Site icon Ullalavani

ಸಮಾಜಕ್ಕೆ ಒಳಿತಾಗುವ ಕಾರ್ಯಗಳನ್ನು ಮಾಡುವ ಮೂಲಕ ಬದುಕನ್ನು ಸಾರ್ಥಕಗೊಳಿಸಲು ಸಾಧ್ಯ

ತಲಪಾಡಿ : ನಮ್ಮಿಂದ ಸಮಾಜಕ್ಕೆ ಒಳಿತಾದರೆ ಮಾತ್ರ ಬದುಕು ಸಾರ್ಥಕ. ನಮ್ಮಲ್ಲಿರುವ ಇಚ್ಛಾಶಕ್ತಿ, ಕ್ರಿಯಾಶಕ್ತಿಗಳಿಂದ ಸಮಾಜಕ್ಕೆ ಒಳಿತನ್ನೇ ಮಾಡಬೇಕು. ಕ್ಷೇತ್ರವೊಂದರ ಬ್ರಹ್ಮಕಲಶಾಭಿಷೇಕದಿಂದ ಹೇಗೆ ದೇವಸ್ಥಾನ ಪಾವಿತ್ರ್ಯವಾಗುವುದು ಅದೇ ರೀತಿ ನಮ್ಮ ಅಂತರಂಗ ಶುದ್ಧಿಯಾದರೆ ಮಾತ್ರ ನಮ್ಮ ಬದುಕು, ಪರಿಸರ, ಸಮಾಜವನ್ನು ಸದೃಢವಾಗಿಡಲು ಸಾಧ್ಯ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಸಾದ್ವಿ ಮಾತಾನಂದಮಯಿ ನುಡಿದರು.
ಅವರು ತಲಪಾಡಿ ದೇವಿಪುರದ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರು ಹಾಗೂ ಪರಿವಾರ ದೇವರುಗಳ ಪುನರ್ ಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಏಳನೆಯ ದಿನದ ದಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಪ್ರತಿಯೊಬ್ಬರ ಚಿಂತನೆ ಒಳ್ಳೆಯದ್ದೇ ಆಗಿರಬೇಕು. ಪ್ರತಿಯೊಬ್ಬರು ಒಳ್ಳೆಯದ್ದನ್ನೇ ಬಯಸಬೇಕು. ದೇವಾರಾಧಾನೆ, ಸಮಾಜಸೇವೆ, ಅಶಕ್ತರಿಗೆ ಸಹಾಯ ಮಾಡುವುದು ನಮ್ಮ ಬದುಕಿನಲ್ಲಿ ಸಂತಸ ಕೊಡುತ್ತದೆ. ಅದು ಇತರರಿಗೆ ಮಾದರಿ ಆಗುತ್ತದೆ. ಒಟ್ಟಿನಲ್ಲಿ ನಮ್ಮಿಂದ ಸಮಾಜಕ್ಕೆ ಒಳ್ಳೆಯದ್ದೇ ಆಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸಗೈದ ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಆಶಾ ಜ್ಯೋತಿ ರೈ ಅವರು ಮಾತೆಯಂದಿರು ಹಿಂದೂ ಮಹಿಳೆಯಲ್ಲಿರಬೇಕಾದ ಅತಿ ಮುಖ್ಯ ಗುಣ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಮೈಗೂಡಿಸಿಕೊಂಡರೆ ಮಾತ್ರ ತಮ್ಮ ಮಕ್ಕಳಿಗೆ ಉತ್ತಮ ಗುಣನಡತೆಗಳನ್ನು ಹೇಳಿಕೊಡಲು, ಪಾಲಿಸಲು ಸಾಧ್ಯ ಎಂದು ಹೇಳಿದರು.

ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ದೇವಚಿಂತನೆಗೆ ಅವಕಾಶ ಕೊಡುತ್ತದೆ. ನಮ್ಮ ಬದುಕಿನಲ್ಲಿ ಅನ್ಯೋನ್ಯತೆ ಮುಖ್ಯ. ಮನಸ್ಸು ಮನಸ್ಸಿನ ನಡುವೆ ಒಳ್ಳೆಯ ಸಂಬಂಧ ಬೆಸೆಯಬೇಕು. ಹಾಗಾದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ನುಡಿದರು.

ಕರ್ನಾಟಕ ಬಾಲಭವನ ಸೊಸೈಟಿ ಮಾಜಿ ಅಧ್ಯಕ್ಷೆ ಸುಲೋಚನಾ ಕೆ.ಭಟ್ ಮಾತನಾಡಿ ಮಕ್ಕಳಿಗೆ ಉತ್ತಮ ಸಂಸ್ಕಾರ ಹೇಳಿಕೊಟ್ಟರೆ ಮಾತ್ರ ಮುಂದಿನ ದಿನಗಳಲ್ಲಿ ಹಿಂದುತ್ವ ಪ್ರತಿಪಾದಿಸಲು ಸಾಧ್ಯ. ಇಲ್ಲದಿದ್ದರೆ ಹಿಂದು ಸಮಾಜ ನಮ್ಮ ಕಣ್ಣಮುಂದೆಯೇ ಅಧಪತನದತ್ತ ಸಾಗುವುದು ನೋಡಲಸಾಧ್ಯ ಎಂದರು.
ಮಂಗಳೂರಿನ ಹೋಟೆಲ್ ದೀಪ ಕಂಫಟ್ರ್ಸ್ ಉರ್ಮಿಳಾ ರಮೇಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.

ಪುತ್ತೂರಿನ ಶಾಸಕಿ ಶಕುಂತಳಾ ಶೆಟ್ಟಿ , ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ಆಶಾ ಪ್ರಸಾದ್ ರೈ, ಗೀತಾ ವಿ. ದೇವಾಡಿಗ ಕಲ್ಯಾಣಪುರ, ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ಕೌನ್ಸಿಲರ್, ಸೋಮೇಶ್ವರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಮೊಕ್ತೇಸರರಾದ ಗುಣವತಿ ಆಚಾರ್ಯ ಹಾಗೂ ದೇವಿಪುರ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‍ನ ಪ್ರಾಂಶುಪಾಲೆ ಸುಷ್ಮಾ ದಿನಕರ್ ಉಪಸ್ಥಿತರಿದ್ದರು.

ಮಾತೃಮಂಡಳಿ ಅಧ್ಯಕ್ಷೆ ತಲಪಾಡಿ ದೊಡ್ಡಮನೆ ಲತಾ ಎಸ್.ರೈ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಂಜುಳಾ ಶೆಟ್ಟಿ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು. ದೇವಿಪುರ ಸುಜಾತಾ ಕರುಣಾಕರ ದೇವಾಡಿಗ ವಂದಿಸಿದರು.

Exit mobile version