Site icon Ullalavani

ಶೋಷಕ ವ್ಯವಸ್ಥೆ ನಾಶವಾದಲ್ಲಿ ಸ್ವಾತಂತ್ರ್ಯ : ಮುನೀರ್ ಕಾಟಿಪಳ್ಳ

ಉಳ್ಳಾಲ: ದೇಶದಲ್ಲಿರುವ ಶೋಷಕ ವ್ಯವಸ್ಥೆ ಸಂಪೂರ್ಣ ನಾಶಗೊಳಿಸಿ, ಸಮಾನತೆಯ ಸಮಾಜ ನಿರ್ಮಿಸುವುದೇ ನೈಜ ಸ್ವಾತಂತ್ರ್ಯ ಎಂದು ಡಿವೈಎಫ್‍ಐ ರಾಜ್ಯಾಧ್ಯಾಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ಅವರು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‍ಐ) ಉಳ್ಳಾಲ ವಲಯ ಸಮಿತಿ ಆಶ್ರಯದಲ್ಲಿ ಅಮರ ಕ್ರಾಂತಿಕಾರಿ ಭಗತ್‍ಸಿಂಗ್ ಮತ್ತು ಸಂಗಾತಿಗಳ 85ನೇ ಹುತಾತ್ಮ ದಿನಾಚರಣೆ ಪ್ರಯುಕ್ತ ತೊಕ್ಕೊಟ್ಟು ಒಳಪೇಟೆಯ ಅಂಬೇಡ್ಕರ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

 

ಯಜಮಾನರ ಬದಲಾವಣೆ ಸ್ವಾತಂತ್ರ್ಯದ ಉದ್ದೇಶ ಅಲ್ಲ. ಅಸಮಾನತೆಯನ್ನು ಸಂಪೂರ್ಣ ನಾಶ ಮಾಡಿ, ಮನುಷ್ಯರ ನಡುವೆ ಶೋಷಣೆ ಇಲ್ಲದ ಸಮಾನತೆ ವಾತಾವರಣ ನಿರ್ಮಾಣ ಮಾಡುವುದು ಸ್ವಾತಂತ್ರ್ಯವಾಗಿದೆ. ಧರ್ಮ, ಜಾತಿ ಆಧಾರದಡಿ ಭಗತ್ ಸಿಂಗ್ ಹೋರಾಟ ನಡೆಸಿಲ್ಲ. ಕಾರ್ಮಿಕ ವರ್ಗದವರ ಮತ್ತು ಶೋಷಿತ ಮಂದಿಯ ಚಳುವಳಿಯನ್ನು ಮುಂದಿಟ್ಟು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವ್ಯಕ್ತಿ. ಆದರೆ ಸದ್ಯ ತೀವ್ರಗಾಮಿ ಶಕ್ತಿಗಳು ಭಗತ್ ಸಿಂಗ್ ಭಾವಚಿತ್ರವನ್ನು ಹಿಡಿದುಕೊಂಡು ಜಾತಿ ಆಧಾರದಲ್ಲಿ ಗುರುತಿಸದ ಭಗತ್ ಸಿಂಗ್ ಅವರ ನಿಲುವಿಗೆ ಅಪಮಾನ ಮಾಡುತ್ತಿದ್ದಾರೆ. ಅವರಿಗೆ ಚಿತ್ರ ಮಾತ್ರ ಬೇಕು ವಿಚಾರಗಳು ಬೇಡವಾಗಿದೆ. ಕೇಂದ್ರ ಸರಕಾರ ಬ್ರಿಟೀಷರ ಕಾಲದಲ್ಲಿದ್ದಂತಹ ಭೂಕಾಯ್ದೆಗಳನ್ನು ಪುನರ್ ಜಾರಿ ಮಾಡಿ, ವಿದೇಶಿ ಕಂಪೆನಿಗಳಿಗೆ ಕೃಷಿ ಭೂಮಿಯನ್ನು ನೀಡುತ್ತಿದೆ. ಮಂಗಳೂರಿನಲ್ಲಿರುವ ಸಿಟಿ ಸೆಂಟರ್ ಮತ್ತು ಫಾರಂ ಮಹಲುಗಳಲ್ಲಿರುವ ವಿದೇಶಿ ಹೊಟೇಲುಗಳೇ ಇದಕ್ಕೆ ಉದಾಹರಣೆಯಾಗಿದೆ. ಇದರಿಂದ ಕೃಷಿಕರ ಆಶಯಗಳಿಗೆ ವ್ಯತಿರಿಕ್ತವಾಗಿ ಸರಕಾರಗಳು ಆಡಳಿತ ನಡೆಸುತ್ತಿವೆ. ಯುವಜನಾಂಗಕ್ಕೆ ರಾಜಕೀಯ ವ್ಯವಸ್ಥೆಯ ತಿಳುವಳಿಕೆಯ ಕೊರತೆಯಿದೆ. ಭ್ರಷ್ಟಾಚಾರ ವಿರುದ್ಧ ದನಿ ಎತ್ತುತ್ತಾರೆ ಆದರೆ ತಾವು ಹಣ ಮಾಡಲು ಯಾವ ದಾರಿಯೂ ಆಗಬಹುದು ಎಂದು ದಾರಿ ತಪ್ಪುತ್ತಿದ್ದಾರೆ. ಇಂತಹ ಯುವಜನಾಂಗದ ಆಲೋಚನೆಗಳನ್ನು ಬದಲಿಸಬೇಕೆಂಬ ದೃಷ್ಟಿಯಿಂದ ಹುತಾತ್ಮ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

