UN NETWORKS
ಉಳ್ಳಾಲ: ತುಳುನಾಡಿನ ಕೃಷಿ, ಕ್ರೀಡೆ, ಸಂಪ್ರದಾಯ ಸೇರಿದಂತೆ ತುಳುನಾಡಿನ ನೆಲದ ಸಂಸ್ಕೃತಿ, ಗ್ರಾಮೀಣ ಸೊಗಡನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ದೇರಳಕಟ್ಟೆ ಮಾಗಣ್ತಡಿ ಗುತ್ತು ಮನೆಯಲ್ಲಿ ಕಂಬಳ ಪ್ರಾತಕ್ಷಿಕೆ, ಜನಪದ ಆಟೋಟ ಸ್ಪರ್ಧೆ, ಕೆಸರು ಗದ್ದೆ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮೇಳ, ಪುರಾತನ ವಸ್ತುಗಳ ಪ್ರದರ್ಶನ ಸಂಗಮ ಮೊದಲಾದ ವೈಶಿಷ್ಟಪೂರ್ಣ ಕಾರ್ಯಕ್ರಮವು ಭಾನುವಾರ ನಡೆಯಿತು.
ಬೆಳಿಗ್ಗೆ ಕಾರ್ಯಕ್ರಮಕ್ಕೆ ಆಗಮಿಸಿದ ಲಯನ್ಸ್‍ನ ಎಚ್.ಆರ್.ಹರೀಶ್, ಲಯನ್ಸ್‍ನ ಪ್ರಥಮ ಉಪರಾಜ್ಯಪಾಲರಾದ ದೇವದಾಸ್ ಭಂಡಾರಿ, ದ್ವಿತೀಯ ಉಪರಾಜ್ಯಪಾಲರಾದ ರೊನಾಲ್ಡ್ ಗೋಮ್ಸ್, ಜಿಲ್ಲಾ ಸಂಪುಟ ಕಾರ್ಯದರ್ಶಿ ವಸಂತ್ ಕುಮಾರ್ ಶೆಟ್ಟಿ ಮೊದಲಾದ ಗಣ್ಯರನ್ನು ಗುತ್ತಿನ ಮನೆಗೆ ಬೆಲ್ಲ ನೀರು ಕೊಟ್ಟು ಸ್ವಾಗತಿಸಲಾಯಿತು. ಬಳಿಕ ಗಣ್ಯರ ಉಪಸ್ಥಿತಿಯೊಂದಿಗೆ ಗುತ್ತಿನ ಮನೆಯ ನಾಗಬನದಲ್ಲಿ ಸೇವೆ, ಗುತ್ತಿನ ಚಾವಡಿಯಲ್ಲಿ ದೈವಗಳಿಗೆ ಪ್ರಾರ್ಥನೆ ನಡೆಯಿತು. ನಂತರ ಲಯನ್ಸ್‍ನ ರಾಜ್ಯಪಾಲರು ಹಾಗು ಉಪರಾಜ್ಯಪಾಲರು ಜಾನಪದ ಆಟಗಳ ಉದ್ಘಾಟನೆಯನ್ನು ನೆರವೇರಿಸಿದರು.
ಬಳಿಕ ಕೋಳಿ ಅಂಕ, ಕಂಬಳ ಪ್ರಾತ್ಯಕಿಕೆ ನಡೆಯಿತು. ಬಳಿಕ ಕೆಸರು ಗದ್ದೆಯಲ್ಲಿ ಮಕ್ಕಳು ಹಾಗೂ ದೊಡ್ಡವರಿಗೆ ಓಟ ಸ್ಪರ್ದೆ, ಹಗ್ಗ ಜಗ್ಗಾಟ, ನಿಧಿಶೋಧನೆ ಮೊದಲಾದವುಗಳು ನಡೆಯಿತು. ಅಲ್ಲದೆ ಹಳೆಯ ಪುರಾತನ ಮನೆಬಳಕೆಯ ವಸ್ತುಗಳ ಉದ್ಘಾಟನೆಯನ್ನು ಲಯ್ಸನೆಸ್‍ನ ನಮಿತಾ ಹರೀಶ್, ಸುಖಲತಾ ಭಂಡಾರಿ, ಅನಿತಾ ಗೋಮ್ಸ್ ಅವರು ನೆರವೇರಿಸಿದರು. ಮದ್ಯಾಹ್ನದ ಗ್ರಾಮೀಣ ಶೈಲಿಯ ಭೋಜನದ ಬಳಿಕ ಚಾವಡಿಯಲ್ಲಿ ಚರ್ಚೆ, ಆಶುಬಾಷಣ, ಅಂತ್ಯಾಕ್ಷರಿ, ಭಾಗವತಿಕೆ, ಗಾಯನ ನಡೆಯಿತು. ಮಹಿಳೆಯರಿಗಾಗಿ ತೆಂಗಿನಕಾಯಿ ತುರಿಯುವ ಸ್ಪರ್ಧೆ, ಈರುಳ್ಳಿ ಕತ್ತರಿಸುವ ಸ್ಪರ್ಧೆ, ಹಿಡಿಸೂಡಿ ತಯಾರಿ ಸ್ಪರ್ಧೆ ನಡೆಯಿತು.
ಸಂಜೆ ಗಣ್ಯರ ಉಪಸ್ಥಿತಿಯೊಂದಿಗೆ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಂಶೀ ರತ್ನಕುಮಾರ್, ಡಾ.ನವೀನ್ ಕೊಣಾಜೆ, ಗಣೇಶ್ ಪಂಬದರನ್ನು ಸನ್ಮಾನಿಸಲಾಯಿತು. ಬಳಿಕ ತುಳುನಾಡಿನ ಸಂಸ್ಕøತಿಯ ತುಳುನಾಡ ವೈಭವ ಸಾಂಸ್ಕøತಿಕ ಕಾರ್ಯಕ್ರಮ ವೈಶಿಷ್ಟಪೂರ್ಣವಾಗಿ ನಡೆಯಿತು.
ಕಾರ್ಯಕ್ರಮ ಸಂಘಟಕ ಪ್ರಸಾದ್ ರೈ ಕಲ್ಲಿಮಾರ್, ಚಂದ್ರಹಾಸ ಶೆಟ್ಟಿ, ನಿಟ್ಟೆ ಶಶಿಧರ ಶೆಟ್ಟಿ, ಕಿಶೋರ್ ಡಿ ಶೆಟ್ಟಿ, ಗಣೇಶ್ ಶೆಟ್ಟಿ, ರಘುರಾಮ ಶೆಟ್ಟಿ, ರಾಮಕೃಷ್ಣ ಗೌಡ, ಸುಮಿತ್ರ, ಡಾ.ನವೀನ್ ಶೆಟ್ಟಿ, ಹರಿಣಿ, ಜಯಂತ್ ರೈ, ವಿಜಯಲಕ್ಷ್ಮೀ ಪಿ.ರೈ, ಗೀತಾ ಹೆಗ್ಡೆ, ಸುರೇಖ ಎಸ್ ಶೆಟ್ಟಿ ಮೊದಲಾದವರು ಕಾರ್ಯಕ್ರಮವನ್ನು ಸಂಘಟಿಸಿದ್ದರು.