Site icon Ullalavani

ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ನಿಂದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪೂರ್ವ ತಯಾರಿ

UN NETWORKS

ಉಳ್ಳಾಲ : ಪರೀಕ್ಷೆ ಅನ್ನುವುದು ಜೀವನದ ಹಂತ, ಅದನ್ನು ಪ್ರೀತಿಯಿಂದ ಎದುರಿಸುವ ಮನಸ್ಥಿತಿಯನ್ನು ವಿದ್ಯಾರ್ಥಿಗಳು ಬೆಳೆಸಬೇಕಿದೆ ಎಂದು ಜಿಲ್ಲ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಎಂ.ಆರ್.ರವಿ ಅಭಿಪ್ರಾಯಪಟ್ಟರು.

ಅವರು ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ಆಶ್ರಯದಲ್ಲಿ ತೊಕ್ಕೊಟ್ಟು ಕಲ್ಲಾಪು ಖಾಸಗಿ ಸಭಾಂಗಣದಲ್ಲಿ ಮಂಗಳವಾರ ಉಳ್ಳಾಲ ಝೋನಲ್ ವ್ಯಾಪ್ತಿಯ ಅನುದಾನ ಹಾಗೂ ಅನುದಾನ ರಹಿತ ಶಾಲೆಗಳ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪರೀಕ್ಷೆ ಪೂರ್ವ ತಯಾರಿ ಹಾಗೂ 2017ರ ಎಸ್ ಎಸ್ ಎಲ್ ಸಿ ಟಾಪರ್ ವಿದ್ಯಾರ್ಥಿ ಗಳಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ವರ್ಷದ ಸಾಮರ್ಥ್ಯ ವನ್ನು ಮೂರು ಗಂಟೆಗಳಲ್ಲಿ ಅಳೆಯುವಂತಹ ಪ್ರಬಲ ಮಾಧ್ಯಮ ಪರೀಕ್ಷೆಯಾಗಿದೆ. ಕಳೆದ ಸಾಲಿನಲ್ಲಿ 5,283 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು. ಗಣಿತ, ವಿಜ್ಞಾನ ವಿಷಯಗಳಲ್ಲಿ ಹೆಚ್ಚಾಗಿ ಅನುತ್ತೀರ್ಣಗೊಳ್ಳುತ್ತಿದ್ದ ವಿದ್ಯಾರ್ಥಿ ಗಳು ಕಳೆದ ಬಾರಿ ಸಮಾಜ ವಿಜ್ಞಾನ ಹಾಗೂ ಹಿಂದಿ ಭಾಷೆಯಲ್ಲಿ ಅನುತ್ತೀರ್ಣಗೊಂಡವರಿದ್ದಾರೆ. ಸಮಸ್ಯೆಗಳ ಚರ್ಚೆಯನ್ನು ನಡೆಸಿ, ಪರೀಕ್ಷೆಗಳನ್ನು ಎದುರಿಸುವ ಶಕ್ತಿಯನ್ನು ನಿರ್ಮಿಸುವ ಕಾರ್ಯ ಕಾರ್ಯಕ್ರಮದಿಂದ ಆಗಿದೆ. ಬರೆಯುವ ಅಭ್ಯಾಸವನ್ನು ಬೆಳೆಸುತ್ತಾ, ಕಲಿಯುವ ಸಂದರ್ಭ ಪ್ರಮುಖ ಅಂಶಗಳನ್ನು ಬರೆಯುತ್ತಿದ್ದಲ್ಲಿ ಪರೀಕ್ಷೆ ಸಂದರ್ಭದಲ್ಲಿ ಅನಿರೀಕ್ಷಿತ ಗೊಂದಲ, ಆತಂಕ ದೂರವಾಗಿ ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಲು ಸಾಧ್ಯ. ಹೆತ್ತವರ ಮತ್ತು ಶಿಕ್ಷಕರ ಜತೆಗೆ ಚರ್ಚಿಸುತ್ತಾ ಸಂಶಯಗಳನ್ನು ನಿವಾರಿಸುತ್ತಾ ಪರೀಕ್ಷೆಗಳನ್ನು ಎದುರಿಸಿ ಎಂದರು.

