UN NETWORKS
ಕೊಣಾಜೆ: ನಮ್ಮ ಗ್ರಾಮ, ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದರೊಂದಿಗೆ ಸಮಾಜದ ಅಭಿವೃದ್ಧಿಯಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕು. ಗ್ರಾಮದ ಅಭಿವೃದ್ಧಿಯಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಎಷ್ಟು ಜವಾಬ್ಧಾರಿ ಇದೆಯೋ ಅಷ್ಟೇ ಜವಬ್ಧಾರಿ ಗ್ರಾಮದ ಪ್ರತಿಯೊಬ್ಬನಿಗೂ ಇದೆ. ಆದ್ದರಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂದು ಕೊಣಾಜೆ ಪಂಚಾಯಿತಿಯ ಮಾಜಿ ಮಂಡಲ ಪ್ರಧಾನರು ಹಾಗೂ ಜಿಲ್ಲಾ ಕಾಂಗ್ರೆಸ್‍ನ ಉಪಾಧ್ಯಕ್ಷರಾದ ಟಿ.ಎಸ್.ಅಬ್ದುಲ್ಲಾ ಸಾಮಾಣಿಗೆ ಅವರು ಅಭಿಪ್ರಾಯಪಟ್ಟರು.
ಕೊಣಾಜೆ ಗ್ರಾಮ ಪಂಚಾಯಿತಿ ಗ್ರಾಮದ ಸ್ವಚ್ಚತೆ, ಶಿಕ್ಷಣ ಸೇರಿದಂತೆ ಹಲವಾರು ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಅಲ್ಲದೆ ಹಿಂದೆ ಮಂಡಲ ಪಂಚಾಯಿತಿ ಇರುವಾಗಲೇ ಸಾಕ್ಷರತೆಯಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿತ್ತು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿಜಯ ಬ್ಯಾಂಕ್ ಗಾಮಾಭಿವೃದ್ಧಿ ಪ್ರತಿಷ್ಠಾನದ ಪ್ರಸಾದ್ ರೈ ಕಲ್ಲಿಮಾರ್ ಯುವಸಮುದಾಯ ಮತ್ತು ವಿದ್ಯಾರ್ಥಿಗಳು ಗ್ರಾಮದ ಅಭಿವೃದ್ಧಿ ಹಾಗು ಗ್ರಾಮಾಡಳಿತದ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಇಂತಹ ಕಾರ್ಯಕ್ರಮಗಳು ಯುವ ಸಮುದಾಯಕ್ಕೆ ಬಹಳ ಅಗತ್ಯವಾದುದು ಎಂದು ಹೇಳಿದರು.
ಕಾರ್ಯಕ್ರಮಲ್ಲಿ ಗ್ರಾಮ ಸಭೆ ಮತ್ತು ಹಳ್ಳಿಯ ವಿಧಾನಸಭೆಯ ಬಗ್ಗೆ ಜನಶಿಕ್ಷಣ ಟ್ರಸ್ಟ್‍ನ ಶೀನಶೆಟ್ಟಿ, ಸಮುದಾಯ ಮತ್ತು ಸಂಘಟನೆಗಳ ಪಾತ್ರ ವಿಷಯದ ಅಚ್ಯುತಗಟ್ಟಿ, ಸಮುದಾಯ ಅಭಿವೃದ್ಧಿಯಲ್ಲಿ ಯುವಜನತೆ ಪಾತ್ರದ ಬಗ್ಗೆ ರತ್ನಾಕರ ಎಂ.ಜಿ, ಆದರ್ಶ ಗ್ರಾಮ ಯೋಜನೆಯ ಬಗ್ಗೆ ಕೃಷ್ಣ ಮೂಲ್ಯ, ಯೋಗ ವಿಷಯದ ಬಗ್ಗೆ ರಾಜೀವ್ ನಾಯ್ಕ್, ಸುಕನ್ಯಾ ಸಮೃದ್ಧಿ ಯೋಜನೆಯ ಬಗ್ಗೆ ಉಷಾ ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹರೇಕಳ ಪ್ರೌಡಶಾಲೆಯ ಮುಖ್ಯೋಪಾಧ್ಯಾಯರಾದ ರವೀಂದ್ರ ರೈ ಹರೇಕಳ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಲಿತಾ ಎಸ್ ರಾವ್, ಬೆಳ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯ, ಸ್ಥಳೀಯರಾದ ಹಸನ್ ಕುಂಞ ಮಂಗಳ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಅಬ್ದುಲ್ ರಹಿಮಾನ್ ಕೋಡಿಜಾಲ್, ವೈಎಫ್‍ಸಿಯ ಹಸೈನಾರ್, ಪಂಚಾಯಿತಿ ಸದಸ್ಯರಾದ ವೇದಾವತಿ ಗಟ್ಟಿ, ಗುಲಾಬಿ, ಚಂಚಲಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.
ಕೊಣಾಜೆ ಗ್ರಾಮ ಪಂಚಾಯಿತಿ ಸದಸ್ಯ ಅಚ್ಯುತ ಗಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು.