UN NETWORKS
ಕೊಣಾಜೆ: ಸನಾತನ ಹಿಂದೂ `ಧರ್ಮದ ಕೇಂದ್ರವಾಗಿರುವ ಭಾರತ ಪ್ರಪಂಚಕ್ಕೆ ದೇವರ ಕೋಣೆಯಾದರೆ ಭಾರತ ದೇಶದ ಮಣ್ಣಿನ ಪ್ರತೀ ಕಣಕಣದಲ್ಲಿ ದೇವರನ್ನು ಪೂಜಿಸುವುದರಿಂದ ಇಲ್ಲಿನ ಆಲಯಗಳು, ಧಾರ್ಮಿಕ ಕೇಂದ್ರಗಳು ದೇಶದ ದೇವರಕೋಣೆಯಾಗಿದ್ದು, ಇಲ್ಲಿ ಹಿಂದೂ ಧರ್ಮದ ವಿಚಾರವನ್ನು ಜನರಿಗೆ ಪಸರಿಸುವ ಕಾರ್ಯ ಮಾಡಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮಾನಾಥ್ ಕೋಟ್ಯಾನ್ ಅಭಿಪ್ರಾಯಪಟ್ಟರು.
ಪ್ರಕೃತಿಯಲ್ಲಿ ದೇವರನ್ನು ಕಾಣುವ ಸಮಾಜವಿದ್ದರೆ ಅದು ಹಿಂದೂ ಸಮಾಜ. ನಂಬಿಕೆಯೇ ದೇವರು ಎನ್ನುವ ನಾವು ಸತ್ಯನಾರಾಯಣ ಪೂಜೆಯಂತಹ ಕಾರ್ಯಕ್ರಮಗಳು ನಮ್ಮ ಸಂಘಟನೆಯನ್ನು ಬಲಪಡಿಸಲು ಪೂರಕವಾಗಿದ್ದು, ಈ ಮೂಲಕ ಸಮಾಜಕ್ಕೆ ಮತ್ತು ಮುಂದಿನ ಪೀಳಿಗೆಗೆ ಸಂಸ್ಕಾರವನ್ನು ನೀಡುವ ಕಾರ್ಯ ಸಾಧ್ಯ ಎಂದರು.
ದ.ಕ. ಜಿಲ್ಲಾ ಬಿಜೆಪಿ ಕಾರ್ಯದರ್ಶಿ ನಮಿತಾ ಶ್ಯಾಮ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಯುವಜನರು ಸಂಘಟಿತರಾಗಿ ಕಾರ್ಯ ನಿರ್ವಹಿಸಿದರೆ ಈದೇಶದಲ್ಲಿರುವ ಪಿಡುಗನ್ನು ದೂರಮಾಡಲು ಸಾಧ್ಯ ಈ ನಿಟ್ಟಿನಲ್ಲಿ ದಕ್ಷ ಯುವಬಳಗದಂತಹ ಸಂಘಟನೆ ದುಶ್ಚಟಗಳ ವಿರುದ್ಧ ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ನಡೆಸಬೇಕು ಎಂದ ಅವರು ಭಜನೆಯೊಂದಿಗೆ ಗೋವಿನ ರಕ್ಷಣೆಗೆ ಇಂದಿನ ಯುವಜನತೆ ಕಟಿಬದ್ಧರಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಚಲನಚಿತ್ರ ನಟ ಹಾಗೂ ರಂಗ ಕಲಾವಿದ ಪ್ರದೀಪ್ ಅಳ್ವ ಮಾತನಾಡಿ ಕಳೆದ ಹಲವು ವರ್ಷಗಳಿಂದ ದಕ್ಷ ಯುವಬಳಗ ಈ ಪ್ರದೇಶದಲ್ಲಿ ಧಾರ್ಮಿಕವಾಗಿ, ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದು, ಇಲ್ಲಿನ ಯುವಜನತೆ ಇತರರಿಗೆ ಮಾದರಿಯಾಗಿದ್ದಾರೆ. ಇಂತಹ ಕಾರ್ಯ ಮುಂದುವರೆಸಿಕೊಂಡು ಹೋಗುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆಯಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಹರೇಕಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಾಬಲ ಹೆಗ್ಡೆ, ತೊಕ್ಕೊಟ್ಟು ಭುವನ್ ಕನ್‍ಸ್ಟ್ರಕ್ಷನ್‍ನ ಮಾಲಕ ಸುಂದರ ಗಟ್ಟಿ ಅಂಬಾವನ ತೊಕ್ಕೊಟ್ಟು, ಹೀಲ್ಸ್ ಮಂಗಳೂರು ಇದರ ಉಪಾಧ್ಯಕ್ಷ ಹಾಗೂ ಜೆ.ಕೆ. ಪ್ರಿಂಟರ್‍ನ ಮಾಲಕ ಅಜಿತ್, ಕೋಟಿಪದವು ಶ್ರೀರಾಮ ಮಂದಿರದ ಅಧ್ಯಕ್ಷ ವಿಶ್ವನಾಥ ಗಟ್ಟಿ ಕೋಟಿಪದವು, ದಕ್ಷ ಯುವ ಬಳಗದ ಗೌರವಾಧ್ಯಕ್ಷ ಜಗದೀಶ್ ಭಂಡಾರಿ, ದಕ್ಷ ಯುವ ಬಳಗದ ಅಧ್ಯಕ್ಷ ನವೀನ್ ಆಚಾರ್ಯ ಅಂಗಡಿಕೆರೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಭಾಗವತ ಪ್ರದೀಪ್ ಗಟ್ಟಿ ಕಂಬ್ಲಪದವು ಇವರಿಗೆ ಗ್ರಾಮ ಗೌರವ ನೀಡಿ ಸನ್ಮಾನಿಸಲಾಯಿತು.
ಗೌರವ ಸಲಹೆಗಾರ ನಾರಾಯಣ ಬೀಜಗುರಿ ಸ್ವಾಗತಿಸಿದರು. ಗೌರವ ಸಲಹೆಗಾರ ಡಾ| ನವೀನ್ ಎನ್. ಕೊಣಾಜೆ ಕಾರ್ಯಕ್ರಮ ನಿರ್ವಹಿಸಿದರು. ಪ್ರ. ಕಾರ್ಯದರ್ಶಿ ಪುರುಷೋತ್ತಮ ಗಟ್ಟಿ ವಾರ್ಷಿಕ ವರದಿ ವಾಚಿಸಿದರು. ಸದಸ್ಯ ಕೃಷ್ಣ ಪ್ರಸಾದ್ ವಂದಿಸಿದರು. ಸದಸ್ಯ ರಾಜೇಶ್ ಬೊಸ್ತುಕೋಡಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.