UN NETWORKS
ಉಳ್ಳಾಲ: ಕರಾವಳಿ ಜಿಲ್ಲೆಯಲ್ಲಿ ಸಮನ್ವಯತೆಯನ್ನು ಕಾಪಾಡದೇ ಇದ್ದಲ್ಲಿ, ಮುಂದೆ ಎಲ್ಲರೂ ಸಮುದ್ರದಲ್ಲಿ ಕೊಚ್ಚಿ ಹೋಗುವುದು ಖಂಡಿತ. ರಾಣಿ ಅಬ್ಬಕ್ಕ ದೇವಿ ಉತ್ಸವ ವೈಭವಕ್ಕಾಗಿ ಅಲ್ಲ, ಆಕೆಯ ಆದರ್ಶಗಳನ್ನು ರಕ್ತಗತವಾಗಿ ಮೈಗೂಡಿಸಿಕೊಳ್ಳುವಂತೆ ಮಾಡಲು ಜಿಲ್ಲೆಯ ಜನರಲ್ಲಿ ಆಕೆಯ ಚರಿತ್ರೆಯನ್ನು ಅಧ್ಯಯನ ನಡೆಸುವಂತೆ ಪ್ರೇರೇಪಿಸಿ ಎಲ್ಲಾ ಬೇಧಗಳನ್ನು ಮರೆತು ದೇಶಕ್ಕೆ ಮಾದರಿ ಜಿಲ್ಲೆಯಾಗಿ ಮಾಡುವ ಉದ್ದೇಶ ಉತ್ಸವದ ಮೂಲಕ ಆಗಬೇಕಿದೆ ಖ್ಯಾತ ಸಾಹಿತಿ ವೈದೇಹಿ ಹೇಳಿದರು.
ಜಿಲ್ಲೆಯಲ್ಲಿ ಅನ್ಯಾಯ ಎದುರಿಸುವ ಶಕ್ತಿ ಯಾರಲ್ಲೂ ಇಲ್ಲದ ಸ್ಥಿತಿಯಿದೆ. ವೀರರಾಣಿ ಅಬ್ಬಕ್ಕಳ ಸ್ಮರಣೆಯನ್ನು ಇಡೀ ದೇಶ ಮಾಡಬೇಕಾದ ಕೆಲಸ, ಆದರೆ ದೇಶದ ಇತರೆಡೆ ವೀರರಾಣಿಯರನ್ನು ಸ್ಮರಿಸುವ ರೀತಿಯಲ್ಲಿ ಅಬ್ಬಕ್ಕಳ ಸ್ಮರಣೆಯಾಗುತ್ತಿಲ್ಲ. ಚರಿತ್ರೆಯಲ್ಲಿ ಪತಿಯೇ ಶತ್ರುವಾಗಿ ಹೋರಾಡಿದ ದೇಶದ ಏಕೈಕ ಮಹಿಳೆ ಅಬ್ಬಕ್ಕ. ಇಡೀ ಪ್ರಜೆಗಳನ್ನು ಮೊಗವೀರ, ಮುಸ್ಲಿಮರನ್ನು ಕೂಡಿದ ಸೈನ್ಯವನ್ನು ಕಟ್ಟಿ ಅವರನ್ನು ಮಕ್ಕಳಂತೆ ಕಂಡ ಉಜ್ವಲ ಚೇತನ ರಾಣಿ ಅಬ್ಬಕ್ಕಳ ಊರಲ್ಲಿ ಕಪೋಲಕಲ್ಪಿತ ಕಲ್ಪನೆಗಳ ಜತೆಗೆ ದ್ವೇಷದಲ್ಲೇ ಕಳೆಯುವ ಕಾಲ ಎದುರಾಗಿದೆ. ಆಕೆ ಹೆಸರಿನ ಉತ್ಸವ ನೃತ್ಯ , ಹಾಡುಗಳಿಗೆ ಮಾತ್ರ ಸೀಮಿತವಾಗದಿರಲಿ, ವಿಷಬೀಜ ಬಿತ್ತುವವರಿಗೆ ಜೀವಂತ ಆಹಾರ ಹಾಗೂ ಮನಸ್ಸಿಗೆ ನೆಲೆಯನ್ನು ಸ್ಥಾಪಿಸಲಿ. ಅಬ್ಬಕ್ಕ ಕಾಪಾಡಿದ್ದ ಹೊಂದಾಣಿಕೆ, ಪ್ರಜಾಪ್ರೀತಿ ಸರ್ವಧರ್ಮ ಸಮನ್ವಯತೆಯನ್ನು ಇಲ್ಲಿ ಬಿಸಾಡಲಾಗಿದೆ. ಇದು ಮುಂದುವರಿದಲ್ಲಿ ಜಿಲ್ಲೆಗೆ ಅಪಾಯ ಖಂಡಿತ. ಚರಿತ್ರೆ ಬರೀ ಚರಿತ್ರೆಯಾಗಿಯೇ ಉಳಿಯದೆ ದೇಶದ ಚೇತನ ಅನಿಸಿಕೊಂಡ ಮಹಿಳೆಯ ಆದರ್ಶಗಳನ್ನು ಬದುಕಲ್ಲಿ ಅಳವಡಿಸಲು ಯಾಕೆ ಸಾಧ್ಯವಿಲ್ಲ.
