Site icon Ullalavani

ಇಂದಿನ ಆಧುನಿಕತೆಯಲ್ಲಿ ಪ್ರೀತಿ, ವಾತ್ಸಲ್ಯ ಭಾವ ಕಡಿಮೆಯಾಗುತ್ತಿದೆ: ಶ್ರೀ ಕೃಷ್ಣ ಶಿವಕೃಪಾ

UN NETWORKS

ಕೊಣಾಜೆ: ಹಿಂದಿನ ಕಾಲದಲ್ಲಿ ಬಡತನವಿದ್ದರೂ ಪ್ರತಿಯೊಂದು ಮನೆಯಲ್ಲಿಯೂ ಭಜನೆ, ದೇವರ ನಾಮಸ್ಮರಣೆಯಂತಹ ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದ ಪರಿಣಾಮ ಕುಟುಂಬದಲ್ಲಿ ಪ್ರೀತಿ, ವಿಶ್ವಾಸ, ಪ್ರಾಮಾಣಿಕತೆ ಎಲ್ಲವೂ ಇತ್ತು. ಆದರೆ ಇಂದು ಕಾಲ ಬದಲಾಗುತ್ತಿದ್ದಂತೆ ಮನೆಗಳಲ್ಲಿ ಧಾರ್ಮಿಕತೆ, ಭಜನೆಯಂತಹ ಕಾರ್ಯಗಳು ಕಡಿಮೆಯಾಗುತ್ತಿದ್ದು ಜೊತೆಗೆ ಜನರಲ್ಲಿ ಪ್ರೀತಿ ವಿಶ್ವಾಸ ಪ್ರಾಮಾಣಿಕತೆ ಕಡಿಮೆಯಾಗುತ್ತಿದೆ ಎಂದು ಮಂಜೇಶ್ವರ ಧರ್ಮಜಾಗೃತಿ ಅಭಿಮಾನಿ ಬಳಗದ ಅಧ್ಯಕ್ಷರಾದ ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು ಅವರು ಅಭಿಪ್ರಾಯಪಟ್ಟರು.

ಅವರು ಪಟ್ಟೋರಿಯ ಶ್ರೀ ನಾಗಬ್ರಹ್ಮ ಭಜನಾ ಮಂಡಳಿ ಹಾಗೂ ಅಖಂಡ ಭಜನಾ ಸಪ್ತಾಹ ಸಮಿತಿ ವತಿಯಿಂದ ನಡೆಯುತ್ತಿರುವ ಅಖಂಡ ಭಜನಾ ಸಪ್ತಾಹದ ಅಂಗವಾಗಿ ಮಂಗಳವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.
ಇಂದು ನಮ್ಮಲ್ಲಿ ಕಾರು, ಬಂಗಲೆ ಎಲ್ಲವೂ ಇದ್ದರು ಕೂಡಾ ನೆಮ್ಮದಿ ಮಾತ್ರ ಮರೀಚಿಕೆಯಾಗಿದೆ. ಆದ್ದರಿಂದ ನಮ್ಮಲ್ಲಿ ಧಾರ್ಮಿಕತೆಯ ಅಂಶಗಳೆಉ ಬೆಳೆಯಬೇಕು. ಧಾರ್ಮಿಕತೆ ಬೆಳೆಯಬೇಕಾದರೆ ಭಕ್ತಿಭಾವವನ್ನು ನಾವು ಬೆಳೆಸಿಕೊಳ್ಳಬೇಕು. ಮನುಷ್ಯ ಎಷ್ಟೇ ಅನಾಚಾರ ಮಾಡಿದರೂ ಧರ್ಮ ಎಂದಿಗೂ ನಾಶವಾಗುವುದಿಲ್ಲ. ಆದರೆ ನಮ್ಮ ಸಂಸ್ಕೃತಿ, ವಿಚಾರಗಳು ನಾಶಗೊಳ್ಳುತ್ತವೆ. ಆದ್ದರಿಂದ ನಾವು ಭಗವಂತನ ಸಂಸ್ಮರಣೆಯೊಂದಿಗೆ ನಮ್ಮ ಸಂಸ್ಕೃತಿ ವಿಚಾರಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಮುಡಿಪು ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷರಾದ ಪ್ರಶಾಂತ್ ಕಾಜವ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಅಖಂಡ ಭಜನಾ ಸಪ್ತಾಹವನ್ನು ನಡೆಸುವುದು ಬಹಳ ಕಷ್ಟಕರವಾದ ಕಾರ್ಯ. ನಾಗಬ್ರಹ್ಮ ಭಜನಾ ಮಂಡಳಿಯವರು ಲೋಕ ಕಲ್ಯಾಣಾರ್ಥವಾಗಿ ನಡೆಸುತ್ತಿರುವ ಈ ಭಜನಾ ಸೇವೆಯು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.

ಉಳ್ಳಾಲ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷರಾದ ಚಂದ್ರಹಾಸ್ ಉಳ್ಳಾಲ್ ಅವರು ಮಾತನಾಡಿ, ನಾವು ಇಂದಿನ ಯುವ ಪೀಳಿಗೆಯಲ್ಲಿ ಧಾರ್ಮಿಕ ಚಿಂತನೆಯನ್ನು ಬೆಳೆಸುವ ಕಾರ್ಯ ಸಂಘಟನೆಗಳಿಂದ ನಿರಂತರವಾಗಿ ನಡೆಯಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಧಾರ್ಮಿಕ ಮುಖಂಡರಾದ ಬಾಬು ಶ್ರೀ ಶಾಸ್ತ ಕಿನ್ಯ ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ಶಂಕರಾನಂದ ಇನ್ನವಳ್ಳಿ, ನಿವೃತ್ತ ಶಿಕ್ಷಕ ನಾರಾಯಣ ಭಟ್ ಲಾಡ, ಬಿಜೆಪಿ ಮುಖಂಡ ಚಂದ್ರಹಾಸ ಅಡ್ಯಂತಾಯ, ಅಖಂಡ ಭಜನಾ ಸಪ್ತಾಹ ಸಮಿತಿ ಅಧ್ಯಕ್ಷ ರಘುರಾಮ ಕಾಜವ, ಸಮಿತಿಯ ಕೋಶಾಧಿಕಾರಿ ಬಂಟು ಕೆ. ಕಾಟುಕೋಡಿ, ಮುಖಂಡರಾದ ರಮೇಶ್ ರೈ ಕೆಳಗಿನ ಮನೆ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪ್ರವೀಣ್ ಪಟ್ಟೋರಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ರವೀಂದ್ರ ಪಟ್ಟೋರಿ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಮೋಹನ್ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು.

Exit mobile version