UN NETWORKS
ತೊಕ್ಕೊಟ್ಟು: ಬೇಡಿಕೆ, ಬೆಲೆ ಹೆಚ್ಚಿರುವ ಗೋಡಂಬಿ ಬೆಳೆ ಬೆಳೆಸುವಲ್ಲಿ ರೈತರು ದಿವ್ಯ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದನ್ನು ಗಣನೆಗೆ ತೆಗೆದುಕೊಳ್ಳುವ ಮೂಲಕ ವಿದೇಶಗಳಿಗೆ ಕಳುಹಿಸುವ ವಿಪುಲ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಬೆಳೆ ಬೆಳೆಯುವಲ್ಲಿ ಇನ್ನಷ್ಟು ಪ್ರಬಲವಾಗಬೇಕಿದೆ ಎಂದು ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ನಾರಾಯಣ ಸ್ವಾಮಿ ಹೇಳಿದರು.
ವಿಭಿನ್ನ ಬೆಳೆಯಾಗಿರುವ ಗೋಡಂಬಿ ಬೆಲೆ ಎಂದಿಗೂ ಕಡಿಮೆಯಾಗಿಲ್ಲ. ಏಲಕ್ಕಿ ಬೆಲೆಯಲ್ಲಿ ವ್ಯತ್ಯಾಸಗಳಾಗಿವೆ, ಮೆಣಸಿನ ಬೆಳೆ ಸದ್ಯ ಬೀಳುತ್ತಿದೆ. ದೇಶದಿಂದ 28 ದೇಶಗಳಿಗೆ ಗೋಡಂಬಿ ರಫ್ತಾಗುತ್ತಿದೆ. ಇದರಿಂದ ವಾರ್ಷಿಕ 5,169 ಕೋಟಿ ರೂಗಳ ವರಮಾನ ಬರುತ್ತಿದೆ. ಆದರೆ 5,000 ಕೋಟಿ ರೂ.ಗಳಲ್ಲಿ ಕಚ್ಚಾ ವಸ್ತುಗಳನ್ನು ವಾಪಸ್ಸು ಪಡೆಯಲಾಗುತ್ತಿದೆ. ಇದರಿಂದ ಕೇವಲ 169 ಕೋಟಿ ರೂ.ಗಳು ಮಾತ್ರ ಉಳಿಯುತ್ತಿದೆ. ದೇಶದ ಸಂಸ್ಕರಣಾ ಘಟಕಗಳಿಗೆ ಕಚ್ಚಾ ವಸ್ತುಗಳು ಸಾಕಾಗುತ್ತಿಲ್ಲ. ಗೋಡಂಬಿ ಬೆಳೆಯಲ್ಲಿ ವರಮಾನ, ಇಳವರಿಯಿದ್ದರೂ ಬೆಳೆ ಬೆಳೆಯಲು ನಿರ್ಲಕ್ಷ್ಯ ವಹಿಸಲಾಗುತ್ತಿದೆ. 2020ನ ಇಸವಿಯಲ್ಲಿ 15 ಲಕ್ಷ ಟನ್ ಬೇಡಿಕೆ ಯಿದೆ. ಇದೀಗ ಕೇವಲ 8 ಲಕ್ಷ ಟನ್ ಬೆಳೆಯಲಾಗುತ್ತಿದೆ. ಬೆಳೆಯಬೆಕಾಗಿರುವುದು ದೇಶದ ರೈತರ ಕರ್ತವ್ಯ . ಈ ನಿಟ್ಟಿನಲ್ಲಿ ಗೋಡಂಬಿ ಬೆಳೆಯುವಲ್ಲಿ ಪ್ರಬಲವಾಗಬೇಕಿದ್ದು, ಅವಕಾಶವನ್ನು ಉಪಯೋಗಿಸಬೇಕಿದೆ. ಸುಲಭವಾದ ಬೆಳೆಯನ್ನು ನಿರ್ಲಕ್ಷ್ಸಿಸಿದರೆ ತೊಂದರೆಗೀಡಾಗಲಿದ್ದೇವೆ ಎಂದ ಅವರು ಟೀ ಸೊಳ್ಳೆ, ಕಾಂಡಾ ಕೊರೆಯುವ ಹುಳು ತೊಂದರೆಯಿದ್ದರೂ ದೊಡ್ಡ ಪ್ರಮಾಣದಲ್ಲಿ ರೋಗಗಳಿಲ್ಲ. ಹೂವು ಬಿಟ್ಟಾಗ ಮಾತ್ರ ಕಾರ್ಯಗಳಿರುತ್ತವೆ ಮಳೆಗಾಲ ಆರಂಭವಾದಾಗ ಹನಿ ನೀರಾವರಿ ಅಳವಡಿಸಿದಲ್ಲಿ ಅನುಕೂಲದ ಜತೆಗೆ ಇಳವರಿಯೂ ಜಾಸ್ತಿಯಾಗುವುದು ಎಂದರು.
