Site icon Ullalavani

ಪ್ರಕರಣಗಳ ನಿಗೂಢತೆಯನ್ನು ಬಯಲಿಗೆಳೆಯಲು ರಾಜ್ಯ ಸರಕಾರ ವಿಫಲ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ರಾಜ್ಯ ಸರಕಾರ ಜಿಲ್ಲೆ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಪ್ರಕರಣಗಳ ನಿಗೂಢತೆಯನ್ನು ಬಯಲಿಗೆ ತರಲು ವಿಫಲವಾಗುತ್ತಿದೆ. ಇದರಿಂದ ನ್ಯಾಯ ಸಿಗಬೇಕಾದ ಜನರಿಗೆ ಅನ್ಯಾಯ ಆಗುತ್ತಿದೆ ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಹೈದರ್ ಪರ್ತಿಪ್ಪಾಡಿ ಹೇಳಿದ್ದಾರೆ.

ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಸರಕಾರದ ನಿಷ್ಕ್ರಿಯತೆ ಮತ್ತು ಐಎಎಸ್ ಅಧಿಕಾಡಿ ಡಿ.ಕೆ ರವಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಲು ಆಗ್ರಹಿಸಿ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮುಡಿಪು ಕಾಲೇಜು ವಿದ್ಯಾರ್ಥಿಗಳ ಪ್ರವಾಸಕ್ಕೆ ತಡೆ, ಸಹೋದರತೆಯೊಂದಿಗೆ ಬೀಚಿಗೆ ತೆರಳುವ ಮಕ್ಕಳಿಗೆ ಹಲ್ಲೆ, ಮಸೀದಿ, ಪ್ರಾರ್ಥನಾಲಯಗಳಿಗೆ ಕಲ್ಲು ಮತ್ತು ಮೂರೂವರೆ ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಹೀಗೆ ನಿರಂತರ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಸರಕಾರ ಮಾತ್ರ ನೈತಿಕ ಪೊಲೀಸರಿಗೆ, ತಪ್ಪಿತಸ್ಥರಿಗೆ ಕಠಿಣ ಕ್ರಮ ಕೈಗೊಳ್ಳಲು ವಿಫಲವಾಗುತ್ತಿವೆ. ಇದರಿಂದ ಸರಕಾರದ ಮೇಲಿನ ನಂಬಿಕೆಯನ್ನು ಜನರು ಕಳೆದುಕೊಂಡಿದ್ದಾರೆ. ಜಿಲ್ಲೆಯ ಮಂತ್ರಿಗಳು ತಮ್ಮ ಜವಾಬ್ದಾರಿಯನ್ನು ನಿಭಾಯಿಸದೇ ಇರುವುದರಿಂದ ಜಿಲ್ಲೆಯಲ್ಲಿ ನೆಮ್ಮದಿಯಿಲ್ಲದಂತಾಗಿದೆ ಎಂದರು.

ಮಂಗಳೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ ಉಸ್ಮಾನ್ ಅಕ್ಸಾ ಮಾತನಾಡಿ ದೌರ್ಜನ್ಯಗಳು ನಿರಂತರ ನಡೆಯುತ್ತಿದ್ದರೂ, ಈ ಭಾಗದ ಶಾಸಕರು ಸೌಜನ್ಯಕ್ಕಾದರೂ ನೊಂದವರ ಮನೆಗೆ ಭೇಟಿ ನೀಡಿಲ್ಲ. ಅಧಿಕಾರದ ಅವಧಿಯಲ್ಲಿ ಸರಿಯಾಗಿ ಜನರ ಸೇವೆ ಮಾಡಿದರೆ ಮಾತ್ರ ಜನ ನಂಬುತ್ತಾರೆ. ಇದರ ಪರಿಣಾಮ ಮುಂದಿನ ಚುನಾವಣೆಯಲ್ಲಿ ಗೊತ್ತಾಗಲಿದೆ ಎಂದ ಅವರು ನಿಷ್ಠಾವಂತ ಐಎಎಸ್ ಅಧಿಕಾರಿ ಸಾವಿನ ಪ್ರಕರಣವನ್ನು ಸಿಬಿಐಗೆ ಸರಕಾರ ಶೀಘ್ರವೇ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭ ಜಿಲ್ಲಾ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಮಹಮ್ಮದ್ ಶಾಫಿ ಸಜಿಪ, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ದಾಸ್ ಶೆಟ್ಟಿ, ವಲೇರಿಯನ್ ಡಿಸೋಜಾ, ಅಶ್ಫಾಕ್ ಉಳ್ಳಾಲ, ರಾಜ್ಯ ಯುವ ವಿಭಾಗ ಉಪಾಧ್ಯಕ್ಷ ಅಶ್ರಫ್ ಕಲ್ಲೇಗ, ರಾಜ್ಯ ಅಲ್ಪಸಂಖ್ಯಾಕ ಘಟಕ ಮುನೀರ್ ಮುಕ್ಕಚ್ಚೇರಿ, ಇಬ್ರಾಹಿಂ ಕೊಣಾಜೆ, ಶಾಲಿಹ್ ಹರೇಕಳ, ಶ್ರೀಮಣಿ ಶೆಟ್ಟಿ, ಬಾಬು ನರಿಂಗಾನ, ಹಸನ್ ದೇರಳಕಟ್ಟೆ, ಪುತ್ತುಮೋನು ಹುಸೈನ್, ಅಜೀಜ್ ಕುಪ್ಪೆಪದವು ಮೊದಲಾದವರು ಉಪಸ್ಥಿತರಿದ್ದರು.

Exit mobile version