UN NETWORKS
ಕೊಣಾಜೆ: ಸಮಾಜದಲ್ಲಿ ಕಲಾವಿದರನ್ನು ಗುರುತಿಸುವ ಕಾರ್ಯ ನಿರಂತರವಾಗಿ ನಡೆಯಬೇಕಿದೆ. ಅಲ್ಲದೆ ಅಶಕ್ತ ಕಲಾವಿದರನ್ನು ಪ್ರೋತ್ಸಾಹಿಸಿ ಅವರಿಗೆ ಜೀವನ ಭದ್ರತೆಯನ್ನು ಒದಗಿಸುವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಕಳೆದ ಎರಡುವರೇ ವರ್ಷದಿಂದ ಅಶಕ್ತ ಕಲಾವಿದರಿಗೆ ಮತ್ತಿ ಅವರ ಕುಟುಂಬಕ್ಕೆ ಸುಮಾರು 1.50 ಕೋಟಿ ರೂ. ಸಹಾಯಧನವನ್ನು ವಿತರಿಸಲಾಗಿದೆ. ಇದೆಲ್ಲವೂ ಆ ಕಟೀಲು ದೇವಿಯ ಆಶೀರ್ವಾದದಿಂದ ನಡೆಯುತ್ತಿದೆ ಎಂದು ಯಕ್ಷದ್ರುವ ಪಟ್ಲ ಫೌಂಡೇಶನ್‍ನ ಅಧ್ಯಕ್ಷರಾದ ಸತೀಶ್ ಶೆಟ್ಟಿ ಪಟ್ಲ ಅವರು ಹೇಳಿದರು.
ಅವರು ಮುಡಿಪುವಿನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್(ರಿ)ಮಂಗಳೂರು ಇದರ ಮುಡಿಪು ಘಟಕದ ಉದ್ಘಾಟನೆಯನ್ನು ಬುಧವಾರ ನೆರವೇರಿಸಿ ಮಾತನಾಡಿದರು.
ಯಕ್ಷಗಾನ ಕಲಾವಿದರು ಆರ್ಥಿಕವಾಗಿ ಎಷ್ಟೇ ಸಂಕಷ್ಟದಲ್ಲಿದ್ದರೂ ಯಕ್ಷಗಾನ ಕಲೆಯನ್ನು ಶ್ರೀಮಂತಗೊಳಿಸುವಲ್ಲಿ ಬಹಳಷ್ಟು ಶ್ರಮವನ್ನು ಪಡುತ್ತಿದ್ದಾರೆ. ಆದ್ದರಿಂದ ಇಂತಹ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ. ಯಕ್ಷಗಾನ ಪ್ರೇಮಿಗಳ ಸಹಕಾರದೊಂದಿಗೆ ಫೌಂಡೇಶನ್‍ನ ವಿಸ್ತಾರದೊಂದಿಗೆ ಜವಾಬ್ಧಾರಿಯೂ ಹೆಚ್ಚುತ್ತಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕನ್ನಡ ಪ್ರಾಧ್ಯಾಪಕರಾದ ಡಾ.ನಾಗವೇಣಿ ಮಂಚಿ ಅವರು, ಕಲಾವಿದ ಅತೃಪ್ತನಾಗಿದ್ದರೆ ಕಲೆ ಬೆಳೆಯಲು ಸಾಧ್ಯವಿಲ್ಲ. ಸಂತೃಪ್ತ ಕಲಾವಿದನಿಂದ ಮಾತ್ರ ಕಲೆ ಸಮೃದ್ಧಿಯಾಗಿ ಬೆಳೆಯಲು ಸಾಧ್ಯವಿದೆ. ಯಕ್ಷಗಾನ ಆಗಲೀ ಕಲಾವಿದನಾಗಲೀ ಎಂದಿಗೂ ತಮ್ಮ ಚೌಕಟ್ಟನ್ನು ಮೀರಿ ಬೆಳೆದಿಲ್ಲ. ಇದು ಯಕ್ಷಗಾನ ಕಲೆಯ ಪ್ರಭಾವವಾಗಿದೆ. ಆದ್ದರಿಂದ ಇಂತಹ ಕಲೆಗೆ ನಾವೆಲ್ಲರೂ ಪ್ರೋತ್ಸಾಹಿಸಿ ಬೆಳೆಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಸ್‍ಡಿಸಿಸಿ ಬ್ಯಾಂಕ್‍ನ ನಿರ್ದೇಶಕರಾದ ಟಿ.ಜಿ.ರಾಜಾರಾಮ್ ಭಟ್ ಅವರು, ಕಳೆದ ಹಲವಾರು ವರ್ಷಗಳ ಹಿಂದೆಯೇ ಮುಡಿಪು ಪರಿಸರದ ಜನರು ಯಕ್ಷಗಾನಕ್ಕೆ ಬಹಳಷ್ಟು ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ. ಇದೀಗ ಯಕ್ಷ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಆರಂಭಗೊಂಡ ಯಕ್ಷಧ್ರುವ ಪಟ್ಲ ಫೌಂಡೇಶನ್‍ನ ಕಾರ್ಯಕ್ಕೆ ಈ ಭಾಗದಲ್ಲಿ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರಾದ ನಗ್ರಿ ಮಹಾಬಲ ರೈ ಅವರು ಒಂದು ಲಕ್ಷ ರೂ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಯಮಿ ರಾಧಾಕೃಷ್ಣ ರೈ ಉಮಿಯ, ಮುಡಿಪು ಲಯನ್ಸ್ ಕ್ಲಬ್‍ನ ಅಧ್ಯಕ್ಷರಾದ ರತ್ನಾಕರ ರೈ ಕಾಯೆರ್, ಉದ್ಯಮಿ ಸೀತಾರಾಮ ಶೆಟ್ಟಿ ನೆತ್ತಿಲಬಾಳಿಕೆ, ಕುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಮಿತ್ತಕೋಡಿ, ಕುರ್ನಾಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಶಾಂತ್ ಕಾಜವ, ಮುಡಿಪು ವಿಶ್ವಕರ್ಮ ಸಂಘದ ಯೋಗೀಶ್ ಆಚಾರ್ಯ, ಚಂದ್ರಹಾಸ ಗುಂಡ್ಯ, ಸುಂದರ ಪೂಜಾರಿ ಇರಾ, ಗೋಪಾಲ ಅಶ್ವತ್ಥಾಡಿ, ಚಂದ್ರಶೇಖರ ಗಟ್ಟಿ ಗುಂಡ್ಯ, ಚಿನ್ನಯ ಸಾಲ್ಯಾನ್ ಚೇಳೂರು, ಪುರುಷೋತ್ತಮ ಭಂಡಾರಿ, ಸುದೇಶ್ ಕುಮಾರ್ ರೈ, ಡಾ.ಮನು, ಪ್ರದೀಪ್ ಆಳ್ವ, ಸೂರ್ಯನಾರಾಯಣ ಆಳ್ವ ಮೊದಲಾದವರು ಉಪಸ್ಥಿತರಿದ್ದರು.
ಯಕ್ಷಧ್ರುವ ಪಟ್ಲ ಫೌಂಡೇಶನ್‍ನ ಮುಡಿಪು ಘಟಕದ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ವಿನಯಕೃಷ್ಣ ಭಟ್ ವಂದಿಸಿದರು. ರಾಜೇಶ್ ಶೆಟ್ಟಿ ಪಜೀರುಗುತ್ತು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಯಕ್ಷಗಾನ ನಾಟ್ಯ ಹಾಸ್ಯ ವೈಭವ ಕಾರ್ಯಕ್ರಮವು ನಡೆಯಿತು.