Site icon Ullalavani

ಉಳ್ಳಾಲ ಬೀಚ್ ಉತ್ಸವ ,ಸರಕಾರದಿಂದ ಸಿಗುವ ವ್ಯವಸ್ಥೆಗಳನ್ನು ಒದಗಿಸಲು ಬದ್ಧ : ಸಚಿವ ಖಾದರ್

UN NETWORKS

ಉಳ್ಳಾಲ: ಉಳ್ಳಾಲ ಬೀಚ್ ಉತ್ಸವ ಉಳ್ಳಾಲದ ಪ್ರತಿಯೊಬ್ಬರ ಉತ್ಸವವೆಂದು ಕೈಜೋಡಿಸಬೇಕಾಗಿದ್ದು, ಸರಕಾರದಿಂದ ಸಿಗುವ ಎಲ್ಲಾ ವ್ಯವಸ್ಥೆಗಳನ್ನು ಒದಗಿಸಲು ಬದ್ಧ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಅವರು ಮೊಗವೀರಪಟ್ನ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಸೋಮವಾರ ಫೆ.9,10,11 ರಂದು ಉಳ್ಳಾಲದಲ್ಲಿ ನಡೆಯಲಿರುವ ಬೀಚ್ ಉತ್ಸವದ ಪ್ರಯುಕ್ತ ಜರಗಿದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನಿರೀಕ್ಷೆಗೂ ಮೀರಿ ಜನರು ಬರುವ ಸಾಧ್ಯತೆಯಿರುವುದರಿಂದ ಅಧಿಕಾರಿಗಳ ಸಂಪೂರ್ಣ ಸಹಕಾರ ಅಗತ್ಯ. ಅಧಿಕಾರಿಗಳ ಜತೆಗೆ ಸ್ಥಳೀಯ ಜನಪ್ರತಿನಿಧಿಗಳು ಕೈಜೋಡಿಸಬೇಕಿದೆ. ಸಮುದ್ರ ತೀರದಲ್ಲಿ ಭದ್ರತೆಯನ್ನು ಒದಗಿಸುವುದು ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ.

ಕೆಲವೇ ದಿನಗಳಲ್ಲಿ ಅಬ್ಬಕ್ಕ ಉತ್ಸವವೂ ಕ್ಷೇತ್ರದಲ್ಲಿ ನಡೆಯಲಿದ್ದು, ಉಳ್ಳಾಲ ವ್ಯಾಪ್ತಿಯಲ್ಲಿ ಉತ್ಸವಗಳ ಮೂಲಕ ಉಳ್ಳಾಲದ ಹೆಸರು ದೇಶಮಟ್ಟದಲ್ಲಿ ಪ್ರಸಿದ್ಧಿಯನ್ನು ಹೊಂದಬೇಕಿದ್ದು, ಈ ಮೂಲಕ ಪ್ರವಾಸಿಗರ ತಾಣವಾಗಿ ಬೆಳೆಯಬೇಕಿದೆ ಎಂದ ಸಚಿವರು ಇಲಾಖೆಯಿಂದ ದೊರೆಯುವ ಸೌಲಭ್ಯವನ್ನು ದೊರಕಿಸುವುದು ನಗರಸಭೆಯ ಜವಾಬ್ದಾರಿಯಾಗಿದೆ. ಒಂದು ಹಂತದಲ್ಲಿ ಸ್ಥಳೀಯಾಡಳಿತದಲ್ಲಿ ಅನುದಾನಗಳ ಕೊರತೆ ಎದುರಾದಲ್ಲಿ ಶಾಸಕರ ನಿಧಿಯಿಂದ ದೊರಕಿಸಿ ಕೊಡುವ ಭರವಸೆಯನ್ನು ನೀಡಿದರು.

ಜಾಹೀರಾತು

ಈ ಸಂದರ್ಭ ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿಯ ಸಿಇಒ ಯತೀಶ್ ಬೈಕಂಪಾಡಿ, ಮೊಗವೀರ ಶಾಲೆ ಹಳೇ ವಿದ್ಯಾರ್ಥಿ ಸಂಘದ ವಜ್ರ ಮಹೋತ್ಸವ ಸಮಿತಿ ಅಧ್ಯಕ್ಷ ಮನೋಜ್ ಸಾಲ್ಯಾನ್, ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಮೋನು, ಮೊಗವೀರ ಸಂಘದ ಮಾಜಿ ಅಧ್ಯಕ್ಷರಾದ ಸದಾನಂದ ಬಂಗೇರ, ಮುಖಂಡ ಬಾಬು ಬಂಗೇರ, ಪೌರಾಯುಕ್ತೆ ವಾಣಿ ಆಳ್ವ, ಪೊಲೀಸ್ ಸಹಾಯಕ ಆಯುಕ್ತ ಕೆ. ರಾಮರಾವ್, ನಗರಸಭೆ ಸದಸ್ಯ ಮೀನಾಕ್ಷಿ ಬಂಗೇರ ಉಪಸ್ಥಿತರಿದ್ದರು.

Exit mobile version