Site icon Ullalavani

ವೇಣೂರು: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ

UN NETWORKS

ವೇಣೂರು: ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಕೋಳಿ ಸಾಗಾಟದ ಲಾರಿ ವೇಣೂರು ಶ್ರೀರಾಮ ನಗರದ ಮೂಡಬಿದಿರೆ ತಿರುವಿನ ರಾಜ್ಯ ಹೆದ್ದಾರಿಯ ಬದಿ ನಿಲ್ಲಿಸಲಾಗಿದ್ದ ಪೊಲೀಸ್ ವಾಹನಕ್ಕೆ ಡಿಕ್ಕಿಯೊಡೆದು ಚಲಿಸುತ್ತಿದ್ದ ಬೈಕ್ ಸವಾರರ ಮೇಲೆ ಸಂಚರಿಸಿ ಮಗುಚಿ ಬಿದ್ದಿದೆ.

ಬೈಕ್ ಸವಾರ ವೇಣೂರು ಕರಿಮಣೇಲು ನಿವಾಸಿ ಉದಯ ಕುಮಾರ್ ಸೇಮಿತ ಅವರು ತೀವ್ರ ತರಹದ ಗಾಯಕ್ಕೊಳಗಾಗಿದ್ದು, ಗಂಭೀರ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಬೈಕ್‌ನಲ್ಲಿದ್ದ ಪುತ್ರಿ ಸೇರಿದಂತೆ ಮತ್ತೊಬ್ಬಳು ವಿದ್ಯಾರ್ಥಿನಿ ಅಲ್ಪ ಪ್ರಮಾಣದ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.

ಬೆಳಿಗ್ಗೆ 7.30ರ ಸುಮಾರಿಗೆ ಉದಯ ಕುಮಾರ್ ಸೇಮಿತರು ಕಾಲೇಜಿಗೆ ತೆರಳುವ ಇಬ್ಬರು ಮಕ್ಕಳನ್ನು ಬೈಕ್‌ನಲ್ಲಿ ಕುಳ್ಳಿರಿಸಿ ಕರಿಮಣೇಲುವಿನಿಂದ ವೇಣೂರು ಮುಖ್ಯಪೇಟೆಗೆ ತಲುಪುತ್ತಿದ್ದಂತೆ ಅಜಾಗರುಕತೆಯಿಂದ ಎದುರಿನಿಂದ ಬಂದ ಕೋಳಿ ಸಾಗಾಟದ ಲಾರಿ ಪೊಲೀಸ್ ವಾಹನಕ್ಕೆ ಡಿಕ್ಕಿಯೊಡೆದು ಬಳಿಕ ಇವರ ಬೈಕ್‌ಗೆ ಡಿಕ್ಕಿಯೊಡೆದಿದೆ. ಕೆಲವೇ ಕ್ಷಣಗಳಲ್ಲಿ ಹೆದ್ದಾರಿಯಲ್ಲಿ ಬಂದ ಅಂಬ್ಯುಲೆನ್ಸ್ ಮೂಲಕ ಇಬ್ಬರು ಮಕ್ಕಳನ್ನು ಬೆಳ್ತಂಗಡಿ ಆಸ್ಪತ್ರೆಗೆ ಸಾಗಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ಉದಯ ಕುಮಾರ್ ಸೇಮಿತ ಅವರನ್ನು ಖಾಸಗಿ ವಾಹನದಲ್ಲಿ ಮಂಗಳೂರಿಗೆ ಸಾಗಿಸಲಾಗಿದೆ.

ಕೋಳಿ ಸಾಗಾಟದ ಲಾರಿ ಚಾಲಕನ ಅಜಾಗರೂಕತೆಯ ಚಾಲನೆಯೇ ಘಟನೆಗೆ ಕಾರಣವೆನ್ನಲಾಗಿದ್ದು, ವೇಣೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಎಲ್ಲಾ ಘಟನೆಯ ದೃಶ್ಯಾವಳಿಗಳು ಸ್ಥಳೀಯ ಕಾಂಪ್ಲೆಕ್ಸ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Exit mobile version