ದ.ಕ ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣ ಸಮಿತಿ ಅಧ್ಯಕ್ಷ ಸಾಹುಲ್ ಹಮೀದ್ ಮಾತನಾಡಿ ಶಿಕ್ಷಣ ಮತ್ತು ಆರೋಗ್ಯ ಜೀವನದ ಮುಖ್ಯ ವಿಚಾರವಾಗಿದೆ. ಜಿಲ್ಲೆಯ ಫಲಿತಾಂಶ ಕಡಿಮೆಯಾಗಲು ಮುಸ್ಲಿಂ ಮಕ್ಕಳ ಶಿಕ್ಷಣ ಪಡೆಯದೇ ಇರುವ ಕಾರಣ. ಅದಕ್ಕಾಗಿ ಜಿ.ಪಂ ಕಾರ್ಯನಿರ್ವಹಣಾಧಿಕಾರಿಗಳು ಪ್ರತೀ ಮದರಸಗಳಿಗೆ ಪತ್ರ ಬರೆದು ಕಾಳಜಿಯನ್ನು ವ್ಯಕ್ತಪಡಿಸಿರುವ ಕಾಳಜಿ ಮೆಚ್ಚುವಂತಹದ್ದಾಗಿದೆ. ಉತ್ತಮ ಶಿಕ್ಷಣ ಪಡೆದು ಜೀವನ ನಡೆಸುವ ಮೂಲಕ ಉತ್ತಮ ಪ್ರಜೆಯಾಗಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ಅಧ್ಯಕ್ಷರು ಅನ್ವರ್ ಹುಸೈನ್ ಮಾತನಾಡಿ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮುಂದೆ ಬರಬೇಕು ಅನ್ನುವ ಉದ್ದೇಶದಿಂದ ಸೆಂಟ್ರಲ್ ಕಮಿಟಿ ಕಾರ್ಯಕ್ರಮ ಆಯೋಜಿಸಿದ್ದು, ಇದರ ಸದುಪಯೋಗವನ್ನು ಪಡೆದುಕೊಂಡು ಮುಂಬರುವ ಪರೀಕ್ಷೆಗಳಿಗೆ ಉತ್ತಮ ಕಲಿತು, ಉತ್ತಮ ಫಲಿತಾಂಶ ತರುವ ಮೂಲಕ ಶಾಲೆ ಹಾಗೂ ಜಿಲ್ಲೆಯ ಕೀರ್ತಿಯನ್ನು ಬೆಳಗಿಸಬೇಕಿದೆ ಎಂದರು.

ದ.ಕ ಡಿಡಿಪಿಐ ಶಿವರಾಮಯ್ಯ, ಮಂಗಳೂರು ದಕ್ಷಿಣ ಬಿಇಒ ಲೋಕೇಶ್, ಮಂಗಳೂರು ದಕ್ಷಿಣ ಝೋನಲ್ ಕಾ ಆರ್ಡಿನೇಟರ್ ಗೀತಾ ಶ್ಯಾನುಭೋಗ್ ಉಪಸ್ಥಿತರಿದ್ದರು.
ನಡ ಬೆಳ್ತಂಗಡಿ ಸರಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಯಾಕೂಬ್ ಕೊಯ್ಯೂರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಮಧ್ಯಾಹ್ನ ನಂತರ ನಡೆದ 2017ರ ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಮೋನು ನೆರವೇರಿಸಿದರು. ನಗರಸಭೆಯ ಪೌರಾಯುಕ್ತೆ ವಾಣಿ.ವಿ ಆಳ್ವ ಮುಖ್ಯ ಅತಿಥಿಯಾಗಿದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕಿ ಹಿಲ್ಡಾ ಕ್ಲೆಮೆನ್ಸಿಯಾ ಪಿಂಟೋ ಹಾಗೂ ಶಿಕ್ಷಣ ಸಂಯೋಜಕ ಫ್ರಾನ್ಸಿಸ್ ಮಿನೇಜಸ್ ಅವರನ್ನು ಸನ್ಮಾನಿಸಲಾಯಿತು.

ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಯು.ಕೆ.ಮೊಹಮ್ಮದ್ ಮುಸ್ತಾಫ ಸ್ವಾಗತಿಸಿದರು. ಹಳೆಕೋಟೆ ಉರ್ದು ಶಾಲೆಯ ಮುಖ್ಯಶಿಕ್ಷಕ ಕೆ.ಎಂ.ಕೆ ಮಂಜನಾಡಿ ಸ್ವಾಗತಿಸಿದರು. ಕೋಟೆಪುರ ಟಿಪ್ಪು ಸುಲ್ತಾನ್ ಶಾಲೆಯ ಮುಖ್ಯಶಿಕ್ಷಕ ಎಂ.ಹೆಚ್ ಮಲಾರ್ ವಂದಿಸಿದರು.

Exit mobile version