UN NETWORKS
ಉಳ್ಳಾಲ: ವಾಕ್ ಚಾತುರ್ಯದಿಂದ ಮಂಗಳೂರು ಉಡುಪಿಯಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಪರಿಸರ ಪ್ರೇಮಿ ರೇಡಿಯೋ ಜಾಕಿ ರಶ್ಮಿ ಅವರ ಮದುವೆ ಸಮಾರಂಭದಲ್ಲೂ ಪರಿಸರದ ಕುರಿತು ಕಾಳಜಿ ವ್ಯಕ್ತಪಡಿಸಿದ್ದು, ಮದುವೆಗೆ ಬಂದ ಬಂಧುಗಳೆಲ್ಲರಿಗೂ ಉಚಿತವಾಗಿ ಗಿಡಗಳನ್ನು ಹಂಚುವ ಮೂಲಕ ಮಾದರಿಯಾಗಿದ್ದಾರೆ.
ಡಾಕ್ಯುಮೆಂಟರಿ ನಡೆಸಿದ್ದ ರಶ್ಮಿ : ದೇಶದಲ್ಲೇ ಬೆರಳೆಣಿಕೆ ಮಂದಿ ಆಚರಿಸುವ ರೈತ ದಿನವನ್ನು, ಆಚರಿಸಿದ ಆರ್.ಜೆ ರಶ್ಮೀ ಮತ್ತು ತಂಡ ಕೃಷಿಕರ ಬದುಕಿನ ಕುರಿತ ವಿವರವುಳ್ಳ ಡಾಕ್ಯುಮೆಂಟರಿಯನ್ನು ತಯಾರಿಸಿದ್ದರು. ಕೃಷಿ ಹಿನ್ನೆಲೆಯನ್ನೇ ಬದುಕಾಸಿಕೊಂಡ ತನ್ನ ಅಜ್ಜನ ಸಂಕಷ್ಟದ ದಿನಗಳನ್ನು ಮೆಲುಕು ಹಾಕುತ್ತಾ ಪರಿಸರ ಪ್ರೇಮಿ ಆರ್ ಜೆ ರಶ್ಮಿ ಉಳ್ಳಾಲ್ ಕೃಷಿ ಬದುಕಿನ ಚಿತ್ರಣವನ್ನು ತಮ್ಮ ಸಾಹಿತ್ಯ , ಅದ್ಭುತ ನಿರೂಪಣೆಯೊಂದಿಗೆ ಬಿಡಿಸಿಟ್ಟಿದ್ದರು.. ಈ ಡಾಕ್ಯುಮೆಂಟರಿ ಎಫ್ ಎಂ ಸಾಮಾಜಿಕ ಜಾಲತಾಣ ಮೂಲಕ ಹರಿದಾಡಿದ್ದು, ರೈತನ ಮಹತ್ವವನ್ನು ಸಾರಿತ್ತು. ಕೃಷಿಯನ್ನು ಉದ್ಯೋಗ, ಉದ್ಯಮವೆಂದು ತಿಳಿಯದ ಪರಿಸ್ಥಿತಿ, ಸಮಾಜದಲ್ಲಿ ಕೀಳರಿಮೆ ಭಾವ, ಕಾರ್ಮಿಕ ಅಲಭ್ಯತೆ, ಧವಸ ಧಾನ್ಯಗಳ ಕೊರತೆ, ಅನಿಯಮಿತ ಮಾರುಕಟ್ಟೆ, ದಾಸ್ತಾನು ಭದ್ರತಾ ಕೊರತೆ, ಆರ್ಥಿಕ ಸಹಾಯಕ್ಕೆ ಅಡೆತಡೆ, ಫಸಲಿಗೆ ಕಾಡುಪ್ರಾಣಿ-ಕೀಟಗಳ ಹಾವಳಿ, ಕಷ್ಟಪಟ್ಟು ಮಾಡಿದ ಫಸಲು ಮಾರುಕಟ್ಟೆಗೆ ಹೋಗುವಾಗ ಮಧ್ಯವರ್ತಿಗಳ ಹಾವಳಿ ಸೇರಿದಂತೆ ರೈತ ಅನುಭವಿಸುತ್ತಿರುವ ಕಷ್ಟವನ್ನು ಎಳೆಎಳೆಯಾಗಿ ಡಾಕ್ಯುಮೆಂಟರಿಯಲ್ಲಿ ತೆರೆದಿಟ್ಟಿರುವ ಕೀರ್ತಿ ರೇಡಿಯೋ ಜಾಕಿ ರಶ್ಮಿ ಅವರಿಗೆ ಸಲ್ಲುತ್ತದೆ.
ರಶ್ಮೀಯವರು ಮನಸ್ಸಿನ ಇಚ್ಛೆಯನ್ನು ಪೂರೈಸಿದ್ದಾರೆ. ಪರಿಸರದ ಕುರಿತ ಜಾಗೃತಿಯನ್ನು ಮೂಡಿಸಿದ್ದಾರೆ. ಎಲ್ಲಾ ಬಂಧುಗಳಿಗೆ ಗಿಡವನ್ನು ಕೊಡುವ ಮೂಲಕ ಮುಂದೊಂದು ದಿನ ಗಿಡ ಬೆಳೆದು ಮರವಾದಾಗ ಮಂಗಳಕಾರ್ಯದ ನೆನಪನ್ನು ಮೂಡಿಸುತ್ತದೆ. ಪಕ್ಷಿಗಳಿಗೆ ಹಣ್ಣಾಗುವಂತಹ ಸಸಿಗಳನ್ನು ವಿತರಿಸುವ ಮೂಲಕ ಪ್ರಕೃತಿಯ ಸಂರಕ್ಷಣೆಗೆ ಶುಭ ಕಾರ್ಯವನ್ನು ಸಮರ್ಪಿಸಿರುವುದು ಸಂತಸದ ವಿಚಾರ. ಸಾಗುವಾನಿ, ಹೊಂಗೆ, ನೆಲ್ಲಿ, ನೇರಳೆ, ಕದಂಬ ಸಸಿಗಳನ್ನು ವಿತರಿಸಲಾಗಿದೆ. ಸದ್ಯ ಅರಣ್ಯ ಇಲಾಖೆಯಿಂದ ಗಿಡಗಳು ಸಿಗುವುದು ಕಷ್ಟಕರವಾಗಿದ್ದರೂ, ರಶ್ಮೀ ಅವರು ಹೆಚ್ಚಿನ ಒಲವು ತೋರಿಸಿ ಗಿಡಗಳನ್ನು ಸಿಗುವಂತೆ ಮಾಡಿದ್ದಾರೆ. ಗಿಡ ಪಡೆದುಕೊಂಡವರು ಅದನ್ನು ನೀರು ಹಾಕಿ ಪೋಷಿಸುವುದು ಮಹತ್ತರ ಜವಾಬ್ದಾರಿ.
ಮಾಧವ ಉಳ್ಳಾಲ್
ಪರಿಸರ ಪ್ರೇಮಿ