಕುಪತ್ರ ನೀಡುವ ಮೂಲಕ ಆಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಅವರು ಪಜೀರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಪಂಚಾಯತ್ ಸಭಾಭವನದಲ್ಲಿ ಜರಗಿದ 94 ಸಿ ಸಿ ಹಕ್ಕು ಪತ್ರಗಳ ವಿತರಣಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ಹಿಂದಿನ ಸರಕಾರಗಳು ಯಾವುದೇ ರೀತಿಯ ಜನಪರ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಹಕ್ಕುಪತ್ರ ನೀಡಲು ಅನುದಾನದ ಅಗತ್ಯವಿದೆಯೇ? ವಿಳಂಬವಾಗಲು ಕಾರಣ ಏನು ಎಂಬುದನ್ನು ಆತ್ಮ ವಿಮರ್ಶೆ ಮಾಡಬೇಕಿದೆ. ಅಧಿಕಾರ ಹಂಚುವಲ್ಲಿಯೇ ಮಗ್ನರಾಗಿದ್ದರು. ಯೋಜನೆಯಲ್ಲಿ ತಾರತಮ್ಯ ಮಾಡಿಲ್ಲ. ಮನೆಗೆ ಕೆಲಸ ಕೇಳಿಕೊಂಡು ಬಂದವರಲ್ಲಿ ಧರ್ಮ, ಪಕ್ಷ ಕೇಳದ ಕೆಲಸ ನಿರ್ವಹಿಸಿ ಕೊಟ್ಟಿದ್ದೇನೆ. ಅನ್ನಭಾಗ್ಯ ಯೋಜನೆ ದೇಶದಲ್ಲಿ ಎಲ್ಲೂ ಇಲ್ಲ. ನಿರ್ಗತಿಕರು ಮೂರು ಹೊತ್ತು ಊಟ ಮಾಡಬೇಕು ಅನ್ನುವ ಉದ್ದೇಶದಿಂದ ಯೋಜನೆಯನ್ನು ಮುಖ್ಯಮಂತ್ರಿ ಜಾರಿ ಮಾಡಿದ್ದಾರೆ. ಕ್ರೋಢೀಕರಿಸಿದ ಸಂಪತ್ತು ಎಲ್ಲಾ ವರ್ಗದವರಿಗೂ ಸಿಗಬೇಕು ಅನ್ನುವ ಉದ್ದೇಶದಿಂದ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.

ಗೋರಕ್ಷಣೆ ಮಾತ್ರ ಬೊಬ್ಬೆ ಹಾಕುವವರಿದ್ದಾರೆ. ಆದರೆ ರಾಜ್ಯ ಸರಕಾರ ಗೋಸಂತತಿ ಅಭಿವೃದ್ಧಿಗೆ ಅನುದಾನ ಒದಗಿಸುವ ಮೂಲಕ ಹಾಲು ಉತ್ಪಾದನೆಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ. ,ಈ ವರ್ಷದಿಂದ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡುವ ಕೆಲಸ ಆಗಲಿದೆ. ಬಂಟ, ವಿಶ್ವಕರ್ಮ, ಬಿಲ್ಲವ, ಭಗವತಿ , ಕೊಲ್ಯ ನಾರಾಯಣಗುರು, ಗಟ್ಟಿ ಸಮಾಜ, ಕುಲಾಲ ಸಮಾಜ, ಅಲ್ ಮದೀನ, ಮುಡಿಪು ಚರ್ಚ್ , ಕುಡುಬಿ ಸಮುದಾಯದವರಿಗೆ ತಾರತಮ್ಯ ನಡೆಸದೆ ಅನುದಾನ ಬಿಡುಗಡೆಗೊಳಿಸಿದೆ. ಅತಿ ಹೆಚ್ಚು ಬಂಡವಾಳ ಹೂಡಿಕೆ ರಾಜ್ಯಕ್ಕೆ 6.5 ಲಕ್ಷ ಕೋಟಿ ಹಾಕಲಾಗಿದ್ದು, ಇದರಿಂದ 13 ಲಕ್ಷ ಕೋಟಿ ಲಾಭವಾಗಿದೆ. ಎಂದರು.

ಪಂಚಾಯತ್ ಅಧ್ಯಕ್ಷ ಸೀತಾರಾಮ ಶೆಟ್ಟಿ, ಉಪಾಧ್ಯಕ್ಷ ಜ್ಯೋತಿ ಪದ್ಮನಾಭ ಪೂಜಾರಿ, ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಜಿ.ಪಂ ಸದಸ್ಯೆ ಮಮತಾ ಡಿ.ಎಸ್ ಗಟ್ಟಿ, ಮಾಜಿ ಪಂ. ಅದ್ಯಕ್ಷರುಗಳಾದ ನಾಸೀರ್ ಮೊಯ್ದೀನ್, ಇಮ್ತಿಯಾಝ್, ತಾ.ಪಂ ಮಾಜಿ ಸದಸ್ಯ ಮುಸ್ತಾಫ ಹರೇಕಳ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಸಿದ್ದೀಖ್ ಪಾರೆ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಪಂ.ಅಭಿವೃದ್ಧಿ ಅಧಿಕಾರಿ ಸ್ಮೃತಿ, ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭ ಪಜೀರು ಪಂಚಾಯಿತಿ ವ್ಯಾಪ್ತಿಯಲ್ಲಿ ಪೂರ್ಣಗೊಂಡ ರಸ್ತೆ ಕಾಮಗಾರಿಯನ್ನು ಉದ್ಘಾಟಿಸಲಾಯಿತು.ತಾ.ಪಂ ಮಾಜಿ ಸದಸ್ಯ ಉಮ್ಮರ್ ಪಜೀರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಫೀಕ್ ಪಜೀರು ಕಾರ್ಯಕ್ರಮ ನಿರೂಪಿಸಿದರು.

Exit mobile version