UN NETWORKS
ಉಳ್ಳಾಲ: ಶಿಕ್ಷಣ ಪಡೆಯುವುದು ಮುಖ್ಯವಲ್ಲ, ಅದನ್ನು ಜೀವನದಲ್ಲಿ ಅಳವಡಿಸುವ ಕಲೆ ಮುಖ್ಯವಾಗಿರುತ್ತದೆ. ಮಾನವೀಯತೆ ಜತೆಗೆ ಇತರರಿಗೆ ಸಹಕಾರಿಯಾಗಿ ಬಾಳುವ ಗುಣದಿಂದ ಪಡೆದ ಶಿಕ್ಷಣ ಸಾರ್ಥಕ್ಯ ಕಾಣಲು ಸಾಧ್ಯ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಪೊಲೀಸ್ ಉಪ ಆಯುಕ್ತೆ ಉಮಾ ಪ್ರಶಾಂತ್ ಹೇಳಿದ್ದಾರೆ.
ಕಣಚೂರು ಆಸ್ಪತ್ರೆ ವಿವಿಧ ರೀತಿಯಲ್ಲಿ ಆರೋಗ್ಯ ಕಾಪಾಡಲು ಬಡ ಜನರಿಗೆ ಸಹಕರಿಸುತ್ತಿದೆ. ಇದಕ್ಕೆ ಬೆಂಬಲವಾಗಿ ಸಂಘಟನೆಗಳು ನಿಂತಾಗ ಇನ್ನಷ್ಟು ಜನರ ಸೇವೆ ನಡೆಸಲು ಸಂಸ್ಥೆಗೆ ಪ್ರೇರಣೆಯಾಗುವುದು. ಹೆಣ್ಮಕ್ಕಳು ಸಮಾನತೆಗೆ ಹೋರಾಡುವ ಬದಲು ಆತ್ಮವಿಶ್ವಾಸದ ಜೀವನ ನಡೆಸಿದಾಗ ಪ್ರತಿಯೊಂದು ಕ್ಷೇತ್ರದಲ್ಲೂ ಸಾಧಿಸಲು ಸಾಧ್ಯ . ಶಾಲಾ-ಕಾಲೇಜುಗಳಲ್ಲಿ ಮಾದಕ ವ್ಯಸನಿಗಳು ಕಂಡುಬರುತ್ತಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸುವ ಕ್ರಮಗಳು ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಗಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವುದರ ಮುಖೇನ ಭವಿಷ್ಯ ರೂಪಿಸಬೇಕಿದೆ. ಅದಕ್ಕಾಗಿ ಇಂತಹ ವ್ಯಸನಿಗಳನ್ನು ಕಂಡಲ್ಲಿ ಮಾಹಿತಿ ನೀಡಿ ಮತ್ತು ವ್ಯಸನಗಳಿಗೆ ತುತ್ತಾಗದಿರಿ ಅನ್ನುವ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಮೀಯತ್ತುಲ್ ಫಲಾಹ್ ಕಾರ್ಪೊರೇಷನ್ ಯುನಿಟ್ ಅಧ್ಯಕ್ಷ ಸಾದುದ್ದೀನ್ .ಎಂ.ಸಾಲಿಹಿ ಮಾತನಾಡಿ ಕಳೆದ 30 ವರ್ಷಗಳಿಂದ ಸಂಸ್ಥೆ ವಿವಿಧ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಶಿಕ್ಷಣ, ಸಮುದಾಯ ಸಬಲೀಕರಣ, ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಸದ್ಯ ಕಿಡ್ನಿ ಸಮಸ್ಯೆಯಿಂದ ಹಲವು ಮಂದಿ ಬಳಲಿ ಡಯಾಲಿಸಿಸ್ ಪ್ರಕ್ರಿಯೆಗೆ ಒಳಪಡುತ್ತಿದ್ದಾರೆ. ದುಬಾರಿಯಾದ ಚಿಕಿತ್ಸೆ ಪ್ರಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆ ಮಂಗಳೂರಿನಲ್ಲಿ 6, ಉಡುಪಿಯಲ್ಲಿ 2 ಹಾಗೂ ಇದೀಗ ನಾಟೆಕಲ್ ನಲ್ಲಿ ಒಂದು ಯಂತ್ರವನ್ನು ಅಳವಡಿಸುವ ಮೂಲಕ ಜನರಿಗೆ ಸಹಕಾರಿಯಾಗುವ ಉದ್ದೇಶದಿಂದ ಹಸ್ತಾಂತರಿಸಲಾಗಿದೆ . ಎಂದರು.
ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಯು.ಕಣಚೂರು ಮೋನು ಮಾತನಾಡಿ ಕಣಚೂರು ಆಸ್ಪತ್ರೆ ಉಚಿತವಾಗಿ ವಿವಿಧ ರೀತಿಯ ಆರೋಗ್ಯ ಸೇವೆಯನ್ನು ನೀಡುತ್ತಾ ಮುಂದುವರಿದಿದೆ. ಸಮಾಜ ಸೇವಾ ಸಂಸ್ಥೆಗಳು ಪ್ರೋತ್ಸಾಹಿಸುತ್ತಾ ಬಂದಲ್ಲಿ ಇನ್ನಷ್ಟು ಸೇವೆಯನ್ನು ಜನರಿಗೆ ತಲುಪಿಸಲು ಸಾಧ್ಯವಾಗುವುದರ ಜತೆಗೆ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದರು.
ಜಿಲ್ಲಾ ಕಾರಾಗೃಹ ಸಲಹಾ ಮಂಡಳಿ ಸದಸ್ಯ ಅಬ್ದುಲ್ ರವೂಫ್ ಪುತ್ತಿಗೆ, ಉದ್ಯಮಿ ರಿಯಾಝ್ ಬಾವಾ, ಕರ್ನಿರೆ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಕೆ.ಎಸ್. ಸೈಯ್ಯದ್ ಕರ್ನಿರೆ, ಕಿಮ್ಸ್ ನಿರ್ದೇಶಕ ಅಬ್ದುಲ್ ರೆಹಮಾನ್, ವೈದ್ಯಕೀಯ ಕಾಲೇಜು ಡೀನ್ ಡಾ| ವಿರೂಪಾಕ್ಷ, ಫಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲ ಡಾ| ಸುಹೈಲ್ ಉಪಸ್ಥಿತರಿದ್ದರು.
ನಝೀರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಆಡಳಿತಾಧಿಕಾರಿ ಡಾ| ರೋಹನ್ ಮೋನಿಸ್ ವಂದಿಸಿದರು.