Site icon Ullalavani

ನಿಟ್ಟೆಯಲ್ಲಿ ಅಂತರರಾಷ್ಟ್ರೀಯ ಮಾತೃಭಾಷಾ ದಿನ

UN NETWORKS

ಉಳ್ಳಾಲ: ಎಳೆಯರಲ್ಲಿ ಭಾಷೆ ಕುರಿತು ಪ್ರೀತಿಯನ್ನು ಹುಟ್ಟಿಸುವ ಕಾರ್ಯ ಆಗಬೇಕಿದೆ. ಸುತ್ತಮುತ್ತಲಿನ ಸಂಪತ್ತನ್ನು ಹಾಡಿ ಹೊಗಳಿದರೆ ಸಾಲದು, ಮುಂದಿನ ಪೀಳಿಗೆಗೆ ಅದರ ಅರಿವು ಮೂಡದೇ ಇದ್ದಲ್ಲಿ ಪ್ರಯೋಜನವಿಲ್ಲ. ಎಂದು ತುಳು ಸಾಹಿತಿ ಪ್ರೊ. ಭಾಸ್ಕರ್ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ಅವರು ನಿಟ್ಟೆ (ಸ್ವಾಯುತ್ತೆ ಆಗಲಿರುವ ವಿ.ವಿ) ವತಿಯಿಂದ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಹಾಲ್ ನಲ್ಲಿ ಬುಧವಾರ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಾತೃಭಾಷಾ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಷೆಗಳ ಪ್ರಾಚೀನತೆ 1,000 ವರ್ಷಕ್ಕಿಂತಲೂ ಹಿಂದಿನದ್ದು, ತುಳುನಾಡ ಜನರ ಇಚ್ಛಾಶಕ್ತಿ ಕೊರತೆಯಿಂದ ಭಾಷೆಯ ಮೇಲಿನ ಮಮಕಾರ ಕಳೆದುಹೋಗಿದೆ. ಇದರಿಂದ ಶಾಸ್ತ್ರೀಯ ಭಾಷೆಯ ಸ್ಥಾನಮಾನ ತುಳು ಭಾಷೆಗೆ ಇನ್ನೂ ಬಂದಿಲ್ಲ. ಪಂಚದ್ರಾವಿಡ ಭಾಷೆಗಳಲ್ಲಿ ಇತರೆ ನಾಲ್ಕು ಭಾಷೆಗಳೂ ಸಾಂವಿಧಾನಿಕವಾಗಿ ಸೇರ್ಪಡೆಗೊಂಡಿದ್ದರೆ, ತುಳು ಸೇರ್ಪಡೆಯಾಗಿಲ್ಲ. ಇದರಿಂದ ಭಾಷೆ, ಭಾಷಿಗರಿಗೆ ಹಿನ್ನೆಡೆಯಾಗಿದೆ. ಕನ್ನಡದಷ್ಟೇ ಪ್ರಭಾವಿ ಭಾಷೆ ತುಳುವನ್ನು ಜಿಲ್ಲೆಯ ಭಾಷೆಯನ್ನಾಗಿ ಮಾಡಲು ಈವರೆಗೆ ಸಾಧ್ಯವಾಗಿಲ್ಲ.

