ಉಳ್ಳಾಲ: ನಿವೃತ್ತಿ ಬಳಿಕ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರು ಸರಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ, ಇದನ್ನು ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನೌಕರರು ತಮ್ಮ ಸೇವಾವಧಿಯಲ್ಲಿ ಗಳಿಕೆ ರಜೆ ಪಡೆಯದೆ ಉಳಿಸಿಕೊಂಡು ಕಾರ್ಯ ನಿರ್ವಹಿಸಿ ನಿವೃತ್ತಿ ಅಂಚಿನಲ್ಲಿ ಸೌಲಭ್ಯವನ್ನು ಪಡೆಯುತ್ತಾ ಬಂದಿದ್ದರು. ಆದರೆ ಕಳೆದ ಹತ್ತು ತಿಂಗಳಿನಿಂದ ನಿವೃತ್ತರಾದ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಈ ಸೌಲಭ್ಯಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸಿದಾಗ ಅನುದಾನದ ನೆಪಹೇಳಿ ಜಿಲ್ಲಾ ಖಜಾನೆಯಿಂದ ಹಿಂತಿರುಗಿಸಲಾಗುತ್ತದೆ. ಇದು ಕೇವಲ ಅನುದಾನಿತ ಸಿಬಂದಿಗೆ ಮಾತ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ರಾಜ್ಯದ ಮುಖ್ಯಮಂತ್ರಿಗಳಿಗೆ ,ಶಿಕ್ಷಣ ಸಚಿವರಿಗೆ ಹಾಗೂ ಶಿಕ್ಷಣ ಇಲಾಖೆಯ ಮಖ್ಯ ಕಾರ್ಯದರ್ಶಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಳ ಮೂಲಕ ಮನವಿಯನ್ನು ಸಲ್ಲಿಸಲಾಯಿತು . ಅನುದಾನಿತ ಶಿಕ್ಷಕರಿಗಾಗುವ ಸಮಸ್ಯೆಯ ಗಂಭೀರತೆಯನ್ನರಿತ ಜಿಲ್ಲಾಧಿಕಾರಿಗಳು ಕೂಡಲೇ ಸ್ಪಂಧಿಸಿ ಈ ಬಗ್ಗೆ ಸೂಕ್ತ ವ್ಯವಸ್ಥೆ ಮಾಡುವುದಾಗಿ ಸಂಘದ ನಿಯೋಗಕ್ಕೆ ಭರವಸೆ ನೀಡಿದರು.
ಜಾಹೀರಾತು
ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಅಧ್ಯಕ್ಷರಾದ ಕೆ.ಎಂಕೆ ಮಂಜನಾಡಿಯವರ ನೇತೃತ್ವದ ನಿಯೋಗದಲ್ಲಿದ್ದ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ರಾಮಚಂದ್ರ ರಾವ್, ಕೋಶಾಧಿಕಾರಿ ಸುಬ್ರಾಯ ಕಾರಂತ ಮಂಗಳೂರು ದಕ್ಷಿಣ ವಲಯದ ಅಧ್ಯಕ್ಷ ಎಂ.ಹೆಚ್.ಮಲಾರ್ ,ಪಾಝಿಲ್ ಉಪಸ್ಥಿತರಿದ್ದರು.