Site icon Ullalavani

ತಲಪಾಡಿ: ಫೆ 21 ರಿಂದ 25 ರವರೆಗೆ ಶ್ರೀ ಮಲರಾಯ, ಧೂಮಾವತಿ, ಬಂಟ ದೈವಗಳ ಪುನಃ ಪ್ರತಿಷ್ಠೆ

UN NETWORKS

ತಲಪಾಡಿ : ತಲಪಾಡಿ ಗ್ರಾಮದ ಅಲಂಕಾರಗುಡ್ಡೆ ಶ್ರೀ ಮಲರಾಯ, ಧೂಮಾವತಿ, ಬಂಟ ದೈವಸ್ಥಾನದ ಶ್ರೀ ನಾಗದೇವರು ಮತ್ತು ಶ್ರೀ ಮಲರಾಯ, ಧೂಮಾವತಿ, ಬಂಟ ದೈವಗಳ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಸತ್ಕರ್ಮ ಫೆ. 21ರಿಂದ 25ರವರೆಗೆ ಬಹ್ಮಶ್ರೀ ವರ್ಕಾಡಿ ದಿನೇಶ ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ವೇದಮೂರ್ತಿ ತಲಪಾಡಿ ಪಂಜಾಳ ಶ್ರೀ ಬಾಲಕೃಷ್ಣ ಭಟ್ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಳ್ಳನ ಮನೆ ಯಾನೆ ತಲಪಾಡಿ ದೊಡ್ಡಮನೆ ರವೀಂದ್ರನಾಥ ಶೆಟ್ಟಿ ತಿಳಿಸಿದರು.

ಕ್ಷೇತ್ರದ ವಠಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದ ಜೀರ್ಣೋದ್ಧಾರ ನಡೆಯದೆ ಹಲವು ವರ್ಷಗಳಾಗಿತ್ತು. ಜೀರ್ಣೋದ್ಧಾರ ಕುರಿತಂತೆ ಕ್ಷೇತ್ರದಲ್ಲಿ ನಡೆದ ಅಷ್ಟಮಂಗಳ ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಂತೆ ಅಂದಾಜು ಸುಮಾರು 75ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ನಡೆಸುವುದೆಂಬ ಯೋಜನೆ ಹಾಕಲಾಗಿತ್ತಾದರೂ ವಾಸ್ತು ಶಿಲ್ಪಿ ಮುನಿಯಂಗಳ ಕೃಷ್ಣ ಭಟ್ ಅವರ ನಿರ್ದೇಶನದಂತೆ ಗರ್ಭಗುಡಿ, ಚಾವಡಿ, ಸುತ್ತುಪೌಳಿ, ಗೋಪುರ, ಪಾಗರ ಕ್ಷೇತ್ರದ ಅಭ್ಯುದಯ ದೃಷ್ಟಿಯಲ್ಲಿ ಒಂದಕ್ಕೊಂದು ಹೊಂದಾಣಿಕೆ ಆಗುವುದಿಲ್ಲವೆಂಬ ಕಾರಣದಿಂದ ಮೆಟ್ಟಿಲ ಸಣ್ಣ ಕಲ್ಲು ಸಮೇತ ಎಲ್ಲವನ್ನು ನೂತನ ಸಾಮಗ್ರಿ ಬಳಸಿ ನಿರ್ಮಾಣ ಮಾಡಲಾಗುತ್ತಿದೆ.

ಕ್ಷೇತ್ರದ ಕಾರಣಿಕಕ್ಕೆ ಸಾಕ್ಷ್ಯವಾಗಿ ನ. 9ರಂದು ಶಿಲಾನ್ಯಾಸಗೈಯಲಾಗಿದ್ದು ಕೇವಲ ಮೂರು ತಿಂಗಳ ಅವಧಿಯಲ್ಲಿ ಕಾಮಗಾರಿ ಮುಗಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು ಅಂದಾಜು ಮೂರು ಕೋಟಿ ರೂ. ವೆಚ್ಚ ತಗುಲಿದ್ದು ಫೆ. 25ರಂದು ನೂತನ ಆಲಯದಲ್ಲಿ ಶ್ರೀ ದೈವಗಳ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ನಡಾವಳಿ ನಿರ್ಣಯ, ಶ್ರೀ ದೈವಗಳಿಗೆ ಪಂಚಗವ್ಯ, ಪಂಚಾಮೃತ ಸಹಿತ ಬ್ರಹ್ಮಕಲಶಾಭಿಷೇಕ ನಡೆಯಲಿದೆ ಎಂದು ತಿಳಿಸಿದರು.

ಫೆ. 20ರಂದು ಸಂಜೆ ಗಂಟೆ 5.00ಕ್ಕೆ ಸಾಮೂಹಿಕ ಪ್ರಾರ್ಥನೆ, ಶಿಲ್ಪಿಯಿಂದ ಆರೂಢ ಪರಿಗ್ರಹ, ಸ್ವಸ್ಥಿ ಪುಣ್ಯಾಹ, ಸಪ್ತಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತುಬಲಿ, ವಾಸ್ತುಹೋಮ, ದಿಕ್ಪಾಲಕ ಬಲಿ, ಬಿಂಬಾವಾಸಗಳು, ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ.

ಫೆ.21ರಂದು ಬೆಳಗ್ಗೆ ಗಂಟೆ 6ರಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಧ್ಯಾಹ್ನ ಗಂಟೆ 12.00ಕ್ಕೆ ದೇವರ ಮಹಾಪೂಜೆ, ವಟು ಆರಾಧನೆ ಹಾಗೂ ಪ್ರಸಾದ ವಿತರಣೆ, ಅನ್ನಸಂತರ್ಪಣೆ. ಫೆ. 23ರಂದು ಸಂಜೆ ಗಂಟೆ 4.00ಕ್ಕೆ ಕೋಟೆಕಾರು ಬೀರಿ ಶ್ರೀ ಗಣೇಶ ಮಂದಿರದ ಬಳಿಯಿಂದ ಆರಂಭಗೊಳ್ಳುವ ಹಸಿರುಹೊರೆ ಕಾಣಿಕೆ ಮೆರವಣಿಗೆ ಶೋಭಾಯಾತ್ರೆಗೆ ಸೋಮೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ ಚಾಲನೆ ನೀಡಲಿದ್ದಾರೆ.

ಫೆ. 24ರಂದು ಮಧ್ಯಾಹ್ನ ಗಂಟೆ 2.00ಕ್ಕೆ `ಶರಸೇತು ಬಂಧನ’ ಯಕ್ಷಗಾನ ತಾಳಮದ್ದಳೆ, ರಾತ್ರಿ ಗಂಟೆ 9.30ಕ್ಕೆ `ಊರ್ವಶಿ ಶಾಪ, ಕನಕಾಂಗಿ ಕಲ್ಯಾಣ’ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ. ರಾತ್ರಿ ಗಂಟೆ 7.00ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕುದ್ರೋಳಿ ದೇವಸ್ಥಾನದ ಅಧ್ಯಕ್ಷ ಆರ್. ಪದ್ಮರಾಜ್ ಅಧ್ಯಕ್ಷತೆ ವಹಿಸಲಿದ್ದು, ಸದಾನಂದ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಧಾರ್ಮಿಕ ಉಪನ್ಯಾಸ ನೀಡುವರು.

ಶಾಸಕಿ ಶಕುಂತಲಾ ಶೆಟ್ಟಿ ಹಾಗೂ ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಸೇರಿದಂತೆ ಗಣ್ಯರು ಉಪಸ್ಥಿತಲಿರುವರು.
ಫೆ. 25ರಂದು ಮಧ್ಯಾಹ್ನ 2.00ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ ಗಂಟೆ 7.00ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿ ಅವರಿಂದ ಆಶೀರ್ವಚನ, ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಜಾಹೀರಾತು

ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯ ಸಚ್ಚಿದಾನಂದ ಶೆಟ್ಟಿ ಹೊಸಮನೆ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಸುಬ್ಬಯ ಮಾರ್ಲ ಉಳಿಪಾಡಿಗುತ್ತು, ಪ್ರಧಾನ ಕಾರ್ಯದರ್ಶಿ ಬಿ. ಮೋಹನ್‍ದಾಸ ಗಾಂಭೀರ, ಅಧ್ಯಕ್ಷ ಡಾ| ಜಯಪಾಲ ಶೆಟ್ಟಿ ದೊಡ್ಡಮನೆ, ಬ್ರಹ್ಮಕಲಶ ಸಮಿತಿಯ ಗೌರವಾಧ್ಯಕ್ಷ ಕೆ.ಸಿ. ಆಳ್ವ ನೆತ್ತಿಲಬಾಳಿಕೆ, ಉಪಾಧ್ಯಕ್ಷ ರಾಮಯ್ಯ ಕಿಲ್ಲೆ ಮೇಗಿನ ಪಂಜಾಲಗುತ್ತು, ಮಲರಾಯ ದೈವಸ್ಥಾನದ ಪಾತ್ರಿ ಅಂತ ಪೂಜಾರಿ, ಹೊರೆಕಾಣಿಕೆ ನಿರ್ವಹಣಾ ಸಮಿತಿಯ ಪ್ರಧಾನ ಸಂಚಾಲಕ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು ಹಾಗೂ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಮೇಲಂಟ ಬೊಳ್ಯಗುತ್ತು ಉಪಸ್ಥಿತರಿದ್ದರು.

Exit mobile version