ಉಪ್ಪಳ: ಭಾರತೀಯ ಸಂಸ್ಕೃತಿಯ ಮಾತೆಯಾದ ಶ್ರೀ ಗಾಯತ್ರಿಯ ಮಂತ್ರ ಪಠನದಿಂದ ಶಕ್ತಿಕೇಂದ್ರವು ಜಾಗೃತಿಗೊಂಡು ಬುದ್ಧಿಕೇಂದ್ರವು ಜಾಗೃತಿಗೊಳ್ಳುತ್ತದೆ, ಅದರ ತರಂಗಗಳು ಪೃಥ್ವಿ ಸುತ್ತಿ ನಮ್ಮ ಬಳಿಗೇ ಬರುತ್ತದೆ ಎನ್ನುವುದು ವಿಜ್ಞಾನಿಗಳೇ ಕಂಡುಕೊಂಡಿದ್ದಾರೆ ಎಂದು ಬಾಳೆಕುದ್ರು ಮಠದ ನೃಸಿಂಹಾಶ್ರಮ ಸ್ವಾಮೀಜಿ ಗಾಯತ್ರೀ ಮಂತ್ರದ ಮಹತ್ವವನ್ನು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಕೊಂಡೆವೂರಿನಲ್ಲಿ ನಡೆಯುತ್ತಿರುವ ಮಹಾಯಾಗದ ನಾಲ್ಕನೇ ದಿನದಂದು ನಡೆದ ಧಾರ್ಮಿಕ ಸಭೆಯನ್ನುದ್ದೇಶಿಸಿ ಮಾತಾನಾಡಿದರು.
ಭಗವಂತನಿಗಿರುವ ದೊಡ್ಡ ಶಕ್ತಿ ಪ್ರಪಂಚದಲ್ಲಿ ಬೇರೆಯಾವುದಕ್ಕೂ ಇಲ್ಲ, ಧರ್ಮ ಭಾವನೆ ಮತ್ತು ಭಕ್ತಿ ಮೂರೂ ಒಟ್ಟಾದಾಗ ಸಮಾಜಕ್ಕೆ ಖಂಡಿತವಾಗಿಯೂ ಒಳ್ಳೆಯದಾಗುತ್ತದೆ ಎಂದು ಮಾಣಿಲ ಸ್ವಾಮೀಜಿ ಸದಾಶಯ ವ್ಯಕ್ತಪಡಿಸಿದರು.
ಕೊಂಡೆವೂರು ಸ್ವಾಮೀಜಿ ಮಾತನಾಡಿ ನಮ್ಮ ಪ್ರತೀಕ್ಷಣವೂ ದೇವರ ಪ್ರೀತ್ಯರ್ಥವಾಗಿ ವಿನಿಯೋಗವಾಗಬೇಕು, ಶುದ್ಧ ಕರ್ಮಫಲವನ್ನು ಸ್ವೀಕರಿಸಬೇಕು” ಎಂದು ಅಪೇಕ್ಷೆ ಪಟ್ಟರು.
ತಂತ್ರಿವರೇಣ್ಯರಾದ ಉಳಿಯತ್ತಾಯ ವಿಷ್ಣು ಅಸ್ರರು ಯಾಗದಿಂದಾಗುವ ಪ್ರಯೋಜನವನ್ನು ತಿಳಿಸುತ್ತಾ ಯಜ್ಞದಿಂದ ಮಳೆ, ಮಳೆಯಿಂದ ಅನ್ನ, ಅನ್ನದಿಂದ ಸಮಸ್ತ ಜೀವಿಗಳಿಗೆ ಬದುಕು, ಈ ಯಾಗದಿಂದ ರಾಮರಾಜ್ಯ ನಿರ್ಮಾಣವಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಳಿಪ್ಪಾಡಿಗುತ್ತು ರಾಜೇಶ್ ನಾಯಕ್ ಈ ಯಾಗವು ಸಾವಯವ ಕೃಷಿಯ ಉಳಿವು ಬೆಳೆವಿಗೆ ನಾಂದಿಯಾಗಲಿ” ಎಂದರು.
ಕೃಷ್ಣ ಪ್ರಸಾದ್ ಮಡ್ತಿಲ, ಟಿ. ಸಂಪತ್ ಕುಮಾರ್ , ದಿನೇಶ್ ಮಡಪ್ಪುರ ಮತ್ತು ಪುತ್ತೂರು ಪುಲಸ್ಯ ರೈ ತಾ. ಪಂಚಾಯತ್ ಅಧ್ಯಕ್ಷತೆ ಪುತ್ತೂರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.