ಕೃಷಿ ವಸ್ತುಪ್ರದರ್ಶನವನ್ನು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ. ಸಂಪತ್ ಸಾಮ್ಯಜ್ಯ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸಂಶೋಧನಾ ನಿರ್ದೇಶಕ ಡಾ.ಎಂ.ಕೆ.ನಾಯ್ಕ್ ವಹಿಸಿದ್ದರು.
ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್ ಗೇರು ಬೆಳೆ ಮತ್ತು ಗೇರು ತೋಟದಲ್ಲಿ ಅಂತರ್ ಬೆಳೆಯ ಉತ್ಪಾದನಾ ತಾಂತ್ರಿಕತೆಗಳು ಎಂಬ ಮಾಹಿತಿ ಕೈಪಿಡಿ ಬಿಡುಗಡೆಗೊಳಿಸಿದರು.
ಉಳ್ಳಾಲ ನಗರ ಸಭೆ ಅಧ್ಯಕ್ಷ ಕೆ.ಹುಸೇನ್ ಕುಂಞಮೋನು, ಪುತ್ತೂರು ಗೇರು ನಿರ್ದೇಶನಾಲಯದ ನಿರ್ದೇಶಕ ಡಾ.ಎಂ,ಗಂಗಾಧರ ನಾಯಕ್, ಬ್ರಹ್ಮಾವರ ಕೃಷಿ ಡಿಪ್ಲೋಮ ಕಾಲೇಜಿನ ಪಾಂಶುಪಾಲ ಡಾ.ಸುಧೀರ ಕಾಮತ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್.ಕೆಂಪೇಗೌಡ, ವಲಯ ಕೃಷಿ ಮತ್ತು ತೋಟಗಾರಿಕಾ ಸಹ ಸಂಶೋಧನಾ ನಿರ್ದೇಶಕ ಡಾ. ಎಸ್. ಯು. ಪಾಟೀಲ್, ಉಳ್ಳಾಲ ನಗರ ಸಭೆ ಸದಸ್ಯ ಸುಕುಮಾರ ಉಳ್ಳಾಲ ಬೈಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕೃಷಿ ಸಾಧಕರಾದ ರಾಷ್ಟ್ರಪ್ರಶಸ್ತಿ ವಿಜೇತ ಚಂದ್ರಶೇಖರ್ ಗಟ್ಟಿ ಕೊಂಡಾಣ, ರಾಜ್ಯ ಪ್ರಶಸ್ತಿ ವಿಜೇತ ಮೂಡಬಿದ್ರೆಯ ಎಡ್ವರ್ಡ್ ರೆಬೆಲ್ಲೊ, ಸಮಗ್ರ ಕೃಷಿ ಪ್ರಶಸ್ತಿ ಪುರಸ್ಕೃತ ಸುಳ್ಯ ಪೇರಾಜೆಯ ಪಿ.ಬಿ.ಪ್ರಭಾಕರ ರೈ, ನೀರುಮಾರ್ಗ ಪೆಡಮಲೆಯ ಹೆನ್ರಿ ಕ್ರಾಸ್ತ, ಕುಂದಾಪುರದ ಕಿಶನ್ ಕುಮಾರ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಉಳ್ಳಾಲ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಲಕ್ಷ್ಮಣ ಸ್ವಾಗತಿಸಿದರು. ಪ್ರವೀಣ್ ಎಸ್. ಕುಂಪಲ ಕಾರ್ಯಕ್ರಮ ನಿರೂಪಿಸಿದರು, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಧನಂಜಯ ವಂದಿಸಿದರು.ಈ ಸಂದರ್ಭ ಕೃಷಿ ಉತ್ಪನ್ನಗಳ ಪ್ರದರ್ಶನ ಹಾಗೂ ಗೇರು ಬೆಳೆಗಳ ಪ್ರದರ್ಶನ ನಡೆಯಿತು.
