UN NETWORKS
ಉಳ್ಳಾಲ : ಭರತನಾಟ್ಯದಂತಹ ಕಲೆಯಲ್ಲಿ ತಮ್ಮ ಮಕ್ಕಳನ್ನು ತೊಡಗಿಸಿಕೊಳ್ಳುವ ಮೂಲಕ ಹೆತ್ತವರು ಹೆಚ್ಚಿನ ಒಲವು ತೋರಿಸಬೇಕು, ಈ ಮೂಲಕ ಭಾರತೀಯ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಆಗಬೇಕಿದೆ ಎಂದು ನಾಟ್ಯನಿಕೇತನದ ಸ್ಥಾಪಕ ಶಾಂತಲಾ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಅಭಿಪ್ರಾಯಪಟ್ಟರು.
ಭರತನಾಟ್ಯ ಎಲ್ಲಾ ಶಾಸ್ತ್ರೀಯ ನೃತ್ಯಕ್ಕೆ ತಾಯಿಯಾಗಿದ್ದು, ಈ ನೃತ್ಯ ಪ್ರಾಕಾರವನ್ನು ಗುರುಮುಖೇನ ಕಲಿತು ಸಾಧನೆ ಮಾಡಿದರೆ ಉತ್ತಮ ಕಲಾವಿದರಾಗಲು ಸಾಧ್ಯ ಇದನ್ನು ಗಮನದಲ್ಲಿಟ್ಟುಕೊಂಡು ಸಂಸ್ಕøತಿಯ ಉಳಿವಿನ ಜತೆಗೆ ಮಕ್ಕಳ ಉತ್ತಮ ಭವಿಷ್ಯವನ್ನು ರೂಪಿಸಬೇಕಾಗಿದೆ ಎಂದರು.
ಅಬ್ಬಕ್ಕ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ್ ಮಾತನಾಡಿ ಭಾರತೀಯ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಹೆತ್ತವರಿಂದ ಆಗಬೇಕಾಗಿದೆ. ಮಕ್ಕಳನ್ನು ಭರತನಾಟ್ಯ ಕಲಿಯುವಂತೆ ಪ್ರೋತ್ಸಾಹಿಸಬೇಕಿದೆ ಎಂದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಇಲ್ಲಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ| ನವೀನ್ ಎನ್. ಕೊಣಾಜೆ ಮಾತನಾಡಿ ನಮ್ಮ ದೇಶದ ಮೇಲೆ ಎಷ್ಟೇ ಆಕ್ರಮಣವಾದರೂ ನಮ್ಮ ಸಾಂಸ್ಕೃತಿಕ ಪರಂಪರೆಯ ಮೇಲೆ ಆಕ್ರಮಣ ಸಾಧ್ಯವಾಗಿಲ್ಲ ಅದಕ್ಕೆ ಮುಖ್ಯಗುರು ಶಿಷ್ಯ ಪರಂಪರೆ. ಇಂದಿಗೂ ಆ ಪರಂರೆಯಯನ್ನು ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಅವರಂತಹ ಗುರುಗಳಿಂದ ಉಳಿದುಕೊಂಡಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ ಮಾತನಾಡಿ ಗುರು ಉಳ್ಳಾಲ ಮೋಹನ್ ಕುಮಾರ್ ಅವರು ಅವಿರತ ಪರಿಶ್ರಮದಿಂದ ನೃತ್ಯ ಪರಂಪರೆಯನ್ನು ಬೆಳೆಸಿಕೊಂಡು ಬಂದಿದ್ದಾರೆ. ತಾವು ಗುರುಗಳಾಗಿ ರಾಷ್ಟ್ರಮಟ್ಟದಲ್ಲಿ ಶಿಷ್ಯಪರಂಪರೆಯನ್ನು ಬೆಳೆಸಿಕೊಂಡು ಶಿಷ್ಯರ ಮುಖೇನ ಈ ನೃತ್ಯ ಪರಂಪರೆಯನ್ನು ಮುನ್ನಡೆಸುತ್ತಿರುವುದು ಅಭಿನಂದನೀಯ ಎಂದರು.
ಆನಂದಾಶ್ರಮ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ಪಿ. ಗುರುರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ ನೃತ್ಯ ಕಲೆಯನ್ನು ಒಂದು ಆರಾಧನೆಯನ್ನಾಗಿ ನಡೆಸಿಕೊಂಡು ಬಂದವರು ಉಳ್ಳಾಲ ಮೋಹನ್ ಕುಮಾರ್ ಅವರು ಕಷ್ಟಕರವಾದ ಪರಿಸ್ಥಿತಿಯಲ್ಲೂ ನೃತ್ಯ ಶಿಕ್ಷಣ ಪಡೆದು ಮನೆಯನ್ನೇ ನೃತ್ಯ ಶಾಲೆಯನ್ನಾಗಿಸಿ ಇದೀಗ 60 ವರ್ಷಗಳ ಕಾಲ ನೃತ್ಯ ಶಿಕ್ಷಣ ನೀಡಿ ಅಸಂಖ್ಯಾತ ಶಿಷ್ಯವೃಂದದವರನ್ನು ಸಂಪಾದಿಸಿಕೊಂಡಿದ್ದಾರೆ ಅಂದು ಅವರು ಪಟ್ಟ ಶ್ರಮ ಸಾರ್ಥಕವಾಗಿದೆ ಎಂದರು.
ನಾಟ್ಯನಿಕೇತನದ ಹಿರಿಯ ವಿದ್ಯಾರ್ಥಿ ಸುರತ್ಕಲ್ ನಾಟ್ಯಾಂಜಲಿಯ ನಿರ್ದೇಶಕ ಚಂದ್ರಶೇಖರ ನಾವಡ ಅಭಿನಂದನಾ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಪ್ರತಿಭಾನ್ವಿತ ಬಹುಮುಖ ಕಲಾವಿದರಾದ ಮನುಜ ನೇಹಿಗ, ಸುಮುಖ ಕಾರಂತ್, ವಂಶಿ ರತ್ನಕುಮಾರ್, ಅನನ್ಯಾ ಐತಾಳ್, ಪೂರ್ವಿ ಕೆ.ರಾವ್ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು.
ಆನಂದಾಶ್ರಮ ಪ್ರೌಢಶಾಲಾ ನಿವೃತ್ತ ಶಿಕ್ಷಕಿ ಸರೋಜ ಕುಮಾರಿ ಸ್ವಾಗತಿಸಿದರು. ನಾಟ್ಯನಿಕೇತನದ ನಿರ್ದೇಶಕಿ ವಿದುಷಿ ರಾಜಶ್ರೀ ಉಳ್ಳಾಲ್ ಪ್ರಸ್ತಾವನೆಗೈದರು. ಸಂತ ಸೆಬೆಸ್ಟಿಯನ್ನರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರ್ವಹಿಸಿದರು. ಸರಕಾರಿ ಪ್ರೌಢಶಾಲೆ ಮೂಡುಶೆಡ್ಡೆ ಇಲ್ಲಿ ಶಿಕ್ಷಕಿ ಗಾಯತ್ರಿ ರಾಧಾಕೃಷ್ಣ ವಂದಿಸಿದರು.