Site icon Ullalavani

ಸಂಸ್ಕೃತಿಯ ರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು: ಕೃಷ್ಣ ಗಟ್ಟಿ ಅಡ್ಕ

UN NETWORKS

ಕೊಣಾಜೆ: ಭಾರತೀಯ ಸಂಸ್ಕೃತಿ ಅತ್ಯಂತ ಶ್ರೇಷ್ಠವಾದುದು. ಸಮಾಜ ಸೇವೆಯೊಂದಿಗೆ ನಮ್ಮ ಸಂಸ್ಕೃತಿಯ ರಕ್ಷಣೆಯಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಕೃಷ್ಣ ಗಟ್ಟಿ ಅಡ್ಕ ಹೇಳಿದರು.

ಅವರು ಪಟ್ಟೋರಿಯ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ದೈವಸ್ಥಾನದಲ್ಲಿ ಶ್ರೀ ನಾಗಬ್ರಹ್ಮ ಭಜನಾ ಮಂಡಳಿ ವತಿಯಿಂದ ನಡೆಯುತ್ತಿರುವ ಅಖಂಡ ಭಜನಾ ಸಪ್ತಾಹದ ಅಂಗವಾಗಿ ಶನಿವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಜನೆಯಿಂದ ಐಕ್ಯತೆಯನ್ನು ಬೆಳೆಸಿಕೊಳ್ಳಲು ಸಾಧ್ಯವಿದ್ದು, ಭಜನೆಯಿಂದ ಯಾವತ್ತೂ ವಿಭಜನೆ ಸಾಧ್ಯವಿಲ್ಲ. ಯುವ ಪೀಳಿಗೆಯು ಇಂತಹ ಭಜನಾ ಸಂಕೀರ್ತನೆಯಲ್ಲಿ ತೊಡಗಿಸಿಕೊಂಡು ಉತ್ತಮ ಸಮಾಜವನ್ನು ನಿರ್ಮಿಸಬೇಕಿದೆ ಎಂದು ಹೇಳಿದರು.

ಸಮಾರಂಭ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು, ಸಮಾಜಸೇವಾ ಮನೋಭಾವನೆಯೊಂದಿಗೆ ನಾವು ಧಾರ್ಮಿಕತೆಯ ಬಗ್ಗೆಯೂ ನಾವು ಅರಿತುಕೊಳ್ಳಬೇಕು. ಇಂತಹ ಭಜನಾ ಸಂಕಿರ್ತನೆಯಿಂದ ಸಮಾಜದಲ್ಲಿ ಉತ್ತಮ ಬಾಂಧವ್ಯದೊಂದಿಗೆ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನಾಗಬ್ರಹ್ಮ ಭಜನಾ ಮಂಡಳಿ ಸದಸ್ಯರು ಕಳೆದ ಹಲವಾರು ವರ್ಷಗಳಿಂದ ಭಜನಾ ಸಂಕೀರ್ತನೆಯನ್ನು ನಡೆಸಿಕೊಂಡು ಬರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಾಗಬ್ರಹ್ಮ ಉಳ್ಳಾಲ್ತಿ ಕ್ಷೇತ್ರ ಮಹಿಮೆಯನ್ನು ಸಾರುವ `ಪಟ್ಟೋರಿದ ಪುಣ್ಯ ಮಣ್ಣ್’ ಧ್ವನಿ ಸುರುಳಿ ಬಿಡುಗಡೆಯು ನಡೆಯಿತು. ಹಾಗೂ ಡ್ರಾಮಾ ಜ್ಯೂನಿಯರ್ ವಿಜೇತೆ ವಂಶಿ ರತ್ನಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಉಳ್ಳಾಲ ಪ್ರಖಂಡದ ಅಧ್ಯಕ್ಷರಾದ ಹರಿದಾಸ್ ಕೆ. ಮಾಡೂರು, ಅಖಂಡ ಭಜನಾ ಸಪ್ತಾಹ ಸಮಿತಿಯ ಅಧ್ಯಕ್ಷರಾದ ರಘುರಾಮ ಕಾಜವ, ಕಾರ್ಯಾಧ್ಯಕ್ಷರಾದ ಕರುಣಾಕರ ಕಾನ, ಶ್ರೀನಿವಾಸ ಕಾಜವ ಪಟ್ಟೋರಿ, ಭಜನಾ ಮಂಡಳಿಯ ಅಧ್ಯಕ್ಷರಾದ ಸಂತೋಷ್ ಕುಲಾಲ್ ಪಟ್ಟೋರಿ ಮೊದಲಾದವರು ಉಪಸ್ಥಿತರಿದ್ದರು.

ಭಜನಾ ಸಪ್ತಾಹದ ಪ್ರಧಾನ ಸಂಚಾಲಕರಾದ ರಾಮಕೃಷ್ಣ ಪಟ್ಠೋರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಜನಾ ಮಂಡಳಿಯ ಉಪಾಧ್ಯಕ್ಷ ಸತ್ಯನಾರಾಯಣ ಭಟ್ ಕೊಣಾಜೆ ಬೀಡು ಸ್ವಾಗತಿಸಿದರು. ಕಾರ್ಯದರ್ಶಿ ಪ್ರವೀಣ್ ಪಟ್ಟೋರಿ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಮೋಹನ್ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು.

Exit mobile version