ಸೈನ್ಯವಿರುವುದು ಬಾಹ್ಯ ಜಗತ್ತಿನ ಯುದ್ಧ ಕ್ಕಾದರೂ, ಒಳಗಿಂದ ಏಕಾಂತ, ದ್ವಂದ್ವ ಅನುಭವದ ಮೂಲಕ ವಿಶಾಲವಾದ ಮನೋಭಾವದೊಂದಿಗೆ ಬಾಳಿದ ರಾಣಿಯನ್ನು ಇಟಲಿಯ ದೊರೆ ಹೊಗಳಿದ್ದರು. ಬರಿಗಾಲಲ್ಲಿ ರಾಣಿ ವೈಭೋಗವಿಲ್ಲದೆ ಬರಿಗಾಲಲ್ಲೇ ಬರುತ್ತಿದ್ದವಳು, ರಾಣಿಯಾಗಿ ಗುರುತಿಸುವಲ್ಲಿಯೂ ಸಾಧ್ಯವಾಗುತ್ತಿರಲಿಲ್ಲ. ಅಷ್ಟು ಸರಳತೆಯ ಜೀವನ ನಡೆಸಿದವಳು . ಆದರೆ ಈಗಿನ ಸಚಿವರುಗಳು ಬರುವ ರೀತಿಯೇ ಅದರ ವಿರುದ್ಧ ರೀತಿಯಲ್ಲಿದೆ. ಮಾದರಿಗಳಿಲ್ಲದ ಸಮಾಜದಲ್ಲಿ ಯುವಸಮುದಾಯ ಬದುಕುತ್ತಿದೆ ಎಂದ ಅವರು ಯುವಸಮುದಾಯವರಲ್ಲಿ ಆಕೆಯ ಆದರ್ಶಗಳನ್ನು ಬೆಳೆಸುವ ಸಲುವಾಗಿ ನಟಿ ಭಾವನ ನಟಿಸುವ ಮೂಲಕ ವೀರರಾಣಿ ಅಬ್ಬಕ್ಕ ಚಿತ್ರ ಹೊರಬರಬೇಕಿದೆ. ಸಿನಿಮಾ, ರಂಗಭೂಮಿಯ ಮೂಲಕ ಮೂಲೆ ಮೂಲೆಗಳಿಗೆ ಆಕೆಯ ಆದರ್ಶಗಳನ್ನು ಪಸರಿಸುವಂತಾಗಬೇಕಿದೆ. ಜಿಲ್ಲೆಯ ಹಿತದೃಷ್ಟಿಯನ್ನು ಇಟ್ಟುಕೊಂಡು ಸಿನಿಮಾ ಆಗಬೇಕಿದೆ ಎಂದರು.