ಸಾಂವಿಧಾನಿಕವಾಗಿ ಸೇರ್ಪಡೆಗೊಳ್ಳದೇ ಇದ್ದಲ್ಲಿ ಅಧಿಕೃತವಾಗಿ ಭಾಷೆಯನ್ನು ಎಲ್ಲಿಯೂ ಬಳಸುವಂತಿಲ್ಲ. ಹಿಂದೆ ಜಿಲ್ಲೆಯ ಸಂಸದರೊಬ್ಬರು ಲೋಕಸಭೆಯಲ್ಲಿ ತುಳು ಭಾಷೆಯಲ್ಲಿ ಪ್ರತಿಜ್ಞಾ ವಿಧಿ ಬೋಧಿಸಲು ಮುಂದಾದರೂ ಅದು ಸಾಧ್ಯವಾಗಿಲ್ಲ. ವಿಪರ್ಯಾಸವೆಂದರೆ ಜಗತ್ತಿನಾದ್ಯಂತ ತುಳು ಜನ ವಿವಿಧ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದರೂ ಮಾತೃಭಾಷೆ ತುಳುವಿಗೆ ಹಕ್ಕನ್ನು ದೊರಕಿಸಲು ಅಸಾಧ್ಯವಾಗಿದೆ. ಅಂತಾರಾಷ್ಟ್ರೀಯ ಸಂಸ್ಥೆ ಯುನೆಸ್ಕೋ ಆದೇಶದಂತೆ ತುಳುನಾಡಿನಲ್ಲಿ ಮಾತೃಭಾಷೆ ದಿನ ಆಚರಿಸುತ್ತಿರುವುದು ಸರಿಯಲ್ಲ. ಇದರಿಂದ ತುಳು ಭಾಷೆಯನ್ನು ಎಲ್ಲರೂ ಮರೆತಿದ್ದಾರೆ ಅನ್ನುವ ಅರ್ಥ ಬರುತ್ತದೆ. ತುಳು ಭಾಷೆಯ ಶಬ್ದಸಂಪತ್ತು ಸಾಹಿತ್ಯಿಕವಾಗಿ ಬಳಕೆ ಮಾಡುವ ಕಾರ್ಯಗಳು ಆಗುತ್ತಿದ್ದರೂ, ತುಳು ಭಾಷೆಗೆ ಅದರದ್ದೇ ಆದ ಲಿಪಿಯಿಲ್ಲ ಅನ್ನುವ ತಗಾದೆ ಇದೆ. ಹೊಸ ಲಿಪಿಗಳನ್ನು ಸಂಶೋಧಿಸಿ ಜನರಿಗೆ ತಲುಪಿಸುವಂತಹ ಪ್ರಯತ್ನಗಳಾಗುತ್ತಿದ್ದರೂ , ಅನ್ಯೋನ್ಯತೆಯಿಂದ ನಡೆಯುತ್ತಿಲ್ಲ. ಸಹೋದರತ್ವದ ರೀತಿಯಲ್ಲಿ ವಿವಿಧ ಭಾಷೆಗಳು ಬಳಕೆಯಾಗಿ ಎಲ್ಲರೂ ಒಗ್ಗಟ್ಟಿನಿಂದ ಬಾಳುವಂತಹ ವಾತಾವರಣ ನಿರ್ಮಾಣವಾಗಬೇಕಿದೆ ಎಂದರು.

ಉಪಕುಲಪತಿ ಡಾ| ಎಂ.ಎಸ್.ಮೂಡಿತ್ತಾಯ ಮಾತನಾಡಿ ಜಾಗತೀಕರಣದ ಪ್ರಭಾವದಿಂದ ತಂತ್ರಜ್ಞಾನದ ಹಿಂದೆ ಬಿದ್ದಿರುವ ಜನ ಮಾನವೀಯತೆಯನ್ನು ಮರೆತುಬಿಟ್ಟಿದ್ದಾರೆ. ಭಾಷೆ ಎಂದರೆ ಮಾನವೀಯತೆಗೆ ಸಮಾನ. ಸಂಸ್ಕøತಿಯನ್ನು ಬದಲಾಯಿಸಲು ಹೊರಟವರು ಭಾಷೆಗಳನ್ನು ಕೊಲ್ಲುವ ಪ್ರಯತ್ನದಲ್ಲಿದ್ದಾರೆ. ಮಾತೃಭಾಷೆಯನ್ನು ಮಾತನಾಡಲು ನಾಚಿಕೆ ಪಡುವಂತಹ ಸಮಯದಲ್ಲಿ ಯುನೆಸ್ಕೋ ಆದೇಶದಂತೆ ಮಾತೃಭಾಷಾ ದಿನಾಚರಣೆಯ ಮೂಲಕ ಭಾಷೆಯ ಜಾಗೃತಿ ಮೂಡುವಂತಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ (ಸ್ವಾಯುತ್ತೆ ಆಗಲಿರುವ ವಿ.ವಿ) ಕುಲಪತಿ. ಡಾ| ಸತೀಶ್ ಕುಮಾರ್ ಭಂಡಾರಿ ವಹಿಸಿದ್ದರು. ಕ್ಷೇಮ ವೈದ್ಯಕೀಯ ಕಾಲೇಜಿನ ಡೀನ್ ಡಾ| ಪಿ.ಯಸ್ ಪ್ರಕಾಶ್, ವೈಸ್ ಡೀನ್ ಡಾ| ಜಯಪ್ರಕಾಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಡಾ| ಸಾಯಿಗೀತಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ| ಆನಂದ್ ಬಂಗೇರ ಸ್ವಾಗತಿಸಿದರು. ಡಾ| ಸುಮಲತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕುಲಸಚಿವೆ ಅಲ್ಕಾ ಕುಲಕರ್ಣಿ ವಂದಿಸಿದರು.

ಕಾರ್ಯಕ್ರಮದಲ್ಲಿ ಡಾ| ಸಾಯಿಗೀತಾ ಸಂಪಾದಕತ್ವದದ ಇಂಗ್ಲೀಷ್-ಕನ್ನಡ-ತುಳು ಪದಕೋಶವನ್ನು ಬಿಡುಗಡೆಗೊಳಿಸಲಾಯಿತು.

Exit mobile version