Site icon Ullalavani

ವಿದ್ಯಾರ್ಥಿಗಳು ಮೊಬೈಲ್‍ನಿಂದ ದೂರವಿದ್ದು ಶಿಕ್ಷಣಕ್ಕೆ ಒತ್ತುಕೊಡಿ: ಯು.ಟಿ.ಖಾದರ್

UN NETWORKS

ಕೊಣಾಜೆ: ವಿದ್ಯಾರ್ಥಿಗಳು ಮೊಬೈಲ್ ಹಾಗೂ ಟಿವಿಯಿಂದ ದೂರವಿದ್ದು ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡುವುದರೊಂದಿಗೆ ಜೀವನದಲ್ಲಿ ಸಾಧನೆ ಮಾಡಿ ಸತ್ಪ್ರಜೆಯಾಗಿ ರೂಪುಗೊಳ್ಳಬೇಕು ಜೊತೆಗೆ ತಂದೆ ತಾಯಿಂದಿರ ಕನಸನ್ನು ನನಸು ಮಾಡಬೇಕು ಎಂದು ಆಹಾರ ಸಚಿವ ಯು.ಟಿ.ಖಾದರ್ ಅವರು ಹೇಳಿದರು.

ಅವರು ಕೊಣಾಜೆ ಪದವಿನ ದ.ಕ.ಜಿಲ್ಲಾ ಪಂಚಾಯಿತಿ ಸರಕಾರಿ ಪ್ರೌಢಶಾಲೆಯ ಆರ್.ಎಂ.ಎಸ್.ಎ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.ನಾವು ಬಡತನದಲ್ಲಿಯೇ ಹುಟ್ಟಬಹುದು ಆದರೆ ಬಳಿಕ ನಮ್ಮ ಪ್ರಾಮಾಣಿಕ ಸಾಧನೆ, ಪರಿಶ್ರಮದಿಂದ ಉನ್ನತ ಹುದ್ದೆಗಳನ್ನು ಅಲಂಕರಿಸಿ ಅಭಿವೃದ್ಧಿಯನ್ನು ಕಾಣಬಹುದು. ಇದಕ್ಕೆಲ್ಲಾ ಶಿಕ್ಷಣವೇ ನಮಗೆ ಪ್ರೇರಕವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಇಬ್ರಾಹಿಂ ಕೋಡಿಜಾಲ್ ಅವರು, ಇಂದು ಸೌಹರ್ದತೆ, ಸಮನ್ವಯತೆಯ ಸಮಾಜವನ್ನು ನಾವು ಕಟ್ಟಬೇಕಿದೆ. ಆದ್ದರಿಂದ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ನೀತಿ ಮೌಲ್ಯಗಳನ್ನು ತಿಳಿಯಪಡಿಸುವ ಕೆಲಸ ಮಾಡಬೇಕು. ಜೊತೆಗೆ ಸರ್ವಧರ್ಮಗಳ ಉತ್ತಮ ಅಂಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿ ಸಮನ್ವಯತೆಯನ್ನು ಬೆಳೆಸುವ ಕಾರ್ಯ ಆಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಮಹಮ್ಮದ್ ಮೋನು, ಕೊಣಾಜೆ ಪಂಚಾಯಿತಿ ಅಧ್ಯಕ್ಷ ಶೌಕತ್ ಆಲಿ, ಶಾಲಾಭಿವೃದ್ಧಿ ಸಮಿತಿಯ ಅಚ್ಯುತ ಗಟ್ಟಿ, ಪಂಚಾಯಿತಿ ಉಪಾಧ್ಯಕ್ಷೆ ಲಲಿತಾ ಎಸ್.ರಾವ್, ತಾಲೂಕು ಪಂಚಾಯಿತಿ ಸದಸ್ಯೆ ಪದ್ಮಾವತಿ, ಮುತ್ತು ಶೆಟ್ಟಿ, ಪಂಚಾಯಿತಿ ಸದಸ್ಯರಾದ ಪದ್ಮನಾಭ ಗಟ್ಟಿ, ಸುದರ್ಶನ ಭಟ್, ವೇದಾವತಿ ಗಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಗುರುನಾಥ ಭಾಗೇವಾಡಿ, ಉದ್ಯಮಿ ಅಬ್ದುಲ್ ನಾಸೀರ್ ಕೆ.ಕೆ, ಹಸೈನಾರ್, ಅಬ್ದುಲ್ ರಹಿಮಾನ್ ಕೋಡಿಜಾಲ್ ಎ.ಕೆ., ಶಾಲಾ ಮುಖ್ಯೋಪಾಧ್ಯಾಯಿನಿ ಮೀನಾ ಗಾಂವ್ಕರ್ ಮೊದಲಾದವರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ರಾಜೀವ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿಗೆ ಶ್ರಮಿಸಿದ ಇಬ್ರಾಹಿಂ ಕೋಡಿಜಾಲ್ ಅವರನ್ನು ಸನ್ಮಾನಿಸಲಾಯಿತು.

Exit mobile version