ಮಾಧ್ಯಮಗಳನ್ನು ಓದುವ ಧೈರ್ಯವಿಲ್ಲದ ಸ್ಥಿತಿ ಇದೆ. ಎಲ್ಲರಲ್ಲೂ ಭಯದ ವಾತಾವರಣ ಮನೆಮಾಡಿದೆ. ಬಡತನದ ಕಾವು ತಟ್ಟುತ್ತಿದ್ದರೂ, ಯಾರೂ ಗಮನಹರಿಸದ ಸ್ಥಿತಿಯಲ್ಲಿ ಪ್ರಜೆಗಳಿದ್ದಾರೆ. ಸರಕಾರ ಮೂಲ ಶಿಕ್ಷಣ ಕೊಡಲು ಅಸಾಧ್ಯವಾಗಿದ್ದರೆ, ಆರೋಗ್ಯವನ್ನು ಒದಗಿಸಲು ವಿಫಲವಾಗಿದೆ. ಖಾಸಗೀಕರಣಕ್ಕೆ ಜೋತುಬಿದ್ದಿರುವ ಸರಕಾರಗಳು ಕನ್ನಡ ಶಾಲೆಗಳನ್ನು ಮುಚ್ಚುತ್ತಲಿದೆ. ಬ್ಯಾರಿ, ತುಳು, ಕೊಂಕಣಿ ಭಾಷೆಗಳನ್ನು ಎಲ್ಲವನ್ನು ಸಂಗಮವಾಗಿಸಿಕೊಂಡು ಕನ್ನಡ ಭಾಷೆಯ ಮೂಲಕ ಸಮನ್ವಯತೆಯನ್ನು ಕಾಪಾಡಲು ಸಾಧ್ಯವಿದೆ ಎಂದರು.
ಚಿತ್ರನಟಿ ಭಾವನಾ ಮಾತನಾಡಿ ದೇಶವ್ಯಾಪಿ ನೋಡಿದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ಕರ್ನಾಟಕ ರಾಜ್ಯ ಮಾತ್ರ ನೀಡುತ್ತಲಿದೆ. ಬಾಲಭವನದಲ್ಲಿದ್ದ ಸಂದರ್ಭ ಹೆಚ್ಚಿನ ಕಾರ್ಯಕ್ರಮಗಳು ಕರ್ನಾಟಕದಲ್ಲಿ ಮಾತ್ರ ನಡೆದಿವೆ. ಎಲ್ಲದರಲ್ಲೂ ರಾಜ್ಯ ಮುಂಚೂಣಿಯಲ್ಲಿದೆ. ಇಂತಹ ಸ್ಥಿತಿಯಲ್ಲಿ ಸಮಾಜವನ್ನು ಗಟ್ಟಿ ಮಾಡಿಸುವ ಶಕ್ತಿ ಎಲ್ಲರ ಜವಾಬ್ದಾರಿ ಎಂದರು.
ಪತ್ರಕರ್ತೆ ರೂಪಾ ಅಯ್ಯರ್ ಮಾತನಾಡಿ ಸಚಿವ ಖಾದರ್ ಅರ್ಜುನನಂತೆ, ಜನರ ಸೇವೆಯ ಜತೆಗೆ ಸಾಮಾಜಿಕವಾಗಿಯೂ ಮುಂಚೂಣಿಯಲ್ಲಿರುವ ವ್ಯಕ್ತಿ. ಯೋಧರು ಯಾವ ಜಾತಿಯವರು ಅನ್ನುವುದನ್ನು ನೋಡುತ್ತಿಲ್ಲ. ಮಾನವೀಯತೆಯನ್ನು ಮೈಗೂಡಿಸಿಕೊಂಡು ಬದುಕಬೇಕಿದೆ. ಹೆತ್ತವರು ಆಸ್ತಿಯನ್ನು ವಿಲ್ ಮಾಡುವ ಸಂದರ್ಭ ದೇಶಭಕ್ತಿ, ಸಂಸ್ಕೃತಿಯನ್ನು ಉಲ್ಲೇಖಿಸಬೇಕಿದೆ. ಅತ್ಯಾಚಾರಗಳು, ಮಹಿಳಾ ದಔಜನ್ಯಗಳು ತಡೆದು ಸಬಲೀಕರಣಗೊಳಿಸಲು ಹೆತ್ತವರಿಂದ ಮಾತ್ರ ಸಾಧ್ಯ ಎಂದರು.