ಸಂಶೋಧನಾ ಕೇಂದ್ರ ನಡೆದುಬಂದ ದಾರಿ
ಉಳ್ಳಾಲ ಕೃಷಿ ಸಂಶೋಧನಾ ಕೇಂದ್ರ 14 ಹೆಕ್ಟೆರ್ ಪ್ರದೇಶವನ್ನು ಹೊಂದಿದೆ. ತೊಕ್ಕೊಟ್ಟುವಿನಂತಹ ನಗರದ ಮಧ್ಯಭಾಗದಲ್ಲಿ 1950 ರಲ್ಲಿ ಸ್ಥಾಪನೆ . ಕರಾವಳಿ ವಲಯಕ್ಕೆ ಸೇರಿದ ಬಹುಮುಖ್ಯ ಸಂಶೋಧನಾ ಕೇಂದ್ರ. ಗೇರುಕೃಷಿಯನ್ನು ಉತ್ತಮ ಸಾಧನೆ ಮಾಡಿದೆ. ಮುಖ್ಯ ಗುರಿ ಹೆಚ್ಚಿನ ಇಳುವಳರಿ, ಗುಣಮಟ್ಟದ ಗೇರು ಬೆಳೆ , ಸಸ್ಯ ಸಂರಕ್ಷಣೆಯಾಗಿದೆ. ರೈತರಿಗೆ ಉತ್ತಮ ಗುಣಮಟ್ಟದ ಗಿಡ ಪೂರೈಸುವುದು,
ಮಾಹಿತಿಯನ್ನು ಒದಗಿಸುವುದು , ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ ಉಳ್ಳಾಲ1,2,3,4 ಯುಎನ್ -50 ತಳಿ ಅಭಿವೃದ್ಧಿ ಯನ್ನು ನಡೆಸಿದೆ. ಈ ಪೈಕಿ ಉಳ್ಳಾಲ1 ಮತ್ತು 2 ರಾಜ್ಯದ ಎಲ್ಲಾ ಭಾಗಗಳಲ್ಲಿ ತಳಿಗಳು ಹರಡಿವೆ. ಇದು ಇಲ್ಲಿ ಶ್ರಮವಹಿಸಿ ದುಡಿದ ವಿಜ್ಞಾನಿಗಳ ಹೆಮ್ಮೆಯ ಸಂಗತಿ. 2010 ರಲ್ಲಿ ಇಂಡಿಯಾ 2-1, 2016 ರಲ್ಲಿ ಪ್ರಿಯಾಂಕ ತಳಿಯನ್ನು ಕರಾವಳಿ ಭಾಗಕ್ಕೆ ಶಿಫಾರಸ್ಸನ್ನೂ ನಡೆಸಿದೆ. ಕಸಿ ಗಿಡಗಳು, ಬೀಜಗಳನ್ನು ಇತರೆ ರಾಜ್ಯಗಳಿಗೆ ಪೂರೈಸುವ ಕಾರ್ಯವೂ ಕೇಂದ್ರದಿಂದ ಆಗಿದೆ. ಅಂತರಬೆಳೆಯಾಗಿ ಪೊದೆ ಮೆಣಸು, ಸುವರ್ಣ ಗೆಡ್ಡೆ, ಅರಶಿನ ಗಿಡ 2016ರಿಂದ ಬೆಳೆಸುತ್ತಾ ಬಂದು, ಜನರಿಗೆ ಶಿಫಾರಸ್ಸು ನಡೆಸಿದೆ. ಪ್ರತಿವರ್ಷವೂ 80,000 ದಿಂದ 1 