UN NETWORKS
ಉಳ್ಳಾಲ: ಲೇಸರ್ ತಂತ್ರಜ್ಞಾನದ ಚಿಕಿತ್ಸಾ ವಿಧಾನದಲ್ಲಿ ಪರಿಣತರಾಗಲು ಸಮಯ ತಗಲುವುದು, ಅದಕ್ಕಾಗಿ ಶ್ರಮದ ಅಗತ್ಯವಿದೆ ಎಂದು ಯುರೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ಇದರ ಮಾಜಿ ಅಧ್ಯಕ್ಷ ಹಾಗೂ ಮಂಗಳೂರು ಕೆಎಂಸಿಯ ಪ್ರೊ. ಡಾ| ಪಿ.ವೇಣುಗೋಪಾಲ್ ಹೇಳಿದರು.
ತಂತ್ರಜ್ಞಾನಗಳು ಮುಂದುವರಿಯುತ್ತಿದ್ದಂತೆ ಮೂತ್ರಶಾಸ್ತ್ರ ಚಿಕಿತ್ಸೆ ವಿಧಾನದಲ್ಲೂ ಅನೇಕ ಬದಲಾವಣೆಗಳು ಆಗಿವೆ. 1965 ರಲ್ಲಿ ತೆರೆದ ಶಸ್ತ್ರಚಿಕಿತ್ಸೆ ವಿಧಾನದಲ್ಲಿ ಚಿಕಿತ್ಸೆ ತರಬೇತಿ ಪಡೆದುಕೊಂಡಿದ್ದಲ್ಲಿ, ಸೇವೆ ಆರಂಭದ ಬಳಿಕ ಚಿಕಿತ್ಸೆ ವಿಧಾನವೇ ಬದಲಾಗಿ, ಸೇವಾ ಅವಧಿಯಲ್ಲೇ ಅನುಭವದ ಮೂಲಕ ತರಬೇತಿ ಪಡೆಯಬೇಕಾಯಿತು. ಮೂತ್ರಶಾಸ್ತ್ರ ವಿಭಾಗದಲ್ಲಿ ತೆರೆದ ಶಸ್ತ್ರಚಿಕಿತ್ಸೆಯೇ ಉತ್ತಮ ವಿಧಾನವಾಗಿತ್ತು. ಆದರೆ ನೂತನ ತಂತ್ರಜ್ಞಾನ ವಿಧಾನದಿಂದ ರಕ್ತಸ್ರಾವ, ಸೋಂಕು ತಡೆಗಟ್ಟಲು ಸಾಧ್ಯವಾಗಿದೆ. ನೂತನ ಲೇಸರ್ ತಂತ್ರಜ್ಞಾನದಲ್ಲಿ ಪರಿಣತರಾಗಲು ಸಮಯ ಹಾಗೂ ಶ್ರಮದ ಅಗತ್ಯವಿದೆ. ಈ ಮೂಲಕ ಯುವ ವೈದ್ಯರು ಯಶಸ್ವಿಯಾಗಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ಮಾತನಾಡಿ ಆರೋಗ್ಯಕರ ಸಮಾಜ ನಿರ್ಮಿಸುವಲ್ಲಿ ಕ್ಷೇಮ ಆಸ್ಪತ್ರೆ ಹಲವು ವರ್ಷಗಳಿಂದ ಕೈಗೆಟಕುವ ದರದಲ್ಲಿ ರೋಗಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಯಶಸ್ಸಿನ ಹಾದಿಯಲ್ಲಿ ಮುಂದುವರಿಯುತ್ತಿದೆ. ಆಸ್ಪತ್ರೆ ಮೂತ್ರಶಾಸ್ತ್ರ ವಿಭಾಗ ಉತ್ತಮವಾಗಿ ಕಾರ್ಯಾಚರಿಸುತ್ತಿರುವುದರಿಂದ ಆಸ್ಪತ್ರೆ ಯಶಸ್ಸಿನಲ್ಲಿ ಉತ್ತಮವಾಗಿ ಕೈಜೋಡಿಸಿದೆ. ರಕ್ತಸ್ರಾವ, ಸೋಂಕು ತಡೆಗಟ್ಟುವಿಕೆ ಹಾಗೂ ಗಾಯ ಗುಣವಾಗಲು ತೆಗೆದುಕೊಳ್ಳುವ ಸಮಯವನ್ನು ಕಡಿಮೆಗೊಳಿಸುವ ಉದ್ದೇಶದೊಂದಿಗೆ ನೂತನ ತಂತ್ರಜ್ಞಾನಗಳನ್ನು ಆಸ್ಪತ್ರೆಯಲ್ಲಿ ಅಳವಡಿಸಲಾಗುತ್ತಿದೆ. ತೆರೆದ ಶಸ್ತ್ರಚಿಕಿತ್ಸೆ ಅನುಕೂಲವಾದಾಗ ನಡೆಸಲಾಗುತ್ತದೆ. ಎಂದಿಗೂ ಇತಿಹಾಸ ಆಗಲು ಬಿಡುವುದಿಲ್ಲ ಎಂದರು.
ಉಪಕುಲಾಧಿಪತಿ ಪ್ರೊ. ಶಾಂತಾರಾಂ ಶೆಟ್ಟಿ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಅರಿತು ರೋಗಿಗಳೊಂದಿಗೆ ಮುಂದುವರಿಯುವ ಮನಸ್ಥಿತಿಯನ್ನು ವೈದ್ಯರು ಬೆಳೆಸಬೇಕಿದೆ. ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ರೋಗಿಗಳಿಗೆ ಅನುಕೂಲವಾಗುವಂತೆ ಚಿಕಿತ್ಸೆಯಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಕುಲಪತಿ ಡಾ| ಸತೀಶ್ ಕುಮಾರ್ ಭಂಡಾರಿ, , ಕ್ಷೇಮ ಡೀನ್ ಡಾ| ಪಿ.ಯಸ್ ಪ್ರಕಾಶ್ , ಕ್ಷೇಮ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಮೇಜರ್ ಡಾ| ಎಸ್.ಕೆ.ಹಿರೇಮಠ್ ಮುಖ್ಯ ಅತಿಥಿಗಳಾಗಿದ್ದರು.
ಕ್ಷೇಮ ಮೂತ್ರಶಾಸ್ತ್ರ ವಿಭಾಗ ಮುಖ್ಯಸ್ಥ ಡಾ| ರಾಜೀವ್ ಟಿ.ಪಿ ಸ್ವಾಗತಿಸಿದರು.