ಆಹಾರ ಸಚಿವ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ರೂಪಾ ಅಯ್ಯರ್ ವಿವಿಧ ಗೋಷ್ಠಿಗಳಿಗೆ ಚಾಲನೆ ನೀಡಿ, ಉಳ್ಳಾಲದಲ್ಲಿರುವ ದರ್ಗಾ, ದೇವಸ್ಥಾನ, ಚರ್ಚ್ ಮಾತ್ರವಲ್ಲ ಇಲ್ಲಿನ ಶಾಸಕರೂ ಪ್ರಸಿದ್ಧಿ ಹೊಂದಿರುವವರಾಗಿದ್ದಾರೆ. ನಾವು ಯಾವ ಧರ್ಮದವರಾರೇನು, ನಮ್ಮ ಧರ್ಮ ನಾವು ಪೂಜಿಸಿ ಇನ್ನೊಂದು ಧರ್ಮ ಗೌರವಿಸುವುದು ಮುಖ್ಯ, ನಮ್ಮ ಮಕ್ಕಳಿಗೆ ಆಸ್ತಿ, ಸಂಪತ್ತಿನ ವಿಲ್ ಬರೆಯುತ್ತೇವೆ, ಅದೇ ರೀತಿ ದೇಶಭಕ್ತಿ, ಸಂಸ್ಕಾರದ ವಿಲ್ ಬರೆಯಬೇಕಿದೆ ಎಂದು ತಿಳಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾಕಾರಿ ಸಸಿಕಾಂತ ಸೆಂಥಿಲ್ ಎಸ್, ಜಿ.ಪಂ. ಸದಸ್ಯೆಯರಾದ ಮಮತಾ ಡಿ.ಎಸ್. ಗಟ್ಟಿ, ಧನಲಕ್ಷ್ಮಿ ಗಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು, ಸದಸ್ಯ ರಾಮಚಂದ್ರ ಕುಂಪಲ, ನಗರಸಭಾ ಅಧ್ಯಕ್ಷ ಹುಸೈನ್ ಕುಂಞಮೋನು, ಪೌರಾಯುಕ್ತೆ ವಾಣಿ ವಿ.ಆಳ್ವ, ಸೋಮೇಶ್ವರ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಉಚ್ಚಿಲ್, ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್, ಜಿ.ಪಂ. ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್, ಮುಖಂಡ ಸೀತಾರಾಮ ಬಂಗೇರ, ಎಸ್‍ಸಿಡಿಸಿಸಿ ಬ್ಯಾಂಕ್‍ನ ನಿರ್ದೇಶಕ ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಬಿ.ಹೆಚ್ ಖಾದರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ್ ರೈ ಬಿ., ಗಟ್ಟಿ ಸಮಾಜ ಸಂಘದ ಅಧ್ಯಕ್ಷ ಪವಿತ್ರ ಕುಮಾರ್ ಗಟ್ಟಿ, ಸಿಪಿಐಎಂ ಮುಖಂಡ ಕೃಷ್ಣಪ್ಪ ಸಾಲ್ಯಾನ್, ಕೊಲ್ಯ ಶಾರದಾ ಮಹೋತ್ಸವ ಸಮಿತಿ ಅಧ್ಯಕ್ಷ ಯಶೋಧರ ಕೊಲ್ಯ, ಅಬ್ಬಕ್ಕ ಉತ್ಸವ ಸಮಿತಿಯ ಸದಾನಂದ ಬಂಗೇರ, ಪುಷ್ಕಳ್ ಕುಮಾರ್, ಆನಂದ ಅಸೈಗೋಳಿ, ದೀಪಕ್ ಪಿಲಾರ್, ಲಕ್ಷ್ಮಿನಾರಾಯಣ, ಆಲಿಯಬ್ಬ ಮೊದಲಾದವರು ಉಪಸ್ಥಿತರಿದ್ದರು.
ಉತ್ಸವ ಸಮಿತಿಯ ಪ್ರಮುಖ ಉಸ್ತುವಾರಿ ದಿನಕರ ಉಳ್ಳಾಲ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬಾಸ್ಕರ್ ರೈ ಕುಕ್ಕುವಳ್ಳಿ ಮತ್ತು ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಅಝೀಝ್ ಹಕ್ ವಂದಿಸಿದರು.