ಉಳ್ಳಾಲ: ಇಲ್ಲಿನ ದರ್ಗಾದ ಉರೂಸ್ ಸಮಾರಂಭದ ಪ್ರಯುಕ್ತ ಓವರ್‍ಬ್ರಿಡ್ಜ್‍ನಿಂದ ಹಿಡಿದು ಅಬ್ಬಕ್ಕ ಸರ್ಕಲ್‍ನವರೆಗೆ ಆಗುತ್ತಿರುವ ರಸ್ತೆಯ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಮತ್ತು ಹೆಚ್ಚುವರಿ ಸರಕಾರಿ ಬಸ್‍ಗಳನ್ನು ಉರೂಸ್ ಸಂದರ್ಭದಲ್ಲಿ ಮಂಗಳೂರು ಉಳ್ಳಾಲ ರಸ್ತೆಗೆ ಒದಗಿಸಲು ಉಳ್ಳಾಲ ದರ್ಗಾ ಅಧ್ಯಕ್ಷ ಯು.ಎಸ್. ಹಂಝ ಮತ್ತು ಸಚಿವ ಯು.ಟಿ.ಖಾದರ್ ಅವರ ನೇತೃತ್ವದಲ್ಲಿ ಉಳ್ಳಾಲ ದರ್ಗಾದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಯಿತು.
ಒಂದು ತಿಂಗಳ ಕಾಲ ನಡೆಯಲಿರುವ ಉರೂಸ್ ಸಂದರ್ಭದಲ್ಲಿ ವಿದ್ಯುತ್ ಕಡಿತವನ್ನು ನಿಲ್ಲಿಸುವುದು ಮತ್ತು ನಾದುರಸ್ತಿಯಲ್ಲಿರುವ ವಿದ್ಯುತ್ ತಂತಿಯನ್ನು ಶೀಘ್ರದಲ್ಲಿ ದುರಸ್ತಿಗೊಳಿಸಬೇಕು. ಉರೂಸ್‍ನ ಸಮಯದಲ್ಲಿ ನಡೆಯುವ ಸಂದಲ್‍ಮೆರವಣಿಗೆಗೆ ಅಡ್ಡಿ ಬಾರದಂತೆ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ಕರ್ನಾಟಕದಾದ್ಯಂತ ಸಾರಿಗೆ ವ್ಯವಸ್ಥೆ ಮತ್ತು ತೊಕ್ಕೊಟ್ಟುವಿನಲ್ಲಿ ರೈಲು ನಿಲ್ದಾಣ ಒದಗಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಭಕ್ತಾದಿಗಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಮುಖ ಔಷಧಿ ದಾಸ್ತಾನಿರಿಸಲು ಮತ್ತು 24 ಗಂಟೆ ಕಾರ್ಯನಿರ್ವಹಿಸಲು ಸಚಿವ ಖಾದರ್ ಆರೋಗ್ಯಧಿಕಾರಿಗಳಿಗೆ ಸೂಚಿಸಿದರು. ಜತೆಗೆ ದರ್ಗಾದ ಸಮೀಪ ದರ್ಗಾದ ಕಟ್ಟಡವೊಂದರಲ್ಲಿ ಔಷಧಿಯನ್ನು ಸಂಗ್ರಹಿಸಿ ವೈದ್ಯರನ್ನು ನೇಮಿಸುವ ತೀರ್ಮಾನಕ್ಕೆ ದರ್ಗಾ ಸಮಿತಿ ಸಹಮತ ವ್ಯಕ್ತಪಡಿಸಿತು.
ಕಾರ್ಯಕ್ರಮದ ಸಮಯದಲ್ಲಿ ಸಮಸ್ಯೆ ಹದಗೆಟ್ಟುಹೋಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ಕೂಡಾ ನೀಡಲಾಯಿತು.
ಸಭೆಯಲ್ಲಿ ಎಡಿಸಿ ಸದಾಶಿವ ಪ್ರಭು, ಮಂಗಳೂರು ಆರೋಗ್ಯ ಅಧಿಕಾರಿ ಡಾ. ನವೀನ್ ಚಂದ್ರ, ಕರ್ನಾಟಕ ರಾಜ್ಯ ಸರಕಾರಿ ಸಂಸ್ಥೆಯ ಡಿ.ಸಿ. ಕೆ.ಪಿ. ನಂಜಯ್ಯ, ಡಿಜಿಒ ಎಸ್ ಚಂದ್ರಶೇಖರ್, ಮೆಸ್ಕಾಂ ಸಬ್ ಇಂಜಿನಿಯರ್ ರಾಜೇಶ್ ಶೆಟ್ಟಿ, ಉಳ್ಳಾಲ ಪ್ರಾಥಮಿಕ ಕೇಂದ್ರದ ಆರೋಗ್ಯಧಿಕಾರಿ ಸುನಿತಾ ಮತ್ತು ಪುಷ್ಪಲತಾ, ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ, ಮೇಲ್ವಿಚಾರಕ ಜಯರಾಂ ಪೂಜಾರಿ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಅಬೂಬಕ್ಕರ್, ಪ್ರಾದೇಶಿಕ ಅಗ್ನಿ ಶಾಮಕ ಅಧಿಕಾರಿ ತಿಪ್ಪೆ ಸ್ವಾಮಿ, ಮೆಸ್ಕಾಂ ಕಾರ್ಯ ನಿರ್ವಾಹಕ ಇಂಜಿನಿಯರ್ ಮಂಜಪ್ಪ, ಸೀನಿಯರ್ ಹೆಲ್ತ್ ಇನ್ಸ್‍ಪೆಕ್ಟರ್ ಜಯರಾಂ, ಪುರಸಭೆಯ ಮುಖ್ಯಾಧಿಕಾರಿ ರೂಪಾಶೆಟ್ಟಿ ಅಧ್ಯಕ್ಷ ಗಿರಿಜಾ ಉಪಾಧ್ಯಕ್ಷೆ ರಝಿಯಾ ಇಬ್ರಾಹಿಂ, ಮಾಜಿ ಅಧ್ಯಕ್ಷ ಬಾಜಿಲ್‍ಡಿಸೋಜ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್, ದರ್ಗಾ ಕಾರ್ಯದರ್ಶಿ ಯು.ಟಿ. ಇಲ್ಯಾಸ್, ಜತೆ ಕಾರ್ಯದರ್ಶಿಗಳಾದ ಅಶ್ರಫ್, ಫಾರೂಕ್, ಕೋಶಾದಿಕಾರಿ ಮೊಹಮ್ಮದ್ ಲೆಕ್ಕಪರಿಶೋಧಕ ಅಬ್ದುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು.