UN NETWORKS
ಮುಡಿಪು: ಜಾತಿಯ ಆಧಾರದಲ್ಲಿ ಹಾಗೂ ಸಂಪ್ರದಾಯಗಳನ್ನು ಪ್ರಶ್ನಿಸುವ ಮೂಲಕ ಹಿಂದೂ ಸಮಾಜವನ್ನು ವ್ಯವಸ್ಥಿತವಾಗಿ ಒಡೆಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಸಮಾಜದಲ್ಲಿ ಧರ್ಮಜಾಗೃತಿಯನ್ನು ಮೂಡಿಸಿ ಹಿಂದೂ ಸಮಾಜವನ್ನು ಸದೃಡವಾಗಿ ಬೆಳೆಸುವ ಕೆಲಸ ಎಲ್ಲೆಡೆಯಲ್ಲೂ ನಡೆಯಬೇಕಿದೆ ಎಂದು ಧಾರ್ಮಿಕ ಚಿಂತಕಿ ಕುಮಾರಿ ಚೈತ್ರಾ ಕುಂದಾಪುರ ಅವರು ಹೇಳಿದರು.
ಅರಿವಿಲ್ಲದ ಮಕ್ಕಳಲ್ಲಿಯೇ ಜಾತಿಯೆಂಬ ವಿಷಬೀಜವನ್ನು ಬಿತ್ತುವಂತಹ ಕೆಲಸ ರಾಜ್ಯ ಸರಕಾರ ಮಾಡುತ್ತಿದೆ. ಮೊಟ್ಟೆ, ಟೂರ್, ಅಹಿಂದದ ಹೆಸರಿನಲ್ಲಿ ವಿದ್ಯಾರ್ಥಿಗಳ ನಡುವೆ ಕಂದಕವನ್ನು ಮೂಡಿಸುತ್ತಿದೆ. ಆದ್ದರಿಂದ ಧರ್ಮ ಜಾಗೃತಿಯ ಮೂಲಕ ಸಮಾಜದಲ್ಲಿ ಕ್ರಾಂತಿ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.
ಇಂದು ಹೆತ್ತವರೇ ದಾರ್ಮಿಕ ಚಿಂತನೆಗಳಿಂದ ಮಕ್ಕಳನ್ನು ದೂರವಿಡುತ್ತಿದ್ದಾರೆ. ಸಾಮಾಜಿಕ ಮೌಲ್ಯಗಳು, ಚಿಂತನೆ, ಕುಟುಂಬದ ಮೌಲ್ಯ, ಸಂಬಂಧಗಳ ಮಹತ್ವವನ್ನು ತಿಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ಕಾಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಕನ್ಯಾನ ಬಾಳೆಕೋಡಿಯ ಶ್ರೀ ಶಶಿಕಾಂತಮಣಿ ಸ್ವಾಮೀಜಿ ಅವರು, ಪ್ರತಿಯೊಬ್ಬರಲ್ಲೂ ಧಾರ್ಮಿಕ ಚಿಂತನೆಗಳನ್ನು ಬೆಳೆಸುವ ಕಾರ್ಯವನ್ನು ಮುಡಿಪು ಧರ್ಮಜಾಗೃತಿ ವೇದಿಕೆಯು ಕಳೆದ ಹಲವಾರು ವರ್ಷಗಳಿಂದ ಮಾಡುತ್ತಿದೆ. ಇಂತಹ ಕಾರ್ಯ ಪ್ರತಿಯೊಂದೆಡೆ ನಡೆಯಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಧರ್ಮಜಾಗೃತಿ ವೇದಿಕೆಯ ವತಿಯಿಂದ ಸುಂದರ ಮತ್ತು ಸುನಿತಾ ಜೋಡಿಯ ಸರಳ ಆದರ್ಶ ವಿವಾಹ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ಬಿಜೆಪಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್, ಮುಡಿಪಿನ್ನಾರ್ ದೈವಸ್ಥಾನದ ಆಡಳಿತ ಮೊಕ್ತೆಸರ ಕೊಡಕ್ಕಲ್ಲು ಮುರಳಿ ಮೋಹನ ಭಟ್, ಕುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಮಿತ್ತಕೋಡಿ ಉಪಸ್ಥಿತರಿದ್ದರು.
ಧರ್ಮಜಾಗೃತಿ ವೇದಿಕೆಯ ಗೌರವ ಸಲಹೆಗಾರರಾದ ಟಿ.ಜಿ.ರಾಜಾರಾಂ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವೇದಿಕೆಯ ಅಧ್ಯಕ್ಷರಾದ ನವೀನ್ ಕುಮಾರ್ ಪಾದಲ್ಪಾಡಿ ವಂದಿಸಿದರು. ಚಂದ್ರ ಬಾಳೆಪುಣಿ ಕಾರ್ಯಕ್ರಮ ನಿರೂಪಿಸಿದರು.