UN NETWORKS
ಉಳ್ಳಾಲ: ಉಳ್ಳಾಲ ಸಮುದ್ರ ಕಿನಾರೆಯಲ್ಲಿ ನಡೆಯಲಿರುವ ಬೀಚ್ ಉತ್ಸವವನ್ನು ಉಳ್ಳಾಲ ಉತ್ಸವವಾಗಿ ಆಚರಿಸುವ ಉದ್ದೇಶವಿದ್ದು, ಸರ್ವಧರ್ಮೀಯರ ಸಹಕಾರದಿಂದ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಮೊಗವೀರ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ವಜ್ರ ಮಹೋತ್ಸವ ಸಮಿತಿಯ ಮನೋಜ್ ಸಾಲ್ಯಾನ್ ಹೇಳಿದ್ದಾರೆ.
ಬೀಚ್ ಉತ್ಸವದ ಅಂಗವಾಗಿ ಸ್ವಚ್ಛ ಭಾರತ ಕಾರ್ಯಕ್ರಮ ಫೆ.28 ರಂದು ನಡೆಯಲಿದ್ದು, ಇದರಲ್ಲಿ ಸ್ಥಳೀಯ ಸಂಘಟನೆಗಳು ಭಾಗವಹಿಸುವ ಭರವಸೆಯನ್ನು ನೀಡಿದರು. ಸ್ಥಳೀಯ ಮಹಿಳೆಯರಿಗೆ, ಪುರುಷರಿಗೆ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ದೋಣಿ ಚಲಾಯಿಸುವ ಸ್ಪರ್ಧೆ, ಮಡಕೆ ಒಡೆಯುವುದು, ಬಲೆ ಬೀಸುವ ಸ್ಪರ್ಧೆ, ಬೀಚ್ ತ್ರೋಬಾಲ್ ಪಂದ್ಯಾಟ, ಮೀನು ಹಿಡಿಯುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಎಲ್ಲರೂ ಬೀಚ್ ಉತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬೆಂಬಲ ಸೂಚಿಸುವಂತೆ ತಿಳಿಸಿದರು. ಹಿಂದಿನ ಬೀಚ್ ಉತ್ಸವದ ಯಶಸ್ಸನ್ನು ಗಮನದಲ್ಲಿಟ್ಟುಕೊಂಡು, ಉತ್ಸವದಲ್ಲಿ ಲಕ್ಷಾಂತರ ಮಂದಿ ಜಮಾಯಿಸುವ ಹಿನ್ನೆಲೆಯಲ್ಲಿ ವಾಹನಗಳಿಗೆ ಆರು ಜಾಗಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಅದರಲ್ಲಿ ವಿಐಪಿ, ವಿವಿಐಪಿ ಪಾಸ್ ಗಳನ್ನು ನೀಡಿ ಅದರಂತೆ ಪಾರ್ಕಿಂಗ್ ಕೂಡಾ ಅವಕಾಶ ಕಲ್ಪಿಸುವ ಬಗ್ಗೆ ಚರ್ಚೆ ನಡೆಯಿತು. ಅಲ್ಲದೆ ಪೊಲೀಸರ ಸಭೆ, ಸೆಕ್ಯುರಿಟಿ ನೇಮಕ, ವಾಲಂಟಿಯರ್‍ಗಳ ಕಾರ್ಯಗಳ ಕುರಿತ ಪ್ರಸ್ತಾಪವೂ ಸಭೆಯಲ್ಲಿ ನಡೆಯಿತು.
ಸಭೆಯಲ್ಲಿ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಧು ಕುಮಾರ್, ವೀರಾಂಜನೇಯ ಸಂಘದ ಅಧ್ಯಕ್ಷ ಚಂದ್ರ ಶ್ರೀಯಾನ್, ಉಳ್ಳಾಲ ಮಹಿಳಾ ಸೇವಾ ಸಂಘದ ಭಾರತಿ, ಉಳ್ಳಾಲ ನಗರಸಭೆ ಸದಸ್ಯೆ ಮೀನಾಕ್ಷಿ ಬಂಗೇರ, ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ವಜ್ರ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ದೇವದಾಸ್ ಪುತ್ರನ್, ವಿದ್ಯಾರಣ್ಯ ಕಲಾವೃಂದದ ಅಧ್ಯಕ್ಷ ಚೂಡಪ್ಪ, ಅಯ್ಯಪ್ಪ ಮಂದಿರ ಅಧ್ಯಕ್ಷ ಲತೇಶ್, ಮೊಗವೀರಪಟ್ನ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಪ್ರೀತಂ, ಸೋಲಾರ್ ಕ್ಲಬ್ ಅಧ್ಯಕ್ಷ ಹನೀಫ್ , ವೀರ ಮಾರುತಿ ಸಂಘದ ಕಾರ್ಯದರ್ಶಿ ಯಶವಂತ ಪಿ.ಅಮೀನ್, ಮಾರುತಿ ಯುವಕ ಮಂಡಲದ ಉಪಾಧ್ಯಕ್ಷ ಹರೀಶ್ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು. ರಾಜೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.