 

ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್ ಮಾತನಾಡಿ ಆಂಗ್ಲರು ಭಾರತಕ್ಕೆ ವ್ಯಾಪಾರಕ್ಕಾಗಿ ಬಂದು ದೇಶವನ್ನು ಆಳಿದರು. ಸ್ವಾತಂತ್ರ್ಯ ನಂತರವೂ ಭಾರತದಲ್ಲಿ ಅಧಿಕಾರಕ್ಕೆ ಬಂಧ ಸರಕಾರಗಳು ವಿದೇಶಿ ಬಂಡವಾಳಶಾಹಿಗಳಿಗೆ ಮಣೆ ಹಾಕುವ ಮೂಲಕ ಇನ್ನೊಮ್ಮೆ ದೇಶವನ್ನು ವಿದೇಶಿ ಬಂಡವಾಳಶಾಹಿಗಳಿಗೆ ಮಾರಲು ಹೊರಟಿರುವುದು ಖೇದನೀಯ, ವಿದೇಶಿ ವ್ಯಾಪರ ಸಂಸ್ಥೆಗಳ ಎದುರು ದೇಶೀಯ ವ್ಯಾಪಾರಿಗಳು ವ್ಯಾಪರಾದಿಂದ ಹಿಮ್ಮುಖರಾಗುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.

ಡಿವೈಎಫ್‍ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಬಜಾಲ್, ಎಸ್‍ಎಫ್ ಜಿಲ್ಲಾಧ್ಯಕ್ಷ ನಿತಿನ್ ಕುಮಾರ್, ಡಿವೈಎಫ್‍ಐ ಉಳ್ಳಾಲ ವಲಯಾಧ್ಯಕ್ಷ ಅಶೋಕ್ ಶೆಟ್ಟಿ ಚೆಂಬುಗುಡ್ಡೆ, ಕಾರ್ಯದರ್ಶಿ ಜೀವನ್ ಕುತ್ತಾರ್ ಉಪಸ್ಥಿತರಿದ್ದರು.

ಸಭೆಗೆ ಮುನ್ನ ತೊಕ್ಕೊಟ್ಟು ಜಂಕ್ಷನ್ನಿನಿಂದ ತೊಕ್ಕೊಟ್ಟು ಅಂಬೇಡ್ಕರ್ ಮೈದಾನದವರೆಗೆ ಡಿವೈಎಫ್ ಐ ಕಾರ್ಯಕರ್ತರಿಂದ ರ್ಯಾಲಿ ನಡೆಯಿತು.

Exit mobile version