Site icon Ullalavani

ದೇರಳಕಟ್ಟೆ: ತ್ರಿವಳಿ ತಲಾಖ್ ವಿರೋಧಿ ಕಾನೂನು ಜಾರಿ ವಿರುದ್ಧ ಎಸ್ ಡಿಪಿಐ ಪ್ರತಿಭಟನೆ

UN NETWORKS

ಉಳ್ಳಾಲ: ತ್ರಿವಳಿ ತಲಾಖ್ ವಿರುದ್ಧ ಕಾನೂನು ಹೊರಡಿಸುವ ಹಿಂದೆ ಫ್ಯಾಸಿಸ್ಟ್ ಶಕ್ತಿಗಳ ಕುತಂತ್ರ, ಅಜೆಂಡಾ ಹಾಗೂ ಷಡ್ಯಂತ್ರವಿದೆ. ಇದನ್ನು ಮುಸ್ಲಿಂ ಸಮುದಾಯ ಒಕ್ಕೊರಲಿನಿಂದ ವಿರೋಧಿಸಬೇಕಿದೆ ಎಂದು ಎಸ್ ಡಿಪಿಐ ಜಿಲ್ಲಾ ಮುಖಂಡ ಅಶ್ರಫ್ ಎ.ಕೆ ಹೇಳಿದ್ದಾರೆ.

ಅವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ವಿಧಾನಸಭಾ ಕ್ಷೇತ್ರ ವತಿಯಿಂದ ತ್ರಿವಳಿ ತಲಾಖ್ ವಿರುದ್ಧ ಕಾನೂನು ಜಾರಿಗೊಳಿಸಿರುವುದನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಹಮ್ಮಿಕೊಂಡಿರುವ ಪ್ರತಿಭಟನೆಯ ಪ್ರಯುಕ್ತ ದೇರಳಕಟ್ಟೆ ಜಂಕ್ಷನ್ನಿನಲ್ಲಿ ಮಂಗಳವಾರ ಆಯೋಜಿಸಲಾದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮುಸ್ಲಿಂ ಸಹೋದರಿಯರನ್ನು ಹತ್ಯೆಗೈದು ಅಧಿಕಾರ ಸ್ವೀಕರಿಸಿಕೊಂಡ ಕೇಂದ್ರದ ಮೋದಿ ಸರಕಾರಕ್ಕೆ, ಮುಸ್ಲಿಂ ಮಹಿಳೆಯರ ಮೇಲೆ ಅತೀವ ಕಾಳಜಿಯನ್ನು ತೋರಿಸುತ್ತಿದೆ. ಕಾಳಜಿ ಪ್ರದರ್ಶಿಸುವ ಮುನ್ನ ಗುಜರಾತಿನಲ್ಲಿ ಹತ್ಯೆಗೀಡಾದ ಮುಸ್ಲಿಂ ಗರ್ಭಿಣಿ ಮಹಿಳೆ ಸೇರಿದಂತೆ ಇತರೆ ಮಹಿಳೆಯರು ಹಾಗೂ ವಿಧವೆಯರನ್ನಾಗಿ ಮಾಡಿದವರನ್ನು ಮುಂಚಿತವಾಗಿ ಸಹೋದರಿಯರನ್ನಾಗಿ ಸ್ವೀಕರಿಸಲಿ. ದೇಶದ ಸಂವಿಧಾನದಲ್ಲಿ ಮುಸ್ಲಿಂ ಮಹಿಳೆಯರಿಗೆ ಅನ್ಯಾಯವಾದಲ್ಲಿ ಸೂಕ್ತ ಕಾನೂನುಗಳಿವೆ.

ಆದರೆ ಏಕಾಏಕಿ ತ್ರಿವಳಿ ತಲಾಖ್ ವಿರುದ್ಧ ಕಾನೂನು ಹೊರಡಿಸುವ ಹಿಂದೆ ಫ್ಯಾಸಿಸ್ಟ್ ಶಕ್ತಿಗಳ ಷಡ್ಯಂತ್ರವಿದೆ ಎಂದು ಆರೋಪಿಸಿ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರನ್ನು ಕೇವಲ ಮತಕ್ಕಾಗಿ ಮಾತ್ರ ಸೀಮಿತ ಮಾಡಿಕೊಂಡು ದೇಶವನ್ನು ಈವರೆಗೆ ಆಳಿದ ಸರಕಾರಗಳು ನಡೆಸುತ್ತಾ ಬಂದಿದೆ. ಇದೀಗ ಫ್ಯಾಸಿಸ್ಟ್ ಶಕ್ತಿಯ ಕುಮ್ಮಕ್ಕಿನಿಂದ ಹಿಂದುಗಳನ್ನು ಹಿಂದುತ್ವದ ಬಲೆಗೆ ಬೀಳಿಸಿ ದೇಶದ ಆಡಳಿತ ನಡೆಸುತ್ತಿದ್ದಾರೆ. ಗಡ್ಡಧಾರಿ, ಟೋಪಿ ಧರಿಸಿದಲ್ಲಿ ಅವರನ್ನು ಜೈಲಿಗಟ್ಟುವ ಕೆಲಸ ಕಾಂಗ್ರೆಸ್ ಸರಕಾರ ಮಾಡುತ್ತಲೇ ಬಂದಿದ್ದಾರೆ. ಆದರೆ ದೇಶದ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ಕರ್ತವ್ಯ ಪ್ರಜ್ಞೆಯಿಂದ ಸ್ಫೋಟ ನಡೆಸಿದವರು ಸಂಘ ಪರಿವಾರದವರು ಎಂದು ಹಲವೆಡೆ ಸಾಬೀತಾದ ಪ್ರಕರಗಳಿವೆ ಎಂದರು.

ಈ ವೇಳೆ ಎಸ್ ಡಿಟಿಯು ರಾಜ್ಯಾಧ್ಯಕ್ಷ ಜಲೀಲ್ .ಕೆ, ಜಿಲ್ಲಾ ಇಮಾಮ್ಸ್ ಕೌನ್ಸಿಲ್ ಅಧ್ಯಕ್ಷ ರಫೀಕ್ ದಾರಿಮಿ, ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಬ್ಬಾಸ್ ಕಿನ್ಯಾ ಹಾಗೂ ಅಶ್ರಫ್ ಮಂಚಿ ಉಪಸ್ಥಿತರಿದ್ದರು.

ಮಂಗಳೂರು ವಿಧಾನಸಭಾ ಕ್ಷೇತ್ರ ಎಸ್ ಡಿಪಿಐ ಕಾರ್ಯದರ್ಶಿ ಹಾರಿಸ್ ಮಲಾರ್ ಸ್ವಾಗತಿಸಿದರು.

Exit mobile version