ಲಕ್ಷದವರೆಗಿನ ಗುಣಮಟ್ಟದ ಕಸಿಗಿಡಗಳನ್ನು ರೈತರಿಗೆ ವಿತರಿಸಿದೆ. ಕಾಳುಮೆಣಸು, ಜೀಗುಜ್ಜೆ, ಕಸಿ ಮಾವಿನಗಿಡ, ತೆಂಗಿನ ಗಿಡ, ನುಗ್ಗೆ ಗಿಡ, ಪಪ್ಪಾಯಿ ಗಿಡ ಹೆಚ್ಚಿನ ಇಳವರಿ ನೀಡುವ ಗಿಡಗಳನ್ನು ವಿತರಿಸಲಾಗಿದೆ. ಬೇರೆ ರಾಜ್ಯಗಳಿಂದ 65 ಜಾತಿಯ ಗೇರು ಮತ್ತು ಗೋಡಂಬಿ ಗಿಡಗಳ ಸಂಶೋಧನೆಗಳನ್ನು ನಡೆಸಲಾಗಿದೆ. ಬಾಳೆಪುಣಿ ಗ್ರಾಮವನ್ನು ದತ್ತು ಗ್ರಾಮವನ್ನಾಗಿ ಪಡೆದುಕೊಂಡಿರುವ ಕೇಂದ್ರ ಅಲ್ಲಿನ ರೈತರಿಗೆ ಹೊಸ ತಂತ್ರಜ್ಞಾನದ ಅರಿವು ಮೂಡಿಸಿದೆ.
ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಆಫರ್ ಬಂದರೂ ಹೋಗದೆ, ತಂದೆಯ ಎರಡು ಎಕರೆ ಜಮೀನಿನಲ್ಲಿ ಗೆಂದಾಳಿ ಸೀಯಾಳದ ತೋಟವನ್ನು ವೈಜ್ಞಾನಿಕ ತಳಹದಿಯ ಮೇಲೆ ಬೆಳೆಸಿದೆ. ಗಿಡ ನಾಟಿ ಮಾಡುವ ಸಂದರ್ಭ ಮೊದಲು ಅಗೆದ ಮಣ್ಣನ್ನು ಬೇರೆಯಿಟ್ಟು, ಅದನ್ನು ಹಾಕಿದಲ್ಲಿ ಪೋಷಕಾಂಶ ಲಭಿಸಲು ಸಾಧ್ಯ. ಹಾಗೆಯೇ ಮಾಡಿದ್ದರಿಂದ ಯಶಸ್ಸು ಲಭಿಸಿದೆ. ನಡುವೆ ತೆಂಗಿಗೆ ಕಾಡಿದ ಕುರುವಾಯಿ ಕಾಟ ಆರಂಭವಾಗಿದ್ದು, ಅದಕ್ಕೆ ನ್ಯಾಫ್ತಲೀನ್ ಬಾಲ್ ನ್ನು ಇಟ್ಟು ನಿವಾರಿಸಿ ತೋಟವನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದೇನೆ,. ಅಲ್ಲದೆ ರೈತರಿಗೂ ವೈಜ್ಞಾನಿಕ ಮಾಹಿತಿಯನ್ನು ನೀಡುತ್ತಾ ಬಂದಿದ್ದೇನೆ.
ಕೃಷಿ ಸಾಧಕ
ಚಂದ್ರಶೇಖರ್ ಗಟ್ಟಿ ಕೊಂಡಾಣ