UN NETWORKS
ಸುಳ್ಯ: ಭವ್ಯ ಭಾರತ ದೇಶವು ವಿಶಿಷ್ಟ ಸಂಸ್ಕೃತಿ ಮತ್ತು ಸಂಪ್ರದಾಯದ ಮಾದರಿ ದೇಶವಾಗಿದ್ದು ಎಲ್ಲಾ ವರ್ಗದ ಜನರ ನಡುವಿನ ಸೌಹಾರ್ದತೆ ಮತ್ತು ಸಹಬಾಳ್ವೆ ಬಾರತದ ವೈಶಿಷ್ಟ್ಯತೆಯಾಗಿದೆ.
ಸಾಹಿತ್ಯದ ಮೂಲಕ ಸಾಮರಸ್ಯ ಸಾರುವ ಮಹತ್ಕಾರ್ಯ ನಿರಂತರವಾಗಿ ನಡೆದರೆ ಭಾರತ ನಿತ್ಯ ಶಾಂತಿಯ ನೆಲೆವೀಡಾಗಲಿದೆ ಎಂದು ಹವ್ಯಾಸಿ ಪತ್ರಕರ್ತ, ದ.ಕ.ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆ ಅಧ್ಯಕ್ಷ ಕೆ.ಎ.ಅಬ್ದುಲ್ ಅಝೀಝ್ ಪುಣಚ ಹೇಳಿದ್ದಾರೆ.
ಅಜ್ಜಾವರ ಚೈತನ್ಯ ಸೇವಾಶ್ರಮ ಸಂಚಾಲಕ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಯವರು ಮಾತನಾಡಿ”ಸಾಹಿತ್ಯ ಮಾನವರ ನಡುವೆ ಸೇತುವೆ ಕಟ್ಟುವ ಕೆಲಸವನ್ನು ಮಾಡಬೇಕು.ಭಾವನೆಗಳಿಗೆ ಅಕ್ಷರ ರೂಪ ನೀಡಿದಾಗ ಅದು ಸಮಾಜದಲ್ಲಿ ಅಮೂಲಾಗ್ರ ಪರಿವರ್ತನೆಗೆ ಕಾರಣವಾಗುತ್ತದೆ ಎಂದರು.
ಸುಳ್ಯ ಚರ್ಚ್ ಧರ್ಮಗುರು ಫಾ.ವಿನ್ಸೆಂಟ್ ಡಿಸೋಜ ಮಾತನಾಡಿ ” ಸ್ನೇಹ, ಸಹಬಾಳ್ವೆ ಪ್ರತಿಯೊಬ್ಬ ಮಾನವರ ಕರ್ತವ್ಯ ವಾಗಿದ್ದು ಸಹಜೀವಿಗಳೊಂದಿಗೆ ಪ್ರೀತಿ ತೋರಿಸುವುದು ಭಗವಂತನಿಗೆ ಪ್ರಿಯ ಕಾಯಕವಾಗಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ನಡೆದ ರಾಜ್ಯ ಮಟ್ಟದ ಬಹುಭಾಷಾ ಕವಿಗೋಷ್ಠಿಯಲ್ಲಿ ಬಲ್ಲೇನಹಳ್ಳಿ ಮಂಜುನಾಥ್ ಕೆ.ಆರ್.ಪೇಟೆ ಅಧ್ಯಕ್ಷತೆ ವಹಿಸಿದ್ದರು.
ಚಂದನ ಸಾಹಿತ್ಯ ವೇದಿಕೆ ಮತ್ತು ಉಜ್ವಲ್ ಪ್ರಜ್ವಲ್ ಪ್ರಕಾಶನ ಸಂಸ್ಥೆ ಅಧ್ಯಕ್ಷ ಸಾಹಿತಿ ಹೆಚ್.ಭೀಮರಾವ್ ವಾಷ್ಠರ್ ಸುಳ್ಯ ರವರ ಹುಟ್ಟುಹಬ್ಬದ ಅಂಗವಾಗಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಮತ್ತು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹನ್ನೆರಡು ಮಂದಿ ಸಾಧಕರಿಗೆ ಇದೇ ವೇಳೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ,ಸುಳ್ಯ ಕುರುಂಜಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಅಶೋಕ್ ಕುಮಾರ್ ಕಾಸರಗೋಡು, ಪಂ.ಶ್ಯಾಮಸುಂದರ್,ಲೇಖಕರಾದ ಕೆ.ಎಂ.ಇಖ್ಬಾಲ್ ಬಾಳಿಲ,ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯ ಹಮೀದ್ ಹಸನ್ ಮಾಡೂರು,ಎ.ಅಬೂಬಕರ್ ಅನಿಲಕಟ್ಟೆ, ವಿಟ್ಲ,ಅಲ್ತಾಫ್ ಬಿಳಗುಳ ಮೊದಲಾದವರು ಉಪಸ್ಥಿತರಿದ್ದರು.
ಕವಿ ಸಫ್ವಾನ್ ಸವಣೂರು, ಗುರುಪ್ರಸಾದ್ ಸುಳ್ಯ ವಿವಿಧ ಕಾರ್ಯಕ್ರಮಗಳನ್ನು ನಿರೂಪಿಸಿದರು.