Site icon Ullalavani

ಕುಡಿಯುವ ನೀರಿಗೆ ರಾಜ್ಯ ಸರಕಾರದಿಂದ ಯಾವುದೇ ಅನುದಾನವಿಲ್ಲ :ಸತೀಶ್ ಕುಂಪಲ

ಹರೇಕಳ : ಕುಡಿಯುವ ನೀರಿಗೆ ಸರಕಾರ ಪಂಚಾಯಿತಿಗೆ ಯಾವುದೇ ರೀತಿಯ ಅನುದಾನ ಬಿಡುಗಡೆ ಆಗದಿರುವುದರಿಂದ ವಿಷಮ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಿಂದಾಗಿ ಜಿಲ್ಲಾ ಪಂಚಾಯಿತಿ ಸಾರ್ವಜನಿಕರ ಯಾವುದೇ ಬೇಡಿಕೆಗಳಿಗೆ ಸ್ಪಂದಿಸುವ ಸ್ಥಿತಿಯಲ್ಲಿ ಇಲ್ಲ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ ಅಭಿಪ್ರಾಯಪಟ್ಟರು.
ಹರೇಕಳ ಗ್ರಾಮದ ಹೊರಪಾದೆಯಿಂದ ಉಳಿದೊಟ್ಟು ಕೊಡಮಣಿತ್ತಾಯ ದೈವಸ್ಥಾನ ಸಂಪರ್ಕಿಸುವ ರಸ್ತೆ ಕಾಂಕ್ರಿಟೀಕರಣಕ್ಕೆ ಮಂಗಳವಾರದಂದು ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.


ಕಳೆದ ವರುಷದ ನೀಡಿದ ಅನುದಾನದ ಶೇ. 50ರಷ್ಟನ್ನೂ ಈ ಬಾರಿ ಸರಕಾರ ಜಿಲ್ಲಾ ಪಂಚಾಯಿತಿಗೆ ನೀಡಿಲ್ಲ. ಸರಕಾರ ತಕ್ಷಣವೇ ಜಿಲ್ಲಾ ವ್ಯಾಪ್ತಿಯಲ್ಲಿ ತ್ವರಿತ ರೀತಿಯಲ್ಲಿ ಪರಿಹಾರ ಬಿಡುಗಡೆ ಮಾಡಬೇಕು. ಗ್ರಾಮೀಣ ಪ್ರದೇಶದ ರಸ್ತೆಯ ಅಭಿವೃದ್ಧಿ ಹಾಗೂ ಗ್ರಾಮದ ಎಲ್ಲ ಭಾಗದಲ್ಲೂ ಅಭಿವೃದ್ಧಿಗಾಗಿ ಹಣ ಬಿಡುಗಡೆ ಮಾಡಬೇಕು. ಗ್ರಾಮ ಪಂಚಾಯಿತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಪಂಚಾಯಿತಿ ಪರವಾನಗಿ ಕೊಡುತ್ತಿಲ್ಲ. ಹಾಗಾಗಿ ಮನೆ ಮಾಲೀಕರು ಹಾಗೂ ಗುತ್ತಿಗೆದಾರರು ಅನುಮತಿಗಾಗಿ ಅಧಿಕಾರಿಗಳ ಹಿಂದೆ ಓಡಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
ಪರವಾನಗಿ ನೀಡುವುದರ ಸರಕಾರ ಮೇಲ್ಮನವಿ ಸಲ್ಲಿಸಿ ತಕ್ಷಣವೇ ಗ್ರಾಮ ಪಂಚಾಯಿತಿಗಳಲ್ಲಿಯೇ ಹಿಂದಿನಂತೆ ಪರವಾನಗಿ ನೀಡಲು ಅನುಮತಿ ನೀಡುವಂತೆ ಅನುಕೂಲ ಮಾಡಿಕೊಡಬೇಕು. ಈ ಸಮಸ್ಯೆಯನ್ನು ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿದೆ. ತ್ವರಿತಗತಿಯಲ್ಲಿ ಸಮಸ್ಯೆ ನಿವಾರಣೆ ಆಗಿದಿದ್ದರೆ ಸಮಸ್ಯೆ ಉಲ್ಬಣವಾಗಲಿದೆ. ಸರಕಾರ ಮಧ್ಯೆ ಪ್ರವೇಶಿಸಿ ಗ್ರಾಮ ಪಂಚಾಯಿತಿಗೆ ಇರುವ ಅಧಿಕಾರವನ್ನು ಪಂಚಾಯಿತಿ ನಿರ್ವಹಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಹರೇಕಳ, ಮಂಗಳೂರು ವಿಧಾನ ಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಕ್ಷೇತ್ರ ಸಮಿತಿ ಕಾರ್ಯದರ್ಶಿ ಯಶವಂತ ಅಮೀನ್, ಹರೇಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‍ದಾಸ್ ಶೆಟ್ಟಿ, ಮಾಜಿ ಅಧ್ಯಕ್ಷ ಶಾಲಿಹ್, ಸದಸ್ಯ ಅಕ್ಬರ್ ಅಲಿ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಜಯರಾಮ ಗಟ್ಟಿ, ಭಾಸ್ಕರ ರೈ ಸಂಪಿಗೆದಡಿ, ರಾಮಣ್ಣ ರೈ ಕುಕ್ಕಿಲ, ಶ್ರೀಧರ, ರವೀಂದ್ರ ವರೇಕಳ, ದಾಮೋದರ್ ಪೂಜಾರಿ ಉಪಸ್ಥಿತರಿದ್ದರು

